More

    ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ, ಸುಪ್ರೀಂಕೋರ್ಟ್​​ನಿಂದಲೇ ಸೂಚನೆ; ದೇಶಾದ್ಯಂತದ ಎಲ್ಲ ಪಾಲಿಕೆಗಳಿಗೂ ಅನ್ವಯ…

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಅಧಿಕಾರಿಗಳ ಆಡಳಿತ ಸದ್ಯದಲ್ಲೇ ಕೊನೆಗೊಳ್ಳಲಿದೆ. ಏಕೆಂದರೆ ಸುಪ್ರೀಂಕೋರ್ಟ್​ ಹೊರಡಿಸಿರುವ ಆದೇಶವೊಂದರ ಪ್ರಕಾರ ಬಿಬಿಎಂಪಿಗೆ ಶೀಘ್ರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ಕಂದಾಯ ಸಚಿವ ಆರ್. ಅಶೋಕ್​ ಕೂಡ ಸಕಾರಾತ್ಮಕ ಹೇಳಿಕೆ ನೀಡಿದ್ದಾರೆ.

    ಮಧ್ಯಪ್ರದೇಶದಲ್ಲಿ ಖಾಲಿ ಉಳಿದಿರುವ ಸಾವಿರಾರು ಸ್ಥಳೀಯ ಸಂಸ್ಥೆಗಳ ಸ್ಥಾನಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಕೆ ಆಗಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಬಳಿಕ ಈ ಆದೇಶ ನೀಡಲಾಗಿದೆ. ಮಧ್ಯಪ್ರದೇಶ ಸರ್ಕಾರ ಮತ್ತು ಸುರೇಶ್ ಮಹಾಜನ್ ಎಂಬವರ ಮಧ್ಯದ ಈ ತಕರಾರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್​ವಿಲ್ಕರ್​, ಎ.ಎಸ್.ಓಕ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂಧ ಇನ್ನೆರಡು ವಾರಗಳಲ್ಲಿ ನೋಟಿಫಿಕೇಷನ್​ ಹೊರಡಿಸುವಂತೆ ಅಲ್ಲಿನ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

    ಈ ಆದೇಶಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್​ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದ ಮಟ್ಟಿಗೆ ಇದೊಂದು ಮಹತ್ವದ ಬೆಳವಣಿಗೆ. ಮಧ್ಯಪ್ರದೇಶ ವರ್ಸಸ್ ಸುರೇಶ್ ಮಹಾಜನ್ ನಡುವೆ ಕೇಸ್ ನಡೆಯುತ್ತಿತ್ತು, ಬಿಬಿಎಂಪಿಗೆ ಸಂಬಂಧಿಸಿದಂತೆಯೂ ಸುಪ್ರೀಂ ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿತ್ತು. ಆದರೆ ಇವತ್ತಿನ ಆದೇಶದಲ್ಲಿ ಸ್ಪಷ್ಟವಾಗಿ ಮಧ್ಯಪ್ರದೇಶಕ್ಕೆ ಆದೇಶ ಮಾಡಿದ್ದರೂ ಅದು ಇಡೀ ದೇಶಕ್ಕೆ ಅನ್ವಯ ಆಗುತ್ತದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಹೀಗಾಗಿ ಇದು ಬಿಬಿಎಂಪಿ‌ ಚುನಾವಣೆಗೂ‌ ಅನ್ವಯಿಸಲಿದೆ ಎಂದು ಹೇಳಿದ್ದಾರೆ.
    ಎಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಂತು ಹೋಗಿದೆ, ಅದನ್ನೂ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ಕೂಡ ನಡೆಯಲಿದೆ. ಹಿಂದಿನ‌ ಚುನಾವಣೆಯಲ್ಲಿ ಎಷ್ಟು ವಾರ್ಡ್​​ಗಳು ಇದ್ದವೋ ಅದನ್ನೇ ಮುಂದುವರಿಸಬೇಕು ಅಂತ ಹೇಳಿದ್ದಾರೆ. ಹೀಗಾಗಿ ಈ ಹಿಂದೆ ನಡೆದ ವಾರ್ಡ್​ಗಳಿಗಷ್ಟೇ ಚುನಾವಣೆ ನಡೆಯಲಿದೆ ಎಂದು ಅಶೋಕ್ ಹೇಳಿದ್ದಾರೆ.

    ಎರಡು ವಾರದಲ್ಲಿ ಚುನಾವಣೆ ಘೋಷಣೆ ಮಾಡುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಆ ಪ್ರಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಮುಖ್ಯಮಂತ್ರಿ ಅವರ ಜತೆ ಮಾತನಾಡುತ್ತೇವೆ. ಕರ್ನಾಟಕ‌ ಸರ್ಕಾರವಂತೂ ಚುನಾವಣೆ ನಡೆಸುವುದಕ್ಕೆ ತಯಾರಿದೆ, ಚುನಾವಣೆಗೆ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಅಶೋಕ್ ಹೇಳಿದ್ದು, ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

    ಬೆಳಗಾವಿಯಿಂದ ಹೊರಟ ವಿಮಾನಕ್ಕೆ ಹಕ್ಕಿ ಡಿಕ್ಕಿ; ಇಂಜಿನ್ ಬ್ಲೇಡ್​ಗೆ ಹಾನಿ..

    ಅಲ್ಲೊಂದು ಕೆರೆ, ಇಲ್ಲೊಂದು ಕೆರೆ; ಎರಡೂ ಕಡೇ ಒಂದೇ ಥರದ ಸಾವು: ಸತ್ತವರಿಬ್ಬರಿಗೂ ಒಂದು ಸಾಮ್ಯತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts