More

    ಕೋಟ್ಲಾ ಸ್ಟೇಡಿಯಂನಿಂದ ತನ್ನದೇ ಹೆಸರು ತೆಗೆಸಲು ಬಿಷನ್ ಸಿಂಗ್ ಬೇಡಿ ಹೋರಾಟ!

    ನವದೆಹಲಿ: ರಾಷ್ಟ್ರ ರಾಜಧಾನಿಯ ಪ್ರತಿಷ್ಠಿ ಕ್ರಿಕೆಟ್ ತಾಣ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸ್ಟಾೃಂಡ್ ಒಂದಕ್ಕೆ ಮಾಜಿ ಸ್ಪಿನ್ ಮಾಂತ್ರಿಕ ಬಿಷನ್ ಸಿಂಗ್ ಬೇಡಿ ಅವರ ಹೆಸರು ಇಡಲಾಗಿದೆ. ಆದರೆ ಇದೀಗ ಸ್ವತಃ ಬಿಷನ್ ಸಿಂಗ್ ಬೇಡಿ ಅವರೇ ಸ್ಟಾೃಂಡ್‌ನಿಂದ ತನ್ನ ಹೆಸರು ತೆಗೆಸಬೇಕೆಂದು ಪಟ್ಟು ಹಿಡಿದಿದ್ದಾರೆ! ಇಲ್ಲದಿದ್ದರೆ ಕಾನೂನು ಕ್ರಮವನ್ನೂ ತೆಗೆದುಕೊಳ್ಳುವುದಾಗಿ ಬಿಷನ್ ಸಿಂಗ್ ಬೇಡಿ ದೆಹಲಿ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ಬೆದರಿಕೆ ಒಡ್ಡಿದ್ದಾರೆ. ಬೇಡಿ ತನ್ನದೇ ಹೆಸರು ತೆಗೆಸಲು ಮುಂದಾಗಿರುವುದಕ್ಕೆ ಅವರ ಪ್ರತಿಭಟನೆಯ ಹೋರಾಟವೇ ಕಾರಣವಾಗಿದೆ.

    ಡಿಡಿಸಿಎ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಪ್ರತಿಮೆಯನ್ನು ಕೋಟ್ಲಾ ಮೈದಾನದಲ್ಲಿ ಸ್ಥಾಪಿಸಲು ಮುಂದಾಗಿರುವುದಕ್ಕೆ ಬಿಷನ್ ಸಿಂಗ್ ಬೇಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ರೂಪದಲ್ಲಿ ಈಗಾಗಲೆ ತಮ್ಮ ಡಿಡಿಸಿಎ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜತೆಗೆ ಕೋಟ್ಲಾ ಕ್ರೀಡಾಂಗಣದ ಪ್ರೇಕ್ಷಕರ ಸ್ಟಾೃಂಡ್ ಒಂದಕ್ಕೆ ಇಡಲಾಗಿರುವ ತನ್ನ ಹೆಸರನ್ನು ಅಲ್ಲಿಂದ ತೆಗೆಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.

    ಇದನ್ನೂ ಓದಿ: ನ್ಯೂಜಿಲೆಂಡ್‌ಗೆ ಬಲ ತುಂಬಿದ ಕೇನ್ ವಿಲಿಯಮ್ಸನ್ 23ನೇ ಶತಕ

    ಡಿಡಿಸಿಎಗೆ ಈಗ ಅರುಣ್ ಜೇಟ್ಲಿ ಅವರ ಪುತ್ರ ರೋಹನ್ ಜೇಟ್ಲಿ ಅಧ್ಯಕ್ಷರಾಗಿದ್ದಾರೆ. ಅವರಿಗೆ 2ನೇ ಬಾರಿ ಪತ್ರ ಬರೆದಿರುವ 74 ವರ್ಷದ ಬಿಷನ್ ಸಿಂಗ್ ಬೇಡಿ, ‘ಅರುಣ್ ಜೇಟ್ಲಿ ಪ್ರತಿಮೆ ಸ್ಥಾಪಿಸುವುದು ಬೇಡ ಎಂದು ನಾನು ನಿಮಗೆ ಪತ್ರ ಬರೆದು ಈಗಾಗಲೆ ಕೆಲವು ದಿನಗಳು ಕಳೆದಿವೆ. ಇದಕ್ಕೆ ನಿಮ್ಮಿಂದ ಇದುವರೆಗೆ ನನಗೆ ಯಾವುದೇ ಉತ್ತರ ಬರದಿದ್ದರೂ, ನನ್ನ ಪತ್ರ ಬಹಿರಂಗಗೊಂಡ ಬಳಿಕ ಜಗತ್ತಿನ ಎಲ್ಲೆಡೆಯಿಂದ ನನಗೆ ಬೆಂಬಲ ದೊರೆತಿದೆ. ತನ್ನ ಹೆಸರನ್ನು ಗೌರವಾರ್ಥ ಎಲ್ಲಿ ಹಾಕಬೇಕೆಂದು ನಿರ್ಧರಿಸುವ ಅಧಿಕಾರ ಈ ದೇಶದಲ್ಲಿ ಈಗಲೂ ಪ್ರತಿ ವ್ಯಕ್ತಿಗೆ ಇದೆ ಎಂದು ನಂಬಿದ್ದೇನೆ. ಹೀಗಾಗಿ ನಾನು ಕಾನೂನು ಹೋರಾಟಕ್ಕೆ ಮುಂದಾಗುವಂತೆ ಮಾಡಬೇಡಿ’ ಎಂದಿದ್ದಾರೆ.

    ಕೋಟ್ಲಾ ಕ್ರೀಡಾಂಗಣದಲ್ಲಿ ಅರುಣ್ ಜೇಟ್ಲಿ ಅವರ 6 ಅಡಿ ಎತ್ತರದ ಪ್ರತಿಮೆಯನ್ನು ಸೋಮವಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅನಾವರಣಗೊಳಿಸಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಉಪಸ್ಥಿತರಿರಲಿದ್ದಾರೆ. ಅರುಣ್ ಜೇಟ್ಲಿ 1999ರಿಂದ 2013ರವರೆಗೆ 14 ವರ್ಷಗಳ ಕಾಲ ಡಿಡಿಸಿಎ ಅಧ್ಯಕ್ಷರಾಗಿದ್ದರು.

    ಇದನ್ನೂ ಓದಿ: ತೆಂಡುಲ್ಕರ್ ಪುತ್ರ ಅರ್ಜುನ್‌ಗೆ ಈ ಬಾರಿ ಮುಂಬೈ ತಂಡದ ಬಾಗಿಲು ತೆರೆಯುವುದು ಡೌಟ್!

    ದೇಶದಲ್ಲಿ ರಾಜಕೀಯ ವ್ಯಕ್ತಿಗಳ ಪ್ರತಿಮೆ ಇರುವ ಯಾವುದೇ ಕ್ರೀಡಾಂಗಣದ ಜತೆಗೆ ಸಂಬಂಧ ಇಟ್ಟುಕೊಳ್ಳಲು ತಾನು ಬಯಸುವುದಿಲ್ಲ ಎಂದು ಬೇಡಿ ಹೇಳಿದ್ದಾರೆ. ಕ್ರಿಕೆಟಿಗರಿಗಿಂತ ಹೆಚ್ಚಾಗಿ ಆಡಳಿತಾಧಿಕಾರಿಗಳಿಗೆ ಡಿಡಿಸಿಎ ಹೆಚ್ಚಿನ ಮನ್ನಣೆ ನೀಡುತ್ತಿರುವುದಕ್ಕೂ ಬೇಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2017ರಲ್ಲಿ ಡಿಡಿಸಿಎ, ಕೋಟ್ಲಾ ಕ್ರೀಡಾಂಗಣದ ಸ್ಟಾೃಂಡ್ ಒಂದಕ್ಕೆ ಬೇಡಿ ಹೆಸರು ಇಟ್ಟಿತ್ತು.

    ಕ್ರಿಕೆಟ್ ಕ್ರೀಡಾಂಗಣದ ಎದುರು ಕ್ರಿಕೆಟ್ ತಾರೆಯರ ಪ್ರತಿಮೆ ಇರಬೇಕು. ಯಾಕೆಂದರೆ ಕ್ರೀಡಾಂಗಣಕ್ಕೆ ಬರುವ ಮಕ್ಕಳು ಕ್ರಿಕೆಟಿಗ ಅಥವಾ ಕ್ರೀಡಾಪಟುವಾಗಲು ಸ್ಫೂರ್ತಿ ತುಂಬುವಂತಿರಬೇಕು. ಅವರ ಹಿರಿಯರು, ಕ್ರಿಕೆಟ್ ತಾರೆಯರ ಜೀವನಗಾಥೆಯನ್ನೇ ಹೇಳುವಂತಿರಬೇಕು. ಆಸ್ಟ್ರೇಲಿಯಾದಲ್ಲಿ ಎಸ್‌ಸಿಜಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ದಿಗ್ಗಜ ಸರ್ ಡೊನಾಲ್ಡ್ ಬ್ರಾಡ್ಮನ್, ಎಂಸಿಜಿಯಲ್ಲಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಪ್ರತಿಮೆ ಇದೆ. ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಮಾಜಿ ಕ್ರಿಕೆಟಿಗ ಡಬ್ಲ್ಯುಜಿ ಗ್ರೇಸ್ ಪ್ರತಿಮೆ ಇದೆ. ವೆಸ್ಟ್ ಇಂಡೀಸ್‌ನ ಬಾರ್ಬಡೋಸ್ ಕ್ರೀಡಾಂಗಣದಲ್ಲಿ ದಿಗ್ಗಜ ಆಲ್ರೌಂಡರ್ ಸರ್ ಗ್ಯಾರಿ ಸೋಬರ್ರ್ಸ್‌ ಪ್ರತಿಮೆ ಇದೆ. ಭಾರತದಲ್ಲೂ ಕ್ರಿಕೆಟ್ ಕ್ರೀಡಾಂಗಣಗಳು ಕ್ರಿಕೆಟ್ ತಾರೆಯರಿಗೆ ಸೀಮಿತವಾಗಬೇಕು. ಗ್ಲಾಸ್ ಕ್ಯಾಬಿನ್‌ನಲ್ಲಿ ಕುಳಿತು ಆಡಳಿತ ನಡೆಸುವವರ ಪ್ರತಿಮೆಗಳು ಕ್ರೀಡಾಂಗಣದಲ್ಲಿ ಇರಬಾರದು ಎಂಬುದು ಬಿಷನ್ ಸಿಂಗ್ ಬೇಡಿ ವಾದವಾಗಿದೆ.

    VIDEO | ಸಾಂತಾಕ್ಲಾಸ್ ವೇಷದಲ್ಲಿರುವ ಈ ಕ್ರಿಕೆಟ್ ತಾರೆ ಯಾರು ಗೊತ್ತೇ?

    ಕರ್ನಾಟಕ ಟಿ20 ತಂಡಕ್ಕೆ ಕರುಣ್ ನಾಯರ್ ಸಾರಥ್ಯ

    ನಾಲ್ಕೂವರೆ ತಿಂಗಳಿನಿಂದ ಪತ್ನಿಯನ್ನು ನೋಡದೆ ಚಡಪಡಿಸುತ್ತಿದ್ದಾರೆ ಸ್ಟೀವನ್ ಸ್ಮಿತ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts