More

    ಬಡತನದ ಬೇಗೆಯಲ್ಲಿ ಕರಗುತಿದೆ ಬದುಕು

    ಮನೋಹರ್ ಬಳಂಜ, ಬೆಳ್ತಂಗಡಿ
    ಮಾನಸಿಕ ಅನಾರೋಗ್ಯದಿಂದ ಕತ್ತಲ ಕೋಣೆಯೊಳಗೆ ಬಂಧಿಯಾಗಿರುವ ಪುತ್ರಿ.. ಶಿಕ್ಷಣ ವಂಚಿತರಾಗುವ ಭೀತಿಯಲ್ಲಿರುವ ಇಬ್ಬರು ಮಕ್ಕಳು… ವಯೋವೃದ್ಧ ಇಬ್ಬರು ಹಿರಿಯ ಜೀವಗಳು, ಕಿತ್ತು ತಿನ್ನುವ ಬಡತನ…
    ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಪಂ ವ್ಯಾಪ್ತಿಯ ಸಂಕದಕಟ್ಟೆ ಚೆನ್ನಪ್ಪ ಗೌಡರ ಮನೆ ಸ್ಥಿತಿಯಿದು.
    ಚೆನ್ನಪ್ಪ ಗೌಡ – ಕಮಲಾ ದಂಪತಿಯ ಇಬ್ಬರು ಪುತ್ರಿಯರು ಪತಿಯನ್ನು ಕಳೆದುಕೊಂಡು ಮನೆಯಲ್ಲೇ ಇದ್ದಾರೆ. ಈ ಪೈಕಿ ಓರ್ವ ಪುತ್ರಿ ಮಾನಸಿಕ ಅನಾರೋಗ್ಯದಿಂದ ಕತ್ತಲ ಕೋಣೆಯೊಳಗೆ ಬಂಧಿಯಾಗಿದ್ದಾರೆ. ಬಾಗಿಲು ತೆರೆದರೆ ಹೊರಗೋಡಿ ತಪ್ಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಓಡಿ ಹೋಗುತ್ತಾರೆ. ಉಳಿದವರು ರಾತ್ರಿಯಿಡೀ ಹುಡುಕಾಡಬೇಕಾಗುತ್ತದೆ.
    ಹತ್ತು ವರ್ಷಗಳಿಂದ ಚಿಕಿತ್ಸೆ ನೀಡುತ್ತಿರುವ ವೃದ್ಧ ತಂದೆ ತಾಯಿಗೆ ಒಂದೆಡೆ ಮಗಳ ಆರೋಗ್ಯದ ಚಿಂತೆಯಾದರೆ, ಮತ್ತೊಂದೆಡೆ ಈಕೆಯ ಇಬ್ಬರು ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಆತಂಕ. ಸಾಲ ಮಾಡಿ ಮಗಳಿಗೆ ಚಿಕಿತ್ಸೆ ನೀಡಿದ್ದರೂ ಪ್ರಯೋಜನ ಆಗಿಲ್ಲ. ಕಟ್ಟಿರುವ ಮನೆಯನ್ನೂ ಪೂರ್ತಿ ಮಾಡಲಾರದೆ ಮಳೆಯಿಂದ ರಕ್ಷಣೆಗೆ ಅಲ್ಲಲ್ಲಿ ಟಾರ್ಪಲ್ ಹಾಕಿದ್ದಾರೆ. ಹಿರಿಯರಿಬ್ಬರಿಗೂ ಈಗ ದುಡಿಮೆ ಅಸಾಧ್ಯ. ಇವರೆಲ್ಲರನ್ನೂ ಬೀಡಿಕಟ್ಟಿ ಸಲಹುತ್ತಿರುವುದು ಮತ್ತೋರ್ವ ಪುತ್ರಿ ಪ್ರೇಮಾ.

    ಶಿಕ್ಷಣ ವಂಚಿತರಾಗುವ ಹೆದರಿಕೆ
    ಮಾನಸಿಕ ಅಸ್ವಸ್ಥವಾಗಿರುವ ಮಹಿಳೆಯ ಮಕ್ಕಳಿಬ್ಬರೂ ಕಲಿಕೆಯಲ್ಲಿ ಮುಂದಿದ್ದಾರೆ. ಓರ್ವ ಪಿಯುಸಿ ಶಿಕ್ಷಣಕ್ಕಾಗಿ 40ಕಿ.ಮೀ. ದೂರದಿಂದ ಬೆಳ್ತಂಗಡಿ ಪದವಿಪೂರ್ವ ಕಾಲೇಜಿಗೆ ಬಂದು 385 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಇನ್ನೋರ್ವ ಪುತ್ರ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾನೆ. ಶಿಕ್ಷಣ ಮುಂದುವರಿಸುವ ಆಸೆ ಇದ್ದರೂ ಅಮ್ಮನ ಅನಾರೋಗ್ಯ, ತೀವ್ರ ಬಡತನ ಕನಸಿಗೆ ಅಡ್ಡಗಾಲು ಹಾಕಿದೆ.

    ಪತಿಯನ್ನು ಕಳೆದುಕೊಂಡು, ತಂದೆ ತಾಯಿಯೊಂದಿಗೆ ಬದುಕುತ್ತಿದ್ದೇನೆ. ಅನಾರೋಗ್ಯದಲ್ಲಿರುವ ಸಹೋದರಿ, ಇಬ್ಬರು ಮಕ್ಕಳು, ತಂದೆ, ತಾಯಿ ಎಲರೊಂದಿಗೆ ನಾನು ಜೀವನ ಸಾಗಿಸಬೇಕಿದೆ. ಬೀಡಿ ಕಟ್ಟಿ ಬರುವ ಸಂಪಾದನೆ ಮಾತ್ರ ಆಶ್ರಯ. ಸಹೋದರಿಯ ಮಕ್ಕಳ ಶಿಕ್ಷಣವನ್ನು ಸರ್ಕಾರ ನಿರ್ವಹಿಸಿದರೆ ಸಾಕು.
    ಪ್ರೇಮಾ
    ಅನಾರೋಗ್ಯದಲ್ಲಿರುವ ಮಹಿಳೆಯ ಸಹೋದರಿ

    ನಾನು ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು, 385 ಅಂಕ ಪಡೆದಿದ್ದೇನೆ. ಶಿಕ್ಷಣ ಮುಂದುವರಿಸುವ ಆಸೆ ಇದೆ. ತಾಯಿ ಅನಾರೋಗ್ಯದಲ್ಲಿದ್ದಾರೆ. ಇವರಿಗೆ ಸರ್ಕಾರ ಚಿಕಿತ್ಸೆ ನೀಡಿದರೆ ನಾನು ಉನ್ನತ ಶಿಕ್ಷಣ ಪಡೆದು ನೌಕರಿಗೆ ಸೇರಿ ತಾಯಿಯನ್ನು ಸಲಹುತ್ತೇನೆ.
    ಪುಷ್ಪರಾಜ್
    ಅನಾರೋಗ್ಯದಲ್ಲಿರುವ ಮಹಿಳೆಯ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts