More

  ಜನರಿಂದ ಕಾಂಗ್ರೆಸ್‌ಗೆ ತಕ್ಕ ಉತ್ತರ

  ಮಳವಳ್ಳಿ: ಸಮಾವೇಶದಲ್ಲಿ ಸೇರಿರುವ ಜನಸಮೂಹ ನೋಡಿದರೆ ಅಧಿಕಾರ, ಹಣಬಲದ ಅಮಲಿನಲ್ಲಿರುವ ಕಾಂಗ್ರೆಸ್‌ಗೆ ಇದರಿಂದ ತಕ್ಕ ಉತ್ತರ ದೊರೆಯುವ ಭರವಸೆ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

  ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್-ಬಿಜೆಪಿ ಮೈತ್ರಿ ಸಮಾವೇಶದಲ್ಲಿ ಮಾತನಾಡಿ, ನನ್ನ ತೆರಿಗೆ ನನ್ನ ಹಕ್ಕು ಎನ್ನುತ್ತಿದ್ದ ಡಿಕೆಶಿ ಈಗ ಸಿಎಂ ಸೀಟ್ ನನ್ನ ಹಕ್ಕು ಎನ್ನಲು ರೆಡಿಯಾಗಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಸಿಎಂ ಸ್ಥಾನಕ್ಕೇರಲು ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

  ಕಾಂಗ್ರೆಸ್ ಸರ್ಕಾರ ಬಂದು 10 ತಿಂಗಳು ಕಳೆದರೂ ರೈತರ ಸಂಕಷ್ಟ ಕೇಳಿಲ್ಲ. ಸುಪ್ರೀಂ ಕೋರ್ಟ್ ನೆಪ ಹೇಳಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿ ರೈತರಿಗೆ ಅನ್ಯಾಯ ಮಾಡಿದಾಗ ಎಲ್ಲಿ ಹೋಗಿತ್ತು ನಿಮ್ಮ ತಾಕತ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿಕಾರಿದರು.
  ಈ ಬರಗಾಲದಲ್ಲಿ ರೈತ ವಿದ್ಯುತ್ ಸಂಪರ್ಕ ಪಡೆಯಲು 3 ಲಕ್ಷ ರೂ. ಕಟ್ಟಬೇಕು. ಇದು ರೈತರಿಗೆ ನ್ಯಾಯ ಕೊಡುವ ಕೆಲಸನಾ? ಅನ್ನದಾತರಿಗೆ ಅನ್ಯಾಯ ಮಾಡುವ ಸರ್ಕಾರ ಯಾವುದಾದರೂ ಇದ್ದರೆ ಅದು ರಾಜ್ಯ ಕಾಂಗ್ರೆಸ್ ಸರ್ಕಾರ. ಬಡವರಿಗೆ ಅಕ್ಕಿ ಕೊಡುತ್ತಿರುವುದು ರಾಜ್ಯ ಸರ್ಕಾರ ಅಲ್ಲ, ನರೇಂದ್ರ ಮೋದಿ ಸರ್ಕಾರ ಎಂದು ಪ್ರತಿಪಾದಿಸಿದರು.

  ಮದ್ಯದ ಬೆಲೆ ಏರಿಸಿ ಗ್ಯಾರಂಟಿ ಕೊಡುತ್ತಿದ್ದಾರೆ. ಗಂಡಸರ ಜೇಬಿಗೆ ಕತ್ತರಿ ಹಾಕಿ ಹೆಂಗಸರ ಅಕೌಂಟ್‌ಗೆ ಹಾಕುತ್ತಿದ್ದಾರೆ. ಬಸ್ ಪ್ರಯಾಣ ದರ ಏರಿಸಿ ಮಹಿಳೆಯರಿಗೆ ಫ್ರೀ ಮಾಡಿದ್ದಾರೆ. ಒಂದು ಕಡೆ ವಿದ್ಯುತ್ ದರ ಏರಿಸಿ ಮತ್ತೊಂದೆಡೆ ಫ್ರೀ ಮಾಡಿದ್ದಾರೆ. ಒಂದು ಕೈಯಲ್ಲಿ ಕಿತ್ತುಕೊಂಡು ಇನ್ನೊಂದು ಕೈಯಲ್ಲಿ ಕೊಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಮುಗ್ಧ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.

  ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಎಚ್.ಡಿ. ದೇವೇಗೌಡರು ದೇಶದ ಹಿತದೃಷ್ಟಿಯಿಂದ ಹಾಗೂ ಕಾವೇರಿ ಸಮಸ್ಯೆ ನಿವಾರಣೆಗಾಗಿ ಮೈಸೂರು ಸಮಾವೇಶದಲ್ಲಿ ಮೈತ್ರಿ ಮಾಡಿಕೊಂಡಿರುವುದಾಗಿ ಘೋಷಣೆ ಮಾಡಿದ್ದಾರೆ. ಏಕೆಂದರೆ ಆಗಿನಿಂದಲೂ ಕಾವೇರಿಗಾಗಿ ಹೋರಾಟ ಮಾಡಿರುವ ನಮ್ಮ ತಂದೆಯವರು ಇದಕ್ಕೊಂದು ತಾರ್ಕಿಕ ಅಂತ್ಯ ಕಂಡುಕೊಳ್ಳಲು ನಿರ್ಧರಿಸಿ ಅವರ 65 ವರ್ಷದ ರಾಜಕಾರಣ ಅನುಭವದಿಂದ ಹೇಳಿದ್ದಾರೆ ಎಂದು ಹೇಳಿದರು.

  ನಮ್ಮ ನೀರು, ನಮ್ಮ ಹಕ್ಕು ಎಂದು ಬೆಂಗಳೂರಿನವರೆಗೆ ಹೋರಾಟ ಮಾಡಿದ ಕನಕಪುರದ ಮಹಾನುಭಾವರು ನನಗೂ ಅವಕಾಶ ಕೊಡಿ, ಪೇಪರ್ ಪೆನ್ನು ಕೊಟ್ಟು ಅಧಿಕಾರ ಕೊಡಿ ಎಂದು ಕೇಳಿದ್ರು. ನೀವು ಪಾಪ ನಮ್ಮವನು ಎಂದು ಅಧಿಕಾರ ಕೊಟ್ರಿ. ಅಧಿಕಾರ ಸಿಕ್ಕ ಕೂಡಲೇ ಈಗ ನಮ್ಮ ನೀರು ತಮಿಳುನಾಡು ಹಕ್ಕು ಎನ್ನುತ್ತಿದ್ದಾರೆ ಎಂದು ಡಿಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

  ದೇವೇಗೌಡರು ಈ ವಯಸ್ಸಿನಲ್ಲೂ ಸಂಸತ್‌ನಲ್ಲಿ ಕಾವೇರಿ ನೀರಿಗಾಗಿ ಧ್ವನಿ ಎತ್ತಿದ್ದಾರೆ. ಈ ಕಾಂಗ್ರೆಸ್‌ನವರು, ಬಿಜೆಪಿಯವರನ್ನು ಮೋದಿ ಭೇಟಿ ಮಾಡಿಸಿ ಎನ್ನುತ್ತಾರೆ. ಆಗಿದ್ದರೆ ನೀವು ಯಾಕೆ ಅಧಿಕಾರಕ್ಕೆ ಬರಬೇಕಿತ್ತು. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಬೇಕಿತ್ತು ಎಂದು ಎಚ್‌ಡಿಕೆ ಕಿಡಿಕಾರಿದರು.

  ಸಂವಿಧಾನವನ್ನು ಯಾರು ಬದಲು ಮಾಡಲು ಆಗಲ್ಲ. ಮೋದಿ ಅವರು ಸಂವಿಧಾನದ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ನಿಜವಾದ ಸಂವಿಧಾನವನ್ನು ನಾಶ ಮಾಡುತ್ತಿರುವವರು ಮತ್ತು ದಲಿತ ವಿರೋಧಿಗಳು ಕಾಂಗ್ರೆಸ್‌ನವರಾಗಿದ್ದು, ಅಪಪ್ರಚಾರಗಳಿಗೆ ಕಿವಿಗೊಡದಿರಿ ಎಂದು ಮನವಿ ಎಂದು ಎಚ್‌ಡಿಕೆ ಮಾಡಿದರು.

  ಕಾಂಗ್ರೆಸ್‌ನವರು ಮಹಿಳೆಯರಿಗೆ 2 ಸಾವಿರ ರೂ. ಕೊಡುತ್ತಾರೆ. ಪುರುಷರ ಬಳಿ 4 ರಿಂದ 6 ಸಾವಿರವನ್ನು ಕಾಂಗ್ರೆಸ್ ಪಿಕ್‌ಪ್ಯಾಕೆಟ್ ಮಾಡ್ತಾ ಇದೆ. ಸಬ್‌ರಿಜಿಸ್ಟರ್ ಕಚೇರಿಯಲ್ಲಿ ಅಪಾರ ದುಡ್ಡು ವಸೂಲಿ ಮಾಡ್ತಾ ಇದ್ದಾರೆ. ಇದನ್ನೇ ತುಮಕೂರಿನಲ್ಲಿ ನಾನು ಹೇಳಲು ಹೊರಟಿದ್ದು, ಆದರೆ ನನ್ನ ಹೇಳಿಕೆಯನ್ನು ತಿರುಚಿ ವಿರೋಧಿಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಆ ವಿಷಯವಾಗಿ ವಿಷಾದವನ್ನು ವ್ಯಕ್ತಪಡಿಸಿದ್ದೇನೆ ಎಂದರು.

  ಮಾಜಿ ಶಾಸಕ ಡಾ.ಕೆ. ಅನ್ನದಾನಿ ಮಾತನಾಡಿ, ಗ್ಯಾರಂಟಿ ಘೋಷಣೆ ಮಾಡಿರೋದು ಬರಿ ಬೋಗಸ್. ದೇಶದಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲ. ಇವತ್ತು ಕಾಂಗ್ರೆಸ್ ಸರ್ಕಾರ ದಲಿತರ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದೆ ಎಂದು ದೂರಿದರು. ಸಮಾವೇಶದಲ್ಲಿ ಮಾಜಿ ಸಚಿವರಾದ ನಾರಾಯಣಗೌಡ, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಎಂಎಲ್ಸಿ ಎಚ್.ವಿಶ್ವನಾಥ್, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಡಿ.ಜಯರಾಮು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಮುಖಂಡರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts