More

    ಐಪಿಎಲ್ ತಂಡಗಳಿಗೆ ಕ್ರಿಪ್ಟೊಕರೆನ್ಸಿ ನಿಷೇಧ, ಬಿಸಿಸಿಐನಿಂದ ಖಡಕ್ ಸೂಚನೆ

    ನವದೆಹಲಿ: ಐಪಿಎಲ್ ತಂಡಗಳು ಕ್ರಿಪ್ಟೊಕರೆನ್ಸಿ ಕಂಪನಿಗಳ ಜತೆಗೆ ಪ್ರಾಯೋಜಕತ್ವ ಒಪ್ಪಂದಗಳನ್ನು ಮಾಡಿಕೊಳ್ಳಬಾರದು ಎಂದು ಬಿಸಿಸಿಐ ಖಡಕ್ ಸೂಚನೆ ನೀಡಿದೆ. ಜತೆಗೆ ಬೆಟ್ಟಿಂಗ್ ಕಂಪನಿಗಳ ಜತೆಗೂ ಪ್ರಾಯೋಜಕತ್ವ ಒಪ್ಪಂದಗಳನ್ನು ಮಾಡಿಕೊಳ್ಳದಂತೆ ನಿರ್ಬಂಧಿಸಿದೆ.

    ಕ್ರಿಪ್ಟೊಕರೆನ್ಸಿ ನಿಯಂತ್ರಣಕ್ಕೆ ಪ್ರಬಲ ನೀತಿಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ‘ಕ್ರಿಪ್ಟೊಕರೆನ್ಸಿ ಕಂಪನಿಗಳೊಂದಿಗೆ ಯಾವುದೇ ಡೀಲ್‌ಗಳನ್ನು ಮಾಡಿಕೊಳ್ಳಬಾರದು ಎಂದು ನಾವು ಐಪಿಎಲ್ ತಂಡಗಳಿಗೆ ಸೂಚಿಸಿದ್ದೇವೆ. ಕೆಲ ಬೆಟ್ಟಿಂಗ್ ಕಂಪನಿಗಳು ಜಾಹೀರಾತು ನೀಡಲು ಮುಂದಾಗಿರುವ ಬಗ್ಗೆಯೂ ನಾವು ಕಳವಳ ಹೊಂದಿದ್ದೇವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೆಲ ಐಪಿಎಲ್ ತಂಡಗಳು ಕ್ರಿಪ್ಟೊಕರೆನ್ಸಿ ಕಂಪನಿಗಳ ಒಪ್ಪಂದಗಳಿಗೆ ಸಹಿ ಹಾಕಲು ಸಿದ್ಧತೆ ಮಾಡಿಕೊಂಡಿದ್ದ ಸಮಯದಲ್ಲೇ ಬಿಸಿಸಿಐನಿಂದ ಈ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಈ ನಡೆಗೆ ಕೆಲ ಫ್ರಾಂಚೈಸಿಗಳು ಅಸಮಾಧಾನವನ್ನೂ ವ್ಯಕ್ತಪಡಿಸಿವೆ. ಇತ್ತೀಚೆಗೆ ಕಾಯಿನ್ ಡಿಸಿಎಕ್ಸ್, ಕಾಯಿನ್ ಸ್ವಿಚ್ ಕುಬೇರ್, ವಜೀರ್ ಎಕ್ಸ್ ಮುಂತಾದ ಕೆಲ ಕ್ರಿಪ್ಟೊಕರೆನ್ಸಿ ಕಂಪನಿಗಳು ಕ್ರಿಕೆಟ್ ಪಂದ್ಯಗಳ ವೇಳೆ ಜಾಹೀರಾತುಗಳನ್ನು ನೀಡಿವೆ. ಕಳೆದ ಜುಲೈನಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಾಗ ಟಿ20 ಸರಣಿಗೆ ‘ಕಾಯಿನ್ ಡಿಸಿಎಕ್ಸ್’ ಕ್ರಿಪ್ಟೊಕರೆನ್ಸಿ ಕಂಪನಿಯೇ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಟಿ20 ವಿಶ್ವಕಪ್ ವೇಳೆಯೂ ಕ್ರಿಪ್ಟೊಕರೆನ್ಸಿ ಕಂಪನಿಗಳು 50 ಕೋಟಿ ರೂ.ಗೂ ಅಧಿಕ ಮೊತ್ತದ ಜಾಹೀರಾತುಗಳನ್ನು ನೀಡಿದ್ದವು.

    ಫುಟ್‌ಬಾಲ್‌ನಲ್ಲಿ ಕ್ರಿಪ್ಟೊ ಹೆಚ್ಚಳ
    ಇತ್ತೀಚೆಗೆ ಫುಟ್‌ಬಾಲ್‌ನಲ್ಲಿ ಕ್ರಿಪ್ಟೊಕರೆನ್ಸಿ ಕಂಪನಿಗಳ ಪ್ರಾಯೋಜಕತ್ವ ಒಪ್ಪಂದಗಳು ಹೆಚ್ಚಿವೆ. ಇಂಟರ್ ಮಿಲಾನ್, ಎಸಿ ಮಿಲಾನ್, ಜುವೆಂಟಸ್, ಬಾರ್ಸಿಲೋನಾ, ಆರ್ಸೆನಲ್ ಮತ್ತು ಮ್ಯಾಂಚೆಸ್ಟರ್ ಸಿಟಿಯಂಥ ಪ್ರತಿಷ್ಠಿತ ಫುಟ್‌ಬಾಲ್ ಕ್ಲಬ್‌ಗಳು ಕ್ರಿಪ್ಟೊಕರೆನ್ಸಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಈ ವರ್ಷ ಯುರೋ ಕಪ್ ವೇಳೆಯೂ ವಜೀರ್ ಎಕ್ಸ್ ಕ್ರಿಪ್ಟೊಕರೆನ್ಸಿ ಕಂಪನಿ ಸಾಕಷ್ಟು ಜಾಹೀರಾತುಗಳನ್ನು ನೀಡಿತ್ತು. ಎಫ್​1ನಲ್ಲೂ ಕ್ರಿಪ್ಟೊಕರೆನ್ಸಿ ಪ್ರಾಯೋಜಕತ್ವವಿದೆ.

    8 ಐಪಿಎಲ್ ತಂಡಗಳು ರಿಟೇನ್ ಮಾಡಿಕೊಳ್ಳಲಿರುವ ಸಂಭಾವ್ಯ ಆಟಗಾರರ ಪಟ್ಟಿ

    PHOTO: ಗೆಳತಿಯೊಂದಿಗೆ ವಿವಾಹವಾದ ಕರ್ನಾಟಕದ ಕ್ರಿಕೆಟಿಗ ಶ್ರೇಯಸ್ ಗೋಪಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts