More

    ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೊಸ ಕೋಚ್; ಹುದ್ದೆಯ ಅವಧಿ, ವೇತನ ಎಷ್ಟು ಗೊತ್ತೇ?

    ನವದೆಹಲಿ: ಕಳೆದ ಕೆಲ ದಿನಗಳಿಂದ ಭಾರಿ ನಿರೀಕ್ಷೆ ಮೂಡಿಸಿದಂತೆಯೇ, ದಿಗ್ಗಜ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಹಾಲಿ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್ ಪಟ್ಟವೇರುವುದು ಖಚಿತಗೊಂಡಿದೆ. ಹಾಲಿ ಕೋಚ್ ರವಿಶಾಸ್ತ್ರಿ ಉತ್ತರಾಧಿಕಾರಿಯಾಗಿ ಕನ್ನಡಿಗ ದ್ರಾವಿಡ್ ಅವರನ್ನು ಬಿಸಿಸಿಐ ಬುಧವಾರ ಅಧಿಕೃತವಾಗಿ ನೇಮಿಸಿದೆ.

    ಹಾಲಿ ಟಿ20 ವಿಶ್ವಕಪ್‌ನಲ್ಲಿ ಮೊದಲೆರಡು ಪಂದ್ಯ ಸೋತು ಸೆಮಿೈನಲ್ ರೇಸ್‌ನಲ್ಲಿ ಭಾರಿ ಹಿನ್ನಡೆ ಕಂಡಿರುವ ಭಾರತ ತಂಡ, 2007ರ ಏಕದಿನ ವಿಶ್ವಕಪ್ ಬಳಿಕ ಐಸಿಸಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರಲು ವಿಲವಾಗುವ ಭೀತಿಯಲ್ಲಿದ್ದು, ಟೂರ್ನಿಯ ನಂತರ ದ್ರಾವಿಡ್ ಗರಡಿಯಲ್ಲಿ ಹೊಸ ಅಧ್ಯಾಯ ಬರೆಯುವ ನಿರೀಕ್ಷೆ ಇದೆ. 2023ರಲ್ಲಿ ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್‌ವರೆಗೆ ದ್ರಾವಿಡ್ 2 ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ. ಅವರು ವಾರ್ಷಿಕ 10 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

    ವಿಶ್ವಕಪ್ ಬೆನ್ನಲ್ಲೇ ನವೆಂಬರ್ 17ರಿಂದ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಮತ್ತು ಟೆಸ್ಟ್ ಸರಣಿ 48 ವರ್ಷದ ದ್ರಾವಿಡ್‌ಗೆ ಮೊದಲ ಸವಾಲು ಆಗಿರಲಿದೆ. ಭಾರತ ಎ, 19 ವಯೋಮಿತಿ ತಂಡಗಳ ಕೋಚ್ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ದ್ರಾವಿಡ್ ಕಳೆದ ಕೆಲ ವರ್ಷಗಳಿಂದ ಭಾರತದ ಯುವ ಕ್ರಿಕೆಟಿಗರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

    ಅವಿರೋಧ ಆಯ್ಕೆ: ಮಾಜಿ ಕ್ರಿಕೆಟಿಗರಾದ ಸುಲಕ್ಷಣಾ ನಾಯ್ಕ ಮತ್ತು ಆರ್‌ಪಿ ಸಿಂಗ್ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ), ದ್ರಾವಿಡ್ ಅವರನ್ನು ಅವಿರೋಧವಾಗಿ ಮುಖ್ಯ ಕೋಚ್ ಹುದ್ದೆಗೆ ಆರಿಸಿದೆ ಎಂದು ಬಿಸಿಸಿಐ ತಿಳಿಸಿದೆ. ಟಿ20 ವಿಶ್ವಕಪ್ ಬಳಿಕ ರವಿಶಾಸಿ ಅವಧಿ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಬಿಸಿಸಿಐ ಅಕ್ಟೋಬರ್ 26ರಂದು ಅರ್ಜಿ ಆಹ್ವಾನಿಸಿತ್ತು ಮತ್ತು ದ್ರಾವಿಡ್ ಅವರೊಬ್ಬರೇ ಪ್ರಮುಖ ಅಭ್ಯರ್ಥಿಯಾಗಿದ್ದರು.

    ನಿರ್ಗಮನ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್‌ಗೆ ಬಿಸಿಸಿಐ ಅಭಿನಂದನೆ ಸಲ್ಲಿಸಿದ್ದು, ಅವರ ಗರಡಿಯಲ್ಲಿ ತಂಡ ಉತ್ತಮ ಯಶಸ್ಸು ಕಂಡಿದೆ ಎಂದು ತಿಳಿಸಿದೆ.

    ದ್ರಾವಿಡ್ 1996ರಿಂದ 2012ರ ನಡುವೆ ಭಾರತ ಪರ 164 ಟೆಸ್ಟ್ ಮತ್ತು 344 ಏಕದಿನ ಪಂದ್ಯವಾಡಿದ್ದು, ಕ್ರಮವಾಗಿ 13,288 ಮತ್ತು 10,889 ರನ್ ಬಾರಿಸಿದ್ದಾರೆ. ಒಟ್ಟು 48 ಶತಕ (36+12) ಶತಕ ಸಿಡಿಸಿದ್ದಾರೆ. ಟೆಸ್ಟ್‌ನಲ್ಲಿ 210 ಮತ್ತು ಏಕದಿನದಲ್ಲಿ 196 ಕ್ಯಾಚ್ ಹಿಡಿದಿದ್ದಾರೆ.

    ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್‌ರನ್ನು ಬಿಸಿಸಿಐ ಸ್ವಾಗತಿಸುತ್ತಿದೆ. ದ್ರಾವಿಡ್ ಕ್ರಿಕೆಟಿಗರಾಗಿ ವರ್ಣರಂಜಿತ ವೃತ್ತಿಜೀವನ ಕಂಡಿದ್ದು, ಶ್ರೇಷ್ಠ ಆಟಗಾರರಲ್ಲೊಬ್ಬರಾಗಿದ್ದಾರೆ. ಎನ್‌ಸಿಎ ಮುಖ್ಯಸ್ಥರಾಗಿಯೂ ಅವರು ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ. ಹೊಸ ಹುದ್ದೆಯ ಮೂಲಕ ಅವರು ಭಾರತೀಯ ಕ್ರಿಕೆಟ್‌ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಇದೆ.
    | ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

    ಇದೊಂದು ಅಪಾರ ಗೌರವದ ಹುದ್ದೆ. ಇದನ್ನು ಯಶಸ್ವಿಯಾಗಿ ನಿಭಾಯಿಸುವುದನ್ನು ಎದುರು ನೋಡುತ್ತಿದ್ದೇನೆ. ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ತಂಡ ಉತ್ತಮ ನಿರ್ವಹಣೆ ತೋರಿದ್ದು, ಅದನ್ನು ಮತ್ತಷ್ಟು ಮುಂದಕ್ಕೆ ಕರೆದೊಯ್ಯುವ ಭರವಸೆಯಲ್ಲಿದ್ದೇನೆ. ಮುಂದಿನ 2 ವರ್ಷಗಳಲ್ಲಿ ಹಲವು ಮಹತ್ವದ ಟೂರ್ನಿಗಳು ನಡೆಯಲಿದ್ದು, ಆಟಗಾರರಿಂದ ಸಾಮರ್ಥ್ಯಕ್ಕೆ ತಕ್ಕ ನಿರ್ವಹಣೆ ಹೊರಹೊಮ್ಮಿಸಲು ಪ್ರಯತ್ನಿಸಲಿದ್ದೇನೆ.
    | ರಾಹುಲ್ ದ್ರಾವಿಡ್, ಹೊಸ ಕೋಚ್

    ದ್ರಾವಿಡ್ ಮುಂದಿನ ಪ್ರಮುಖ ಸವಾಲು
    *2021-22: ದಕ್ಷಿಣ ಆಫ್ರಿಕಾ ಪ್ರವಾಸ
    *2022: ಟಿ20 ವಿಶ್ವಕಪ್ (ಆಸ್ಟ್ರೇಲಿಯಾ)
    *2022: ಟಿ20 ಏಷ್ಯಾಕಪ್ (ಶ್ರೀಲಂಕಾ)
    *2023: ಏಕದಿನ ವಿಶ್ವಕಪ್ (ಭಾರತ)

    ಕಿವೀಸ್ ಎದುರು ಹೋರಾಡಿ ಸೋತ ಸ್ಕಾಟ್ಲೆಂಡ್, ಭಾರತದ ಸೆಮೀಸ್ ಲೆಕ್ಕಾಚಾರ ಹೇಗಿದೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts