More

    ಬುದ್ಧ ಪೂರ್ಣಿಮೆಯಂದು ಶ್ರೀಕಂಠನ ಸನ್ನಿಧಿಯಲ್ಲಿ ಭಕ್ತಸಾಗರ

    ನಂಜನಗೂಡು : ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಬುದ್ಧ ಪೂರ್ಣಿಮೆ ಪ್ರಯುಕ್ತ ಗುರುವಾರ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
    ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಬೆಳಗಿನಿಂದ ಸಂಜೆವರೆಗೂ ನಂಜುಂಡೇಶ್ವರನ ಅಂಗಳ ಜನರಿಂದ ತುಂಬಿ ತುಳುಕಿತು. ಹೆಚ್ಚಿನ ಸಂಖ್ಯೆಯ ಜನರು ಬುಧವಾರ ರಾತ್ರಿ ಬಂದು ದೇವಾಲಯದಲ್ಲಿ ವಾಸ್ತವ್ಯ ಹೂಡಿದ್ದರು. ಇದರಿಂದಾಗಿ ದೇವಾಲಯದ ವಸತಿಗೃಹಗಳು ತುಂಬಿ ತುಳುಕಿದ್ದಲ್ಲದೆ ದೇವಸ್ಥಾನದ ಕೈಸಾಲೆ ಹಾಗೂ ಹೊರಾವರಣದಲ್ಲೂ ಜನರು ವಾಸ್ತವ್ಯ ಹೂಡಿ ಗುರುವಾರ ಬೆಳಗ್ಗೆ ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತರ ಸರತಿ ಸಾಲಿನಲ್ಲಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡರು.
    ದೇವಾಲಯದ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಮುಂಜಾನೆ 4 ಗಂಟೆಯಲ್ಲಿ ಸ್ವಾಮಿಗೆ ವಿವಿಧ ಅಭಿಷೇಕ ನೆರವೇರಿಸಿ ವಿವಿಧ ಬಗೆಯ ಪುಷ್ಪಗಳು ಹಾಗೂ ಬಿಲ್ವಪತ್ರೆಯಿಂದ ಸರ್ವಾಲಂಕೃತಗೊಳಿಸಿ ನಂತರ ಮಹಾಮಂಗಳಾರತಿಯೊಂದಿಗೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
    ದೇವಾಲಯದ ಮುಂಭಾಗ ಕೆಲ ಭಕ್ತರು ಉರುಳು ಸೇವೆ ಸಲ್ಲಿಸಿದರೆ ಕೆಲವರು ಮುಡಿ ಕೊಟ್ಟರು. ಇನ್ನು ಸಾಮಾನ್ಯ ಸರತಿ ಸಾಲಿನಲ್ಲಿ ಜನಸಂದಣಿ ತೀರಾ ಹೆಚ್ಚಾಗಿದ್ದರಿಂದ ದೇವರ ದರ್ಶನ ಪಡೆಯಲು 2 ಗಂಟೆ ಸರತಿ ಸಾಲಿನಲ್ಲಿ ಕಾಯಬೇಕಾಯಿತು. ನೂಕುನುಗ್ಗಲಿನಲ್ಲಿ ವಯೋವೃದ್ಧರು ಹಾಗೂ ಮಕ್ಕಳು ಬಳಲಿದರು. ಇದರಿಂದಾಗಿ ಕೆಲ ಭಕ್ತರು 100 ರೂ.ಗಳ ವಿಶೇಷ ದರ್ಶನದ ಟಿಕೆಟ್ ಖರೀದಿಸಿ ದೇವರ ದರ್ಶನ ಪಡೆದುಕೊಂಡರು. ದಾಸೋಹ ಭವನದಲ್ಲೂ ಬೆಳಗ್ಗೆ 11ರಿಂದಲೇ ನಿಂತು ಪ್ರಸಾದ ಸ್ವೀಕರಿಸಿದರು.

    ಸಂಜೆ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಎಳೆಯುವ ಮೂಲಕ ಹುಣ್ಣಿಮೆ ರಥೋತ್ಸವವನ್ನು ಭಕ್ತರ ಸಮ್ಮುಖದಲ್ಲಿ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts