More

    ಆಗಲೇ ತಡೆದಿದ್ದರೆ ನೀರು ಬರುತ್ತಿತ್ತು ; ಶಿರಾಗೆ ಅಧಿಕ ನೀರು ಹರಿದಿದ್ದಕ್ಕೆ ನಾಗೇಶ್ ಅಸಮಾಧಾನ ; 6.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

    ತಿಪಟೂರು : ಶಿರಾ ಭಾಗದ ನೀರು ತಡೆದಿದ್ದರೆ, ತಿಪಟೂರು ತಾಲೂಕಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಲಭ್ಯವಾಗುತ್ತಿತ್ತು. ಆದರೆ ಅಂದಿನ ಮಂತ್ರಿ ಟಿ.ಬಿ.ಜಯಚಂದ್ರ ಅವರಿಗೆ ಶಿರಾ ಒಂದೇ ಜಿಲ್ಲೆಯಾಗಿ ಕಾಣಿಸುತ್ತಿತ್ತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

    ಶಿವರ ಗ್ರಾಮದಲ್ಲಿ ಭಾನುವಾರ ಹೇಮಾವತಿ ನಾಲೆಯಿಂದ ಶಿವರ, ಗೌಡನಕಟ್ಟೆ, ಕರೀಕೆರೆ, ಮಾದಿಹಳ್ಳಿ, ಭೈರನಾಯಕನಹಳ್ಳಿ ಕೆರೆಗಳಿಗೆ ನೀರು ಹರಿಸುವ 6.5 ಕೋಟಿ ರೂ. ವೆಚ್ಚದ ಪೈಪ್ ಲೈನ್, ಪಂಪ್ ಹೌಸ್, ಮತ್ತು ಮೋಟಾರ್ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಅವರು, ಅಂದು ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಎಂದಿಗೂ ನಮ್ಮ ತಾಲೂಕಿಗೆ ನೀರಿಲ್ಲ ಎನ್ನಲಿಲ್ಲ. ಆದರೆ ನೀರು ಕೊಡಲಿಲ್ಲ ಎಂದರು.

    2012ರಲ್ಲಿ ಮೊದಲ ಬಾರಿ ಶಾಸಕನಾಗಿದ್ದಾಗ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿದ್ದೆ. ಆದರೆ ನನ್ನ ಅವಧಿ ಮುಕ್ತಾಯಗೊಂಡು ಕಾಂಗ್ರೆಸ್ ಸರ್ಕಾರ ಬಂತು, ಆದರೆ ಅವರ ಅವಧಿಯಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ, ಮಾಜಿ ಶಾಸಕರು ಮನಸ್ಸು ಮಾಡದ ಪರಿಣಾಮ ನೀರು ಹರಿಯಲಿಲ್ಲ. ಅವರು ಒಂದು ಕೆರೆಯಿಂದ 7 ಕೆರೆಗಳಿಗೆ ನೀರು ಹರಿಸುವ ಸಾಹಸ ಕೈಗೊಳ್ಳುವುದಕ್ಕೂ ಮುಂಚೆ ಅಂದಿನ ಸಮಯದಲ್ಲಿ ಕಾವೇರಿ ಟ್ರಿಬ್ಯೂನಲ್‌ನಲ್ಲಿ ಉಳಿದಿದ್ದ ನೀರನ್ನು ತಾಲೂಕಿಗೆ ಹಂಚಿಕೆ ಮಾಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲ. ಟಿ.ಬಿ. ಜಯಚಂದ್ರ ಶಿರಾಕ್ಕೆ ಅಧಿಕ ನೀರು ಕೊಂಡೊಯ್ಯುವುದನ್ನು ತಡೆದಿದ್ದರೆ 2012ರಲ್ಲೇ ಈ ಭಾಗಕ್ಕೆ ನೀರು ಬರುತ್ತಿತ್ತು. ಪುನಃ ನಾನು ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳೊಂದಿಗೆ ಚಿರ್ಚಿಸಿ, 93 ಎಂಸಿಎಫ್‌ಟಿ ಇದ್ದ ನೀರಿನ ಪ್ರಮಾಣವನ್ನು 293 ಎಂಸಿಎಫ್‌ಟಿ ಗೆ ಹೆಚ್ಚಿಸಿಕೊಂಡ ಪರಿಣಾಮ 2012ರಲ್ಲಿ ಚಾಲನೆ ಪಡೆಯಬೇಕಿದ್ದ ಯೋಜನೆ ಈಗ ನೆರವೇರುತ್ತಿದೆ ಎಂದರು.

    ನನ್ನ ಅವಧಿಯಲ್ಲಿ ಹೊಸಹಳ್ಳಿ, ಸಣ್ಣೇನಹಳ್ಳಿ, ಅರಳಗುಪ್ಪೆ, ಕಿಬ್ಬನಹಳ್ಳಿ, ಭದ್ರಾಪುರ, ಶಿವಪುರ, ಕೊಂಡ್ಲಿಘಟ್ಟ, ರಜತಾದ್ರಿಪುರ, ಭಾಗದ ಕೆರೆಗಳಿಗೆ ನೀರು ಹರಿಸುವ ಪ್ರಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಕೆರೆಗಳನ್ನು ತುಂಬಿಸುವ ಭರವಸೆ ನೀಡಲ್ಲ. ಕೆರೆ ನಿರ್ಮಾಣದ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.40 ಪ್ರಮಾಣದಲ್ಲಿದ್ದ ನೀರನ್ನು ಶೇ.60 ತುಂಬಿಸುವ ಪ್ರಯತ್ನ ನಡೆದಿದೆ. ಇಂದು ಉದ್ಘಾಟನೆ ಆಗಿರುವ ಕಾಮಗಾರಿ 10 ತಿಂಗಳ ಒಳಗೆ ಮುಗಿಯಲಿದೆ ಎಂದರು.
    ಶಿವರ, ಗೌಡನಕಟ್ಟೆ, ಮಾದಿಹಳ್ಳಿ, ಗ್ರಾಮಸ್ಥರು ಸಚಿವರನ್ನು ಗೌರವಿಸಿದರು.

    ಮಾಧುಸ್ವಾಮಿ, ನಾಗೇಶ್ ಜೋಡೆತ್ತುಗಳು : ಈ ಭಾಗದ 20-30 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಮಾಧುಸ್ವಾಮಿ ಮತ್ತು ಬಿ.ಸಿ.ನಾಗೇಶ್ ಜೋಡೆತ್ತುಗಳಾಗಿ ಅಭಿವೃದ್ಧಿ ಪಥದಲ್ಲಿದ್ದಾರೆ, ಇವರ ಅವಧಿಯಲ್ಲಿ ಗ್ರಾಪಂಗಳು, ಶಾಲೆಗಳು ಅಭಿವೃದ್ಧಿ ಹೊಂದಲಿ. ನೀರಾವರಿ ಯೋಜನೆಗಳು ವೇಗ ಪಡೆದುಕೊಳ್ಳಲಿ. ಪ್ರಕೃತಿ ವಿರುದ್ಧ ಬದುಕಲು ಸಾಧ್ಯವಿಲ್ಲ. ಪ್ರಕೃತಿ ಜೊತೆಗೆ ಹೋದರಷ್ಟೇ ಜೀವನ ಸುಗಮ. ಶಂಕರನ ಕೃಪೆಯಿಂದ ಸಕಾಲಕ್ಕೆ ಮಳೆ ಆಗಿ, ಡ್ಯಾಂಗಳು ಭರ್ತಿ ಆಗಿ, ರೈತರ ಬದುಕು ಹಸನಾಗಲಿ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ಆಶೀರ್ವದಿಸಿದರು.

    12 ಟಿಪಿಸಿ 1,.2 ಕೆರೆಗೋಡಿ ರಂಗಾಪುರ : ಶಿವರದಲ್ಲಿ ಹೇಮಾವತಿ ನಾಲೆಯಿಂದ ಶಿವರ, ಗೌಡನಕಟ್ಟೆ, ಕರೀಕೆರೆ, ಮಾದಿಹಳ್ಳಿ, ಭೈರನಾಯಕನಹಳ್ಳಿ ಕೆರೆಗಳಿಗೆ ನೀರು ಹರಿಸುವ 6.5 ಕೋಟಿ ವೆಚ್ಚದ ಪೈಪ್ ಲೈನ್, ಪಂಪ್ ಹೌಸ್, ಮತ್ತು ಮೋಟಾರ್ ಅಳವಡಿಕೆ ಕಾರ್ಯಕ್ರಮಕ್ಕೆ ಸಚಿವ ಬಿ.ಸಿ. ನಾಗೇಶ್ ಚಾಲನೆ ನೀಡಿದರು. ಶ್ರೀ ಗುರುಪರ ದೇಶೀಕೇಂದ್ರ ಸ್ವಾಮೀಜಿ, ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್. ಮುಖಂಡ ಬಿಸಲೇಹಳ್ಳಿ ಜಗದೀಶ್, ಗುರುಗದಹಳ್ಳಿ ಉಮೇಶ್ ಇದ್ದರು.

    ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ 1.32 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರ ಸಮರ್ಪಕ ಹಂಚಿಕೆ ಆಗಬೇಕು. ಯಾರೇ ಆದರೂ, ನೀರಿನ ಲಭ್ಯತೆ ನೋಡಿಕೊಂಡು ನೀರು ಹರಿಸುವ ಭರವಸೆ ಕೊಡಬೇಕು.
    ಬಿ.ಸಿ.ನಾಗೇಶ್, ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts