More

    ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಮತ್ಸೃಕೃಷಿ ಹೆಚ್ಚಳ; ಪ್ರಸಕ್ತ ವರ್ಷ 3.04 ಕೋಟಿ ಮೀನುಮರಿ ವಿತರಣೆ ಗುರಿ

    ಹೀರಾನಾಯ್ಕ ಟಿ.

    ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಮತ್ಸೃಲೋಕ ಹೆಚ್ಚುತ್ತಿದೆ. ತುಂಗಭದ್ರಾ ಜಲಾಶಯ ಹೊಂದಿರುವುದರಿಂದ ಅವಳಿ ಜಿಲ್ಲೆಯಲ್ಲಿ ಮೀನು ಕೃಷಿಗೆ ಒತ್ತು ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮೀನಿನ ಉತ್ಪಾದನೆ ಹಾಗೂ ಮೀನು ಮರಿಗಳ ಹಂಚಿಕೆ ಹೆಚ್ಚಾಗಿದೆ.

    ಇದನ್ನೂ ಓದಿರಿ: ಸಿಹಿನೀರಿನ ಮೀನುಗಾರಿಕೆ ಜಾಗೃತಿ, ಮಾಹಿತಿ, ಪ್ರೇರಣೆ- ಬೂಡಿಯಾರು ಫಾರ್ಮ್‌ನಲ್ಲಿ ಮೀನು ಕೃಷಿ ಕ್ಷೇತ್ರೋತ್ಸವ

    ರೈತರಿಗೆ ಆರ್ಥಿಕ ಲಾಭ

    ಮತ್ಸೃಪ್ರಿಯರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದ್ದು, ಇದರಿಂದ ರೈತರು ಆರ್ಥಿಕ ಲಾಭಗಳಿಸಲು ಸಾಧ್ಯವಾಗುತ್ತಿದೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 100 ಕೆರೆಗಳಲ್ಲಿ ಮೀನು ಕೃಷಿ ಮಾಡಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.

    ಕಳೆದ 2018-19ನೇ ಸಾಲಿನಲ್ಲಿ ಅವಳಿ ಜಿಲ್ಲೆಯಲ್ಲಿ 2.10 ಕೋಟಿ ಮೀನು ಮರಿಗಳನ್ನು ಹಂಚಲಾಗಿತ್ತು. ಆದರೆ ಪ್ರಸಕ್ತ ವರ್ಷ ಮತ್ತಷ್ಟು ಹೆಚ್ಚಾಗಿದೆ. ಮತ್ಸೃ ಪಾಲನೆಗೆ ಮೀನುಗಾರಿಕೆ ಇಲಾಖೆಯ ಕೆರೆಗಳು, ಗ್ರಾಮ ಪಂಚಾಯಿತಿ ಕೆರೆಗಳು, ಖಾಸಗಿ ಕೊಳಗಳಲ್ಲಿ ಮೀನುಮರಿ ಬಿಡಲು ಸಿದ್ಧತೆ ಕೈಗೊಳ್ಳಲಾಗಿದೆ.

    ವರುಣನ ಅಬ್ಬರ ಮುಂದುವರಿದಿದ್ದರಿಂದ ತುಂಗಭದ್ರಾ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಮುಂದೆ ಕೆನಾಲ್‌ಗಳಿಗೆ ನೀರು ಬಿಡುವುದರಿಂದ ಕೆರೆಗಳು ಕೂಡ ಜೀವಕಳೆ ಪಡೆಯಲಿವೆ. ನಂತರದಲ್ಲಿ ಮೀನಿನ ಮರಿಗಳನ್ನು ಬಿಡಲಾಗುತ್ತದೆ.

    ಮೀನಿನ ಮರಿ ಹಂಚಿಕೆ ಹೆಚ್ಚಳ

    ಒಳನಾಡು ಮೀನು ಕೃಷಿಯಲ್ಲಿ ಬಳ್ಳಾರಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಪ್ರತಿವರ್ಷವೂ ಮೀನಿನ ಮರಿ ಹಂಚಿಕೆ ಹೆಚ್ಚಿಸಲಾಗುತ್ತಿದೆ. 2018-19ನೇ ಸಾಲಿನಲ್ಲಿ 2.10 ಕೋಟಿ ಮೀನಿನ ಮರಿ ಬಿಡಲಾಗಿತ್ತು. ಅದರಂತೆ 2019-20ರಲ್ಲಿ 2.0 ಕೋಟಿ, 2020-21ರಲ್ಲಿ 2.17 ಕೋಟಿ, 2021-22ರಲ್ಲಿ 2.46 ಕೋಟಿ ಮರಿ ಬಿತ್ತನೆ ಮಾಡಲಾಗಿದೆ.

    ಪ್ರಸಕ್ತ ವರ್ಷ 2022-23ರಲ್ಲಿ 3.04 ಕೋಟಿ ಮರಿಗಳನ್ನು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿರಿ:ಮೀನು ಮರಿ ಪಾಲನಾ ಘಟಕ

    ಹೆಚ್ಚುತ್ತಿದೆ ಉತ್ಪಾದನೆ

    ಮೀನುಗಾರಿಕೆಯಲ್ಲಿ ಅವಳಿ ಜಿಲ್ಲೆ ಪ್ರಮುಖ ಸ್ಥಾನ ಪಡೆದುಕೊಂಡಿದ್ದು, 2018-19ರಲ್ಲಿ 6,994 ಟನ್ ಮೀನು ಉತ್ಪಾದನೆ ಮಾಡಲಾಗಿತ್ತು. 2019-20ರಲ್ಲಿ 12,085 ಟನ್‌ಗೆ ಹೆಚ್ಚಾಗಿತ್ತು. 2020-21ರಲ್ಲಿ 14,308 ಟನ್, 2021-22ರಲ್ಲಿ 18,870 ಟನ್ ಮೀನು ಉತ್ಪಾದನೆಯಾಗಿದೆ.

    ಕಳೆದ ಐದು ವರ್ಷದ ಹಿಂದೆ ಉತ್ಪಾದನೆಯಾದ ಮೀನಿನ ಪ್ರಮಾಣಕ್ಕಿಂತ ಹೆಚ್ಚಿದ್ದು, ಕಳೆದ ಐದು ವರ್ಷದಲ್ಲಿ ಬರೋಬ್ಬರಿ 11,876 ಟನ್ ಉತ್ಪಾದನೆಯ ಇಳುವರಿ ಹೆಚ್ಚಾಗಿದೆ.

    ತುಂಗಭದ್ರಾ ಜಲಾಶಯ ಇರುವುದರಿಂದ ಹೊಸಪೇಟೆ ತಾಲೂಕಿನಲ್ಲಿ ಅಧಿಕ ಮೀನು ಕೃಷಿ ಮಾಡಲಾಗುತ್ತದೆ. ಅಲ್ಲದೆ ಸಿರಗುಪ್ಪ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಬಳ್ಳಾರಿ ತಾಲೂಕಿನಲ್ಲೂ ಮೀನು ಕೃಷಿ ಮಾಡುವ ರೈತರ ಸಂಖ್ಯೆ ಹೆಚ್ಚಿದೆ.

    ಒಳನಾಡು ಮೀನು ಕೃಷಿಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಪ್ರತಿವರ್ಷವೂ ಮೀನು ಉತ್ಪಾದನೆ ಹೆಚ್ಚಾಗುತ್ತಿದೆ. ಅವಳಿ ಜಿಲ್ಲೆಯಿಂದ ಬೇರೆ ಕಡೆಗಳಿಗೂ ಮೀನು ರಫ್ತು ಮಾಡಲಾಗುತ್ತಿದೆ.
    | ಶಿವಣ್ಣ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ

    ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಮತ್ಸೃಕೃಷಿ ಹೆಚ್ಚಳ; ಪ್ರಸಕ್ತ ವರ್ಷ 3.04 ಕೋಟಿ ಮೀನುಮರಿ ವಿತರಣೆ ಗುರಿ
    ಕಂಪ್ಲಿಯ ರೈತ ಎ.ಸೋಮರಾಜ ಅವರು ಕೊಳದಲ್ಲಿ ಬೆಳೆದ ಮೀನು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts