More

    ಹಂಪನೂರಲ್ಲಿ ಸಂಭ್ರಮದ ತೇರು

    ಭರಮಸಾಗರ: ಸಮೀಪದ ಹಂಪನೂರು ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೊಡ್ಡ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

    ಮುಂಜಾನೆ ರಂಗನಾಥಸ್ವಾಮಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ಸಲ್ಲಿಸಿ ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಮೆರವಣಿಗೆ ನಡೆಸಲಾಯಿತು.

    ಅಲಂಕೃತಗೊಂಡಿದ್ದ ದೊಡ್ಡ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಯಿತು. ಮಂಗಳಾರತಿ ನಂತರ ಭಕ್ತರು ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಹರಕೆ ಅರ್ಪಿಸಿದರು. ತೇರಿನ ಮುಂದೆ ಮಾಯಕೊಂಡ, ಹಂಪನೂರು ಗ್ರಾಮಗಳ ಭಕ್ತರು ಬಾಳೆಹಣ್ಣು ರಸಾಯನವನ್ನು ನೈವೇದ್ಯ ಮಾಡಿ ಹರಕೆ ತೀರಿಸಿದರು.

    ರಥದ ಮುಂದೆ ಸಿಂಗರಿಸಿದ ಪಲ್ಲಕ್ಕಿಗಳಲ್ಲಿ ದುರ್ಗಮ್ಮ, ರಾಮೇಶ್ವರಸ್ವಾಮಿ ಎಮ್ಮೇಹಟ್ಟಿ ಚೌಡೇಶ್ವರಿ, ಮಂಡ್ಲೂರು ಗಾಳಿಮಾರಮ್ಮ, ಉರುಸಲಮ್ಮ, ನೀರ್ಥಡಿ ವಿರಳಪ್ಪಸ್ವಾಮಿ ಉತ್ಸವ ಮೂರ್ತಿಗಳನ್ನು ಹೊತ್ತ ಭಕ್ತರು ಸಾಗಿದರು. ಪಂಜು ಬೆಳಕಿನಲ್ಲಿ ರಥ ಮುಂದೆ ಸಾಗುತ್ತಿದ್ದಂತೆ ಭಕ್ತರು ಮೆಣಸು, ಬಾಳೆಹಣ್ಣು, ನಾಣ್ಯಗಳನ್ನು ರಥದ ಎತ್ತರಕ್ಕೂ ತೂರಿ ಭಕ್ತಿ ಸಮರ್ಪಿಸಿದರು.

    ನಂದಿಕೋಲು, ಉರುಮೆ, ಡೊಳ್ಳು, ತಮಟೆ, ಭಜನಾ ತಂಡಗಳು ಮೆರುಗು ತಂದವು. ರಥವನ್ನು ಮೂಲ ರಂಗನಾಥ ಸ್ವಾಮಿ ದೇವಸ್ಥಾನದ ಪಾದಕಟ್ಟೆ ವರೆಗೆ ಎಳೆದೊಯ್ದು ಪುನಃ ರಾಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕರೆತರಲಾಯಿತು.

    ಹೂವಿನ ಹಾರ ಪಟದ ಹರಾಜು ಪ್ರಕ್ರಿಯೆ ನಡೆಯಿತು. ಕೆಲ ಮನೆಗಳ ಮುಂಭಾಗದಲ್ಲಿ ತಂಪು ಪಾನೀಯ, ಕೋಸುಂಬರಿಯನ್ನು ಸಾರ್ವಜನಿಕರಿಗೆ ವಿತರಿಸಿದರು.

    ಶನಿವಾರ ಮಹಾ ನೈವೇದ್ಯ, ಮಂಗಳಾರತಿಯೊಂದಿಗೆ ಹತ್ತು ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts