More

    ಅರಬಗಟ್ಟೆ ಬಸವೇಶ್ವರ ಸ್ವಾಮಿ ಜೋಡಿ ರಥೋತ್ಸವಕ್ಕೆ ಸಾವಿರಾರು ಭಕ್ತರು

    ಹೊನ್ನಾಳಿ: ತಾಲೂಕಿನ ಅರಬಗಟ್ಟೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ಜೋಡಿ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

    ಬೆಳಗ್ಗೆ ಶ್ರೀ ಜೋಡಿ ಬಸವಣ್ಣನಿಗೆ ವಿಶೇಷ ಪೂಜಾ ಕೈಂಕರ್ಯ ನಡೆಸಿದ ನಂತರ ಜೋಡಿ ಬಸವೇಶ್ವರ ದೇವರು, ಬೀರಲಿಂಗೇಶ್ವರ ದೇವರು, ಆಂಜನೇಯ ಸ್ವಾಮಿ, ಮಾದನಬಾವಿ ಗ್ರಾಮದ ಬೀರಲಿಂಗೇಶ್ವರ ಹಾಗೂ ರಂಗಪ್ಪ ದೇವರ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆತಂದು ಜೋಡಿ ರಥಗಳಿಗೆ ಪೂಜೆ ಸಲ್ಲಿಸಲಾಯಿತು.

    ನಂತರ ಗ್ರಾಮದ ಬೂದಿಗೌಡ್ರು ಮತ್ತು ಪಲ್ದಾರ್ ಗೌಡರ ಮನೆಯಿಂದ ಬಲಿ ಅನ್ನದ ಎಡೆಯನ್ನು ತಂದು ರಥಕ್ಕೆ ನೈವೇದ್ಯ ಮಾಡಲಾಯಿತು.

    ಒಂದು ರಥದಲ್ಲಿ ಬಸವೇಶ್ವರ ಮೂರ್ತಿ ಹಾಗೂ ಇನ್ನೊಂದು ರಥದಲ್ಲಿ ಶ್ರೀ ಆಂಜನೇಯ ಸ್ವಾಮಿ ಮೂರ್ತಿ ಕುಳ್ಳಿರಿಸಿ ಮಂತ್ರಘೋಷದೊಂದಿಗೆ ಭಕ್ತರು ತೇರು ಎಳೆದರು. ಮಂಡಕ್ಕಿ, ಮೆಣಸಿನ ಕಾಳು ಜತೆಗೆ ಬಾಳೆಹಣ್ಣು, ತೆಂಗಿನ ಕಾಯಿ ಸಮರ್ಪಿಸಿದರು.

    ಗ್ರಾಮದ ಎಲ್ಲ ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಾಜಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ಮಾಡಲಾಯಿತು.

    ಗುರುವಾರ ಕಂಕಣ ಧಾರಣೆ, ಶುಕ್ರವಾರ ರಾತ್ರಿ ಆನೆ ಉತ್ಸವ, ಶನಿವಾರ ರಾತ್ರಿ ಹೂವಿನ ತೇರಿಗೆ ಕಳಸಾರೋಹಣ, ಶ್ರೀ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts