

ಬೆಂಗಳೂರು: ನಿನ್ನೆ ನಗರದ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಪ್ರತಿಪಕ್ಷಗಳು ಸಭೆ ನಡೆಸಿದ ವೇಳೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಭೇಟಿ ನೀಡಿದ್ದನ್ನು ವಿರೋಧಿಸಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿವೆ.
ಸ್ಪೀಕರ್ ಸ್ಥಾನ ಸಾಂವಿಧಾನಿಕ ಸ್ಥಾನವಾಗಿದ್ದು, ಯಾವುದೇ ಒಂದು ಪಕ್ಷದಲ್ಲಿ ಅವರು ಗುರುತಿಸಿಕೊಳ್ಳುವಂತಿಲ್ಲ. ಆದರೆ, ವಿಪಕ್ಷಗಳ ಸಭೆಯಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆಕ್ರೋಶ ಹೊರಹಾಕಿದ್ದು, ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿವೆ.
ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಹಿ ಹಾಕಿ ವಿಧಾನಸಭೆ ಕಾರ್ಯದರ್ಶಿಗೆ ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿವೆ.
ಊಟಕ್ಕೂ ಬಿಡದೆ ಕಲಾಪ ಮುಂದುವರಿಸಿ ಬಜೆಟ್ ಮೇಲೆ ಚರ್ಚೆಗೆ ಅವಕಾಶ ನೀಡಿದ್ದಕ್ಕೆ ಬಿಜೆಪಿ ಸದಸ್ಯರು ಸ್ಪೀಕರ್ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಪೀಕರ್ ಪೀಠದ ಬಳಿ ಜಮಾಯಿಸಿದ ವಿಪಕ್ಷ ನಾಯಕರು ಹರಿದ ವಿಧೇಯಕಗಳ ಪ್ರತಿಗಳನ್ನು ಎಸೆದರು. ಈ ವೇಳೆ ಸ್ಪೀಕರ್ ಪೀಠದಲ್ಲಿ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಕುಳಿತಿದ್ದರು. ಲಮಾಣಿ ಅವರ ಮುಖದ ಮೇಲೆಯೇ ಬಿಜೆಪಿ ಸದಸ್ಯರು ಹರಿದ ಹಾಳೆಗಳನ್ನು ಎಸೆದರು. ಈ ವೇಳೆ ಮಾರ್ಷಲ್ಗಳು ಸ್ಪೀಕರ್ ರಕ್ಷಣೆಗೆ ಬಂದು ನಿಂತರು. ಬಳಿಕ ಸದನವನ್ನು ಮಧ್ಯಾಹ್ನ 3ಕ್ಕೆ ಮುಂದೂಡಲಾಯಿತು. ಬಿಜೆಪಿ ಸದಸ್ಯರ ಕಿರಿಕಿರಿ ತಡೆಯದೇ ಸದನ ಮುಂದೂಡಲಾಯಿತು.
ಸ್ಪೀಕರ್ ಮೇಲೆ ಪೇಪರ್ ಎಸೆದ ಹಿನ್ನಲೆ ನಾಲ್ವರು ಬಿಜೆಪಿ ಸದಸ್ಯರು ಸಸ್ಪೆಂಡ್ ಆಗುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್)