More

    ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭ- ಡಿಸಿ ಪವನ್‌ಕುಮಾರ್ ಮಾಲಪಾಟಿ ಹೇಳಿಕೆ

    ಬಳ್ಳಾರಿ: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ, ರಾಗಿ ಮತ್ತು ಜೋಳ ಖರೀದಿ ಕೇಂದ್ರಗಳು ತೆರೆದಿದ್ದು, ರೈತರು ಬೆಳೆದ ಬೆಳೆಗಳನ್ನು ನೊಂದಾಯಿಸಿಕೊಳ್ಳಲು ಡಿ.15 ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 2022-23 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ರೈತರು ಬೆಳೆದ ಬೆಳೆಗಳು ಈಗಾಗಲೇ ಕಟಾವು ಪ್ರಕ್ರಿಯೆ ಮುಕ್ತಾಯವಾಗಿದೆ. ಬೆಂಬಲ ಬೆಲೆಯಲ್ಲಿ ಬೆಳೆಗಳನ್ನು ಖರೀದಿಸಲು ರೈತರು ಡಿ.15 ರಿಂದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಖರೀದಿ ಕೇಂದ್ರವಿರುವ ಎಪಿಎಂಸಿಯಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಖರೀದಿ ಪ್ರಕ್ರಿಯೆಯನ್ನು 2023 ರ ಜ.1 ರಿಂದ ಆರಂಭವಾಗಿ 2023 ರ ಮಾರ್ಚ್ ಅಂತ್ಯದವರೆಗೆ ಖರೀದಿ ಮಾಡಲಾಗುತ್ತದೆ. ಇದಕ್ಕೆ ಬೇಕಾದ ನೊಂದಣಿ ಮತ್ತು ಖರೀದಿ ಸಿದ್ದತೆ, ಸಂಗ್ರಹಕ್ಕೆ ಗೊಧಾಮುಗಳನ್ನು ಸಿದ್ದಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಬಳ್ಳಾರಿ, ಕಂಪ್ಲಿ, ಸಂಡೂರು, ಸಿರುಗುಪ್ಪದಲ್ಲಿ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್ ಸೇರಿದಂತೆ 4 ಕೇಂದ್ರಗಳನ್ನು ತೆರೆದಿದ್ದು, ಕುರುಗೋಡಿನ ಎಪಿಎಂಸಿ ಯಾರ್ಡ್‌ನಲ್ಲಿ ಗೋದಾಮುಗಳ ಗುಣಮಟ್ಟ ಮಳಿಗೆಗಳನ್ನು ನೋಡಿಕೊಂಡು ಅಲ್ಲಿಯು ತೆರೆಯುವಂತೆ ನಿರ್ದೇಶಿಸಿದರು.

    ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 2,040 ರೂ., ಗ್ರೇಡ್ ಎ-ಭತ್ತಕ್ಕೆ 2,060 ರೂ., ರಾಗಿಗೆ 3578 ರೂ., ಹೈಬ್ರೀಡ್-ಬಿಳಿ ಜೋಳಕ್ಕೆ 2,970 ರೂ., ಮಾಲ್ದಂಡಿ-ಬಿಳಿ ಜೋಳಕ್ಕೆ 2,990 ರೂ. ಬೆಂಬಲ ಬೆಲೆಗಳಾಗಿವೆ. ನಿರ್ಧರಿಸಿರುವ ಎಪಿಎಂಸಿ ಸ್ಥಳದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಖರೀದಿ ಕೇಂದ್ರಗಳಿಗೆ ನುರಿತ ಗುಣಮಟ್ಟ ಪರೀಕ್ಷಕರನ್ನು ನೇಮಿಸಬೇಕು. ಹಾಗೂ ಗುಣಮಟ್ಟ ಪರಿಶೀಲನೆ ಹೆಸರಲ್ಲಿ ರೈತರಿಗೆ ಯಾವುದೇ ಅನನುಕೂಲವಾಗದಂತೆ ಎಚ್ಚರವಹಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಖರೀದಿ ಪ್ರಕ್ರಿಯೆಗೆ ತಗಲುವ ಎಲ್ಲಾ ವೆಚ್ಚಗಳನ್ನು ಎಪಿಎಂಸಿ ಆವರ್ತ ನಿಧಿಯಿಂದ ಭರಿಸುವುದು. ಪ್ರತಿದಿನ ಖರೀದಿಸುವ ಕೃಷಿ ಉತ್ಪನ್ನಗಳ ವಿವರಗಳನ್ನು ಖರೀದಿ ಏಜೆನ್ಸಿ ಪತ್ರದಲ್ಲಿ ಕೃಷಿ ಉತ್ಪನ್ನ ಖರೀದಿ ವಹಿಯಲ್ಲಿ ದಾಖಲಿಸಬೇಕು ಎಂದು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.

    ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಸುನೀತಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ, ಎಪಿಎಂಸಿಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts