More

    ಸಕ್ಕರೆನಾಡಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ; ಭಾರತ್ ಜೋಡೋ ಯಾತ್ರೆಯಲ್ಲಿ ಜನಸಾಗರ

    ಕೆ.ಎನ್.ರಾಘವೇಂದ್ರ
    ಮಂಡ್ಯ: ಐಕ್ಯತೆಯ ಭಾರತಕ್ಕೆ ಶಾಂತಿಯ ಹೆಜ್ಜೆ ಹೆಸರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ’ ಯಾತ್ರೆಯ 5ನೇ ಹಾಗೂ ಮಂಡ್ಯ ಜಿಲ್ಲೆಯಲ್ಲಿ 2ನೇ ದಿನ ನಿರೀಕ್ಷೆಗೂ ಮೀರಿದ ಯಶಸ್ಸು ಲಭಿಸಿತು. ಇನ್ನು ಮಗನೊಂದಿಗೆ ಸೋನಿಯಾ ಗಾಂಧಿ ಕೂಡ ಹೆಜ್ಜೆ ಹಾಕುವ ಮೂಲಕ ಯಾತ್ರೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ದರು. ಜಿಲ್ಲೆ ಪ್ರವೇಶಿಸಿದ ಮೊದಲ ದಿನ ನಿರೀಕ್ಷೆಯಷ್ಟು ಜನರು ಸೇರಿರಲಿಲ್ಲ ಎನ್ನುವ ಮಾತಿನ ನಡುವೆ, 2 ದಿನಗಳ ದಸರಾ ವಿಶ್ರಾಂತಿ ಬಳಿಕ ಗುರುವಾರ ಮರು ಆರಂಭಗೊಂಡ ಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಮೂಲಕ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಇದರೊಂದಿಗೆ ಸಕ್ಕರೆನಾಡಲ್ಲಿ ಕಾಂಗ್ರೆಸ್ ಭರ್ಜರಿ ಶಕ್ತಿ ಪ್ರದರ್ಶನ ಮಾಡಿತು. ಅಂತೆಯೇ ಸಾಕಷ್ಟು ಶ್ರಮ ವಹಿಸಿದ ಪರಿಣಾಮ ಹಾಗೂ ಜವಾಬ್ದಾರಿ ಹೊತ್ತಿದ್ದವರು ಸರಿಯಾಗಿ ನಿರ್ವಹಣೆ ಮಾಡಿದ ಕಾರಣಕ್ಕೆ ರಸ್ತೆಯುದ್ದಕ್ಕೂ ಕಿ.ಮೀ.ಗಟ್ಟಲೇ ಜನಸಾಗರವೇ ಕಂಡುಬಂತು.

    ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಅವರ ಸಮರ್ಥ ನಾಯಕತ್ವವನ್ನು ಜನ ಜಾತ್ರೆ ಸಾಬೀತು ಮಾಡುವಂತಿತ್ತು. ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಆಗಮಿಸಿದ್ದ ಕಾರ್ಯಕರ್ತರ ಅಬ್ಬರ ಜೋರಾಗಿಯೇ ಇತ್ತು. ಇತ್ತ ಮಹಿಳಾ ಕಾರ್ಯಕರ್ತರ ಸಂಖ್ಯೆಯೂ ಕಡಿಮೆ ಇರಲಿಲ್ಲ.

    ಮಗನೊಂದಿಗೆ ತಾಯಿ ಹೆಜ್ಜೆ

    ಪಾಂಡವಪುರ ತಾಲೂಕು ಬೆಳ್ಳಾಳೆ ಗ್ರಾಮದಿಂದ ಬೆಳಗ್ಗೆ 8.30ಕ್ಕೆ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ವಿ.ಮುನಿಯಪ್ಪ, ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಸೇರಿ ಘಟಾನುಘಟಿ ನಾಯಕರು ಹೆಜ್ಜೆ ಹಾಕಿದರು. ರಾಮನಹಳ್ಳಿ ಬಳಿ ಬರುತ್ತಿದ್ದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಯಾತ್ರೆಯಲ್ಲಿ ಸೇರಿಕೊಂಡು ಮಗನೊಂದಿಗೆ ಹೆಜ್ಜೆ ಹಾಕಿದರು. ಈ ವೇಳೆ ರಸ್ತೆಯ ಇಕ್ಕೆಲದಲ್ಲಿ ನೆರೆದಿದ್ದವರು ಜೈಕಾರ ಹಾಕಿದರು. ರಾಗಾ ಮತ್ತು ಸೋನಿಯಾ ಕೈ ಬೀಸಿ ಸಂತಸ ವ್ಯಕ್ತಪಡಿಸಿದರು. ಜಕ್ಕನಹಳ್ಳಿಗೆ ಬರುತ್ತಿದ್ದಂತೆ ಕಾಫಿ ಕ್ಯಾಂಟೀನ್​ವೊಂದರಲ್ಲಿ ಸ್ವಲ್ಪಹೊತ್ತು ವಿಶ್ರಾಂತಿ ಪಡೆದರು. ಬಳಿಕ ರಾಗಾ ಪಾದಯಾತ್ರೆ ಮುಂದುವರಿದರೆ, ಸೋನಿಯಾಕಾರಿನಲ್ಲಿ ನಾಗಮಂಗಲ ತಾಲೂಕು ಪ್ರವೇಶಿಸುವವರೆಗೂ ತೆರಳಿದರು. ಖರಡ್ಯ ಕೆರೆ ಸಮೀಪಕ್ಕೂ ಸುಮಾರು ಒಂದು ಕಿಮೀ ಮುಂದೆ ಮತ್ತೆ ಸೋನಿಯಾ ಮತ್ತೆ ಪಾದಯಾತ್ರೆಗೆ ಜತೆಯಾದರು. ಈ ವೇಳೆ ತಾಯಿ ಮತ್ತು ಮಗನಿಗೆ ಮಹಿಳೆಯರು ಕುಂಭಮೇಳದ ಸ್ವಾಗತ ನೀಡಿದರು.

    ಈ ಸಂದರ್ಭದಲ್ಲಿ ಬಾಲಕಿಯೊಬ್ಬಳು ಕೆಳಗೆ ಬಿದ್ದಳು. ಅವಳನ್ನು ಹತ್ತಿರಕ್ಕೆ ಕರೆಸಿಕೊಂಡ ಸೋನಿಯಾ ಆಕೆಯನ್ನು ಸಂತೈಸಿದರು. ಮಧ್ಯಾಹ್ನ 12 ಗಂಟೆಗೆ ಚೌಡಗೋನಹಳ್ಳಿ ಸಮೀಪ ವಿಶ್ರಾಂತಿಗೆ ಹಾಗೂ ಭಾಗವಹಿಸಿದ್ದವರಿಗೆ ನಿಗದಿ ಮಾಡಿದ್ದ ಜಾಗಕ್ಕೆ ಪಾದಯಾತ್ರೆ ಆಗಮಿಸಿತು. ಸಂವಾದದ ಬಳಿಕ ಸಂಜೆ 4ಕ್ಕೆ ಪಾದಯಾತ್ರೆ ಮತ್ತೆ ಚಾಲನೆಗೊಂಡು ಮಡಿಕೆಹೊಸೂರಿನಲ್ಲಿ ಅಂತ್ಯವಾಯಿತು.

    ಸುತ್ತಲೂ ಪೊಲೀಸ್ ಕೋಟೆ

    ಪಾದಯಾತ್ರೆಯಲ್ಲಿ ಸೋನಿಯಾ ಭಾಗವಹಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತು. ರಾಹುಲ್ ಹಾಗೂ ಸೋನಿಯಾ ಗಾಂಧಿ ಅಕ್ಕಪಕ್ಕಕ್ಕೂ ಯಾರೂ ಸುಳಿಯಲು ಆಗುತ್ತಿರಲಿಲ್ಲ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ನಡುವೆ ಪೊಲೀಸ್ ಸಿಬ್ಬಂದಿಯೊಬ್ಬರು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ವಣವಾಯಿತು. ಜತೆಗೆ ಮಾಧ್ಯಮದವರು ಪಾದಯಾತ್ರೆಯನ್ನು ಬಹಿಷ್ಕರಿಸಿದರು. ಆದರೆ ಡಿಕೆಶಿ, ಪ್ರಿಯಾಂಕ್ ಖರ್ಗೆ ಸೇರಿ ಹಲವು ನಾಯಕರು ಆಗಮಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾಧ್ಯಮದವರ ಮನವೊಲಿಸಿದರು.

    ಯುವ ರೈತರಿಗೆ ಹೆಣ್ಣು ಸಿಕ್ತಿಲ್ಲ

    ಚೌಡಗೋನಹಳ್ಳಿ ಸಮೀಪ ಆಯೋಜಿಸಿದ್ದ ಸಂವಾದದಲ್ಲಿ ರಾಹುಲ್ ಗಾಂಧಿ ರೈತರು, ಮಹಿಳೆಯರು ಹಾಗೂ ಸಹಕಾರ ಸಂಘಗಳ ಪದಾಧಿಕಾರಿಗಳೊಂದಿಗೆ ಕೆಲವೊತ್ತು ಮಾತುಕತೆ ನಡೆಸಿದರು. ಈ ವೇಳೆ ಬೆಳೆಗಳಿಗೆ ದರ ಸಿಗದಿರುವುದು, ಕಷ್ಟಪಟ್ಟು ಹೈನುಗಾರಿಕೆ ಮಾಡಿದರೂ ಭ್ರಷ್ಟಾಚಾರದಿಂದ ದರ ಕೊಡದೆ ವಂಚಿಸುತ್ತಿರುವ ಹಾಗೂ ರೈತ ಆತ್ಮಹತ್ಯೆ ಕುಟುಂಬದವರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ‘ಯುವ ರೈತರಿಗೆ ಹೆಣ್ಣು ಸಿಕ್ತಿಲ್ಲ’ ಎನ್ನುವ ವಿಷಯವೂ ಪ್ರಸ್ತಾಪವಾಯಿತು. ಇದಕ್ಕೆ ಕೇಳಿ ರಾಗಾ ಆಶ್ಚರ್ಯ ವ್ಯಕ್ತಪಡಿಸಿದರು.

    ಚುಂಚನಗಿರಿಯಲ್ಲಿ ವಾಸ್ತವ್ಯ

    ಮಂಡ್ಯ ಜಿಲ್ಲೆಯಲಿ ಪಾದಯಾತ್ರೆ ಶುಕ್ರವಾರ ಮುಕ್ತಾಯವಾಗಲಿದೆ. ಬೆಳಗ್ಗೆ ಬ್ರಹ್ಮದೇವರಹಳ್ಳಿಯಿಂದ ಚಾಲನೆ ಗೊಳ್ಳಲಿದ್ದು, ಅಂಚೆಭುವನಹಳ್ಳಿ ಮೂಲಕ ಬೆಳ್ಳೂರಿನಲ್ಲಿ ಅಂತ್ಯವಾಗಲಿದೆ. ರಾತ್ರಿ ಆದಿಚುಂಚನಗಿರಿಯಲ್ಲಿ ವಾಸ್ತವ್ಯ ಮಾಡಿ ಮರುದಿನ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತುಮಕೂರು ಜಿಲ್ಲೆಗೆ ಪ್ರವೇಶ ಪಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts