More

    ಕಡಲೆ ಮಿಶ್ರ ತಳಿ ಬೀಜ ಪೂರೈಕೆ ಆರೋಪ

    ನರೇಗಲ್ಲ: ಸಮೀಪದ ಹಂಚಿನಾಳ ರಸ್ತೆಯ ಜಮೀನುಗಳಿಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಕಡಲೆ ಬೆಳೆ ಪರಿಶೀಲಿಸಿದರು.

    ಪಟ್ಟಣದ ರೈತ ಸಂಪರ್ಕ ಕೇಂದ್ರದಿಂದ ವಿತರಿಸಿದ ಕಡಲೆ ಬೀಜಗಳು ಮಿಶ್ರ ತಳಿಯದ್ದಾಗಿದ್ದು, ಒಂದು ಪ್ಯಾಕೆಟ್​ನಲ್ಲಿ ಎರಡು ತಳಿಯ ಕಡಲೆ ಬೀಜಗಳು ಪೂರೈಕೆಯಾಗಿವೆ. ಇದರಿಂದ ಜಮೀನಿನಲ್ಲಿ ಕಡಲೆ ಗಿಡಗಳ ಬೆಳವಣಿಗೆಯಲ್ಲಿ ವ್ಯತ್ಯಾಸವಾಗಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕಡಲೆ ಬೆಳೆಯನ್ನು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಾವಿತ್ರಿ ಶಿವನಗೌಡ್ರ, ಎಂ.ಎಸ್. ಗಂಗೂರ ಪರಿಶೀಲಿಸಿದರು.

    ರೈತ ಬಾಳಪ್ಪ ಸೋಮಗೊಂಡ ಮಾತನಾಡಿ, 18 ಎಕರೆ ಪ್ರದೇಶದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಿದ ಕಡಲೆ ಬಿತ್ತನೆ ಮಾಡಿದ್ದೇನೆ. ಅದರಲ್ಲಿ ಕೆಲ ಪ್ಯಾಕೆಟ್ ಕಡಲೆಗಳು ಮಿಶ್ರ ತಳಿಯದ್ದಾಗಿದೆ. ಉತ್ತಮ ತಳಿಯ ಬೀಜದ ಗಿಡಗಳು ಎತ್ತರವಾಗಿ ಫಲವತ್ತಾಗಿ ಬೆಳೆದಿವೆ. ಸಾಧಾರಣ ತಳಿಯ ಬೀಜದ ಗಿಡಗಳು ಚಿಕ್ಕದಾಗಿ ಬೆಳೆದಿವೆ. ಇದರಿಂದ ಕೀಟನಾಶಕ ಸಿಂಪಡಣೆ, ಕಟಾವು ಮಾಡಲು ತೊಂದರೆಯಾಗುತ್ತದೆ. ಫಸಲಿನ ಪ್ರಮಾಣವು ಕಡಿಮೆಯಾಗಲಿದೆ. ಕಡಲೆ ಬೀಜ ಪೂರೈಕೆ ಮಾಡುವ ಸಂದರ್ಭದಲ್ಲಿ ಬೀಜಗಳು ಮಿಶ್ರಣವಾಗಿರಬಹುದು. ಬೀಜ ಪೂರೈಕೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಪರಿಹಾರ ನೀಡಲು ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

    ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ ಮಾತನಾಡಿ, ಪ್ರಮಾಣೀಕೃತ ಬೀಜಗಳನ್ನು ಕೇಂದ್ರದ ಮೂಲಕ ವಿತರಿಸಲಾಗಿದೆ. ಬಹುತೇಕ ಎಲ್ಲ ರೈತರ ಕಡಲೆ ಬೆಳೆ ಉತ್ತಮವಾಗಿವೆ. ಪಟ್ಟಣದ ಕೆಲವು ರೈತರ ಬೆಳೆಯ ಬೆಳವಣಿಗೆಯಲ್ಲಿ ವ್ಯತ್ಯಾಸವಾಗಿದೆ. ಈ ಬಗ್ಗೆ ಪರಿಶೀಲನೆ ಕೈಗೊಳ್ಳುವಂತೆ ವಿಜ್ಞಾನಿಗಳಿಗೆ ಮನವಿ ಮಾಡಲಾಗುತ್ತದೆ. ಅವರು ಬಂದು ತಪಾಸಣೆ ಕೈಗೊಂಡು ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಶರಣಪ್ಪ ಧರ್ವಯತ, ಫಕೀರಪ್ಪ ಬಂಬಲಾಪುರ, ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts