

ಮಾಗೋರ್ವಾ: ಇಂಜುರಿ ವೇಳೆಯ ಕಡೇ ನಿಮಿಷದಲ್ಲಿ ಕೇರಳದ ರಾಹುಲ್ ಕೆಪಿ ನೀಡಿದ ಆಘಾತದಿಂದಾಗಿ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಜಿಎಂಸಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ ತಂಡ 1-2 ರಿಂದ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಶರಣಾಯಿತು. ಈ ಸೋಲಿನೊಂದಿಗೆ ಸತತ 6ನೇ ಪಂದ್ಯದಲ್ಲಿ ಗೆಲುವು ದಾಖಲಿಸಲು ಸುನೀಲ್ ಛೇಟ್ರಿ ಬಳಗ ವಿಫಲವಾಯಿತು.
ಪಂದ್ಯದ 23ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಮೊದಲಾರ್ಧದಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದ್ದ ಬಿಎಫ್ ಸಿ, ಎರಡನೇ ಅವಧಿಯಾಟದಲ್ಲಿ ಆಘಾತ ಎದುರಿಸಿತು. ಪಂದ್ಯ ನಿಗದಿತ ಸಮಯಕ್ಕೆ ಅಂತ್ಯಕ್ಕೆ 1-1 ರಿಂದ ಸಮಬಲಗೊಂಡಿತ್ತು,. ಹೆಚ್ಚುವರಿ 5 ನಿಮಿಷಗಳ ಇಂಜುರಿ ವೇಳೆಯಲ್ಲೂ ಪಂದ್ಯ ಸಮಬಲದಿಂದ ಸಾಗುತ್ತಿದ್ದರೂ ಕಡೆ ನಿಮಿಷದಲ್ಲಿ ಬಿಎಫ್ ಸಿ ಆಟಗಾರರು ಮಾಡಿಕೊಂಡ ಎಡವಟ್ಟಿನ ಲಾಭ ಪಡೆದ ರಾಹುಲ್ ಗೋಲು ದಾಖಳಿಸಿದ ಆಘಾತ ನೀಡಿದರು. ಇದರಿಂದ ಲೀಗ್‌ನಲ್ಲಿ 5ನೇ ಸೋಲು ಕಂಡ ಬಿಎಫ್ ಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕಿಳಿಯಿತು. ಜತೆಗೆ ತಂಡದ ಮುಂದಿನ ಹಾದಿಯೂ ಬಹುತೇಕ ಕಠಿಣಗೊಂಡಿದೆ.
ಮುಂದಿನ ಎದುರಾಳಿ: ಒಡಿಶಾ ಎಫ್ ಸಿ, ಯಾವಾಗ: ಭಾನುವಾರ (ಜ.24).