More

    ಬಳ್ಳಾರಿ ನಾಲಾ ಯೋಜನೆಗೆ ಮರುಜೀವ

    ಬೆಳಗಾವಿ: ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಬಳ್ಳಾರಿ ನಾಲಾ ಯೋಜನೆಯ ಅಣೆಕಟ್ಟು, ಕಾಲುವೆಗಳ ನಿರ್ಮಾಣ ಕಾಮಗಾರಿಗೆ ಹತ್ತು ವರ್ಷದ ಬಳಿಕ ಮರುಜೀವ ಬಂದಿದೆ. ಇದರಿಂದ ರೈತಾಪಿ ವಲಯದಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

    2008ರಲ್ಲಿ ಆರಂಭವಾಗಿದ್ದ ಬಳ್ಳಾರಿ ನಾಲಾ ಯೋಜನೆ ಕಾಮಗಾರಿಯು ಅರಣ್ಯ ಭೂಮಿ ಸ್ವಾಧೀನ, ಅನುದಾನ ಕೊರತೆ ಇನ್ನಿತರ ಕಾರಣಗಳಿಂದಾಗಿ 2010ರಲ್ಲಿಯೇ ಮೊಟಕುಗೊಂಡಿದ್ದವು. ಅಲ್ಲದೆ, ನೂರಾರು ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದ ಕಾಲುವೆ ಕಾಮಗಾರಿಯೂ ಪೂರ್ಣಗೊಳ್ಳದೆ ಹಾಳು ಬಿದ್ದಿದ್ದವು. ಇದೀಗ ಸರ್ಕಾರವು ರೈತರ ಕೃಷಿ ಕಾರ್ಯಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಈ ಯೋಜನೆ ಮರು ಆರಂಭಿಸಲು ಮುಂದಾಗಿದೆ.

    ಎನ್‌ಪಿಎ ಶುಲ್ಕ ಪಾವತಿ: ಬಳ್ಳಾರಿ ನಾಲಾ ಯೋಜನೆ ಕೈಗೆತ್ತಿಕೊಳ್ಳಲು 2010 ಏಪ್ರಿಲ್ 20ರಂದು ಅರಣ್ಯ ಇಲಾಖೆಯಿಂದ ಮೊದಲನೇ ಹಂತದ ಅನುಮತಿ ಪಡೆದುಕೊಳ್ಳಲಾಗಿತ್ತು. ಅಲ್ಲದೆ, ಸಿಎ ಭೂಮಿ ಅಭಿವೃದ್ಧಿಪಡಿಸಲು, ಸಂಗ್ರಹವಾದ ನೀರಿನ ಉಪಚಾರಕ್ಕೆ ಮತ್ತು ಎನ್‌ಪಿಎ ಶುಲ್ಕ ರೂಪದಲ್ಲಿ 33.54 ಕೋಟಿ ರೂ.ವನ್ನು ಅರಣ್ಯ ಇಲಾಖೆಗೆ ಪಾವತಿಸಲಾಗಿದೆ.

    ಭೂಮಿ ಹಸ್ತಾಂತರ: ಅರಣ್ಯ ಇಲಾಖೆಯ 269.47 ಹೆಕ್ಟೇರ್ ಭೂಮಿಗೆ ಸಮಾನಂತರವಾಗಿ ಸಿಎ ಭೂಮಿಯನ್ನೂ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ 116.95 ಹೆಕ್ಟೇರ್ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ 64.06 ಹೆಕ್ಟೇರ್ ಸೇರಿದಂತೆ 181.01 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇನ್ನೂ 88.64 ಹೆಕ್ಟೇರ್ ಭೂಮಿ ಹಸ್ತಾಂತರಿಸುವುದು ಬಾಕಿ ಇದ್ದು, ಶೀಘ್ರದಲ್ಲಿಯೇ ಹಸ್ತಾಂತರಿಸಿ ಕಾಮಗಾರಿ ಆರಂಭಿಸುತ್ತೇವೆ ಎಂದು ಜಲಸಂಪನ್ಮೂಲ ಇಲಾಖೆ ಇಂಜಿನಿಯರ್‌ಗಳು ತಿಳಿಸಿದ್ದಾರೆ.

    8,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ: ಬಳ್ಳಾರಿ ನಾಲಾ ನೀರಾವರಿ ಯೋಜನೆ ಅನುಷ್ಠಾನ ಮತ್ತು ಅಣೆಕಟ್ಟು ನಿರ್ಮಾಣದಿಂದಾಗಿ ಬೆಳಗಾವಿ, ಗೋಕಾಕ, ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಒಟ್ಟು 37 ಗ್ರಾಮ ವ್ಯಾಪ್ತಿಯ 8,200 ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದೆ. ಸವದತ್ತಿ ತಾಲೂಕಿನ 22 ಗ್ರಾಮಗಳಲ್ಲಿನ ಮಳೆಯಾಶ್ರಿತ 6,586 ಹೆಕ್ಟೇರ್ ಕೃಷಿ ಭೂಮಿ ನೀರಾವರಿಗೆ ಒಳಪಡಲಿದೆ. ಈಗಾಗಲೆ ಕಾಲುವೆಗಳ ಕಾಮಗಾರಿ ಪ್ರಗತಿ ಹಂತದಲ್ಲಿವೆ.

    ಕೆಲ ಸಮಸ್ಯೆಗಳಿಂದಾಗಿ ಕಾಮಗಾರಿಗಳು ಅರ್ಧದಲ್ಲಿಯೇ ಮೊಟಕುಗೊಂಡಿವೆ. ಅಲ್ಲದೆ, ಈ ಯೋಜನೆಯಿಂದಾಗಿ ಬೆಳಗಾವಿ ತಾಲೂಕಿನ ಕಬಲಾಪುರ, ಸಿದ್ಧನಹಳ್ಳಿ ಹಾಗೂ ಮಾಸ್ತಿಗೊಳಿ ಗ್ರಾಮಗಳು ಸಂಪೂರ್ಣ ಬಾಧಿತವಾಗಿವೆ. ಈ ಗ್ರಾಮಗಳ ಸಮೀಕ್ಷೆ ನಡೆಸಿ ಪುನರ್ವಸತಿ ಕಲ್ಪಿಸಬೇಕು ಎಂದು ಆ ಗ್ರಾಮಗಳ ಜನರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

    ಬಳ್ಳಾರಿ ನಾಲಾ ಯೋಜನೆಯಡಿ ಅಣೆಕಟ್ಟು ನಿರ್ಮಾಣದ ಕುರಿತು ಸ್ಥಳ ಪರಿಶೀಲನೆ ನಡೆಸಿ ಅಂತಿಮಗೊಳಿಸಲಾಗಿದೆ. ಅಲ್ಲದೆ, ಅಣೆಕಟ್ಟು ನಿರ್ಮಾಣಕ್ಕೆ ಬೇಕಾಗಿರುವ ಭೂಮಿ ನೀಡಲು ರೈತರು ಒಪ್ಪಿಗೆ ನೀಡಿದ್ದಾರೆ. ಅರಣ್ಯ ಇಲಾಖೆಯ ಪ್ರದೇಶವೇ ಅಧಿಕ ಪ್ರಮಾಣದಲ್ಲಿರುವ ಹಿನ್ನೆಲೆಯಲ್ಲಿ ಭೂಮಿ ಹಸ್ತಾಂತರ ಸೇರಿ ಇನ್ನಿತರ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಶೀಘ್ರದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.
    |ರಮೇಶ ಜಾರಕಿಹೊಳಿ ಜಲ ಸಂಪನ್ಮೂಲ ಸಚಿವ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts