ಮೈಸೂರು: ಗಂಡಿನಿಗೆ ವಿಚ್ಛೇದನ ನೀಡಿದ ಮಹಿಳೆಯೊಬ್ಬಳು ಆಸ್ತಿಗಾಗಿ ಮಾವನ ವಿರುದ್ಧ ಜಗಳಕ್ಕೆ ನಿಂತ ಘಟನೆ ಮೈಸೂರಿನ ರೂಪಾನಗರದಲ್ಲಿ ನಡೆದಿದೆ.
ಮಧ್ಯ ರಾತ್ರಿ ಮನೆಗೆ ಬಂದು ದಾಂಧಲೆ ನಡೆಸಿರುವ ಸೊಸೆಯ ಆರ್ಭಟಕ್ಕೆ ಮಾವನ ಮನೆಯವರು ಅಕ್ಷರಶಃ ಹೈರಾಣಾಗಿದ್ದಾರೆ.
ಅಂದಹಾಗೆ 6 ವರ್ಷದ ಹಿಂದೆ ಕಂಡೆವರಾಮಶೆಟ್ಟಿ ಪುತ್ರ ಶ್ರೀನಿವಾಸ್ ರಾಜ್ ಅವರನ್ನು ಬಳ್ಳಾರಿಯ ಅರುಂಧತಿ ಎಂಬಾಕೆ ವಿವಾಹವಾಗಿದ್ದಳು. ಆದರೆ, ಪತಿ-ಪತ್ನಿಯ ನಡುವೆ ಒಮ್ಮತ ಮೂಡಿರಲಿಲ್ಲ. ಹೀಗಾಗಿ ಅರುಂಧತಿ ಡೈವೋರ್ಸ್ಗಾಗಿ ನ್ಯಾಯಾಲಯದ ಮೊರೆಹೋಗಿದ್ದಳು.
ಇದನ್ನೂ ಓದಿ: ಆನೆಗಳನ್ನು ಕಾಡಿಗಟ್ಟುವಾಗ ಆಕಸ್ಮಿಕವಾಗಿ ಫಾರೆಸ್ಟ್ ವಾಚರ್ ಸಾವು
ವಿಚ್ಛೇದನ ಪಡೆದ ಬಳಿಕವೂ ಜೀವನ ನಿರ್ವಹಣೆಗೆ ಪತಿ ಶ್ರೀನಿವಾಸ ರಾಜ್ ಬಳಿ ಪ್ರತಿ ತಿಂಗಳು ಹಣ ಪಡೆಯುತ್ತಿದ್ದಳು. ಇದೀಗ ಆಸ್ತಿಗಾಗಿ ಅರುಂಧತಿ ಪಟ್ಟು ಹಿಡಿದಿದ್ದು, ಕಳೆದ ಹಲವಾರು ದಿನಗಳಿಂದ ಮನೆಯಲ್ಲಿ ರಂಪಾಟ ಮಾಡುತ್ತಿರುವ ಆರೋಪ ಅರುಂಧತಿ ವಿರುದ್ಧ ಕೇಳಿಬಂದಿದೆ.
ಕೆಲವು ದಿನಗಳ ಹಿಂದೆ ತಂದೆಯನ್ನು ನೋಡಲು ಅರುಂಧತಿ ಬಳ್ಳಾರಿಗೆ ತೆರಳಿದ್ದಳು. ನಿನ್ನೆ ಮಧ್ಯರಾತ್ರಿ ಮಕ್ಕಳ ಸಮೇತ ಮನೆಗೆ ಬಂದು ರಂಪಾಟ ಮಾಡಿದ್ದಾಳೆ. ಟೆರೇಸ್ನಲ್ಲಿದ್ದ ಕೊಠಡಿ ಬಾಗಿಲು ಮುರಿದು ಗೂಂಡಾವರ್ತನೆ ತೋರಿದ್ದಾಳೆ ಎಂದು ಆರೋಪಿಸಲಾಗಿದೆ.
ಇನ್ನು ಅರುಂಧತಿ ಹಾಗೂ ಗುಂಪಿನಿಂದ ನಡೆದ ದೌರ್ಜನ್ಯ ಮೊಬೈಲ್ ಹಾಗೂ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ. ಅರುಂಧತಿ ಆವಾಜ್ಗೆ ಬೆದರಿದ ಮಾವ ಕಂಡೆ ರಾಮಶೆಟ್ಟಿ ಮನೆಯಿಂದ ಹೊರಬರಲೇ ಇಲ್ಲ. ಇದೀಗ ಗಂಡ-ಹೆಂಡತಿ ಜಗಳದಲ್ಲಿ ಮಾವನಿಗೆ ಸಂಕಷ್ಟ ಎದುರಾಗಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಸಾಲೂರು ಮಠಕ್ಕೆ ಎಂ.ನಾಗೇಂದ್ರ ಉತ್ತರಾಧಿಕಾರಿ, ಪಟ್ಟಾಧಿಕಾರ ಮಹೋತ್ಸವ ನಾಳೆ