More

    ಬಿಬಿಎಂಪಿ ಬಜೆಟ್​| ಉಚಿತ ನೀರಿಗೆ 43 ಕೋಟಿ ರೂ.: ಮಾಸಿಕ 10 ಸಾವಿರ ಲೀ. ನೀರು ಉಚಿತ

    ಸಾಮಾನ್ಯ ವರ್ಗದ ಜನರ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಮಾಸಿಕ 10 ಸಾವಿರ ಲೀಟರ್​ಗೂ ಕಡಿಮೆ ನೀರು ಬಳಸುವ ಗೃಹ ಬಳಕೆದಾರರಿಗೆ ಕಾವೇರಿ ನೀರನ್ನು ಉಚಿತವಾಗಿ ಒದಗಿಸುವುದಾಗಿ ಬಿಬಿಎಂಪಿ ಘೋಷಿಸಿದೆ. ಅದಕ್ಕಾಗಿ 2020-21ರ ಬಜೆಟ್​ನಲ್ಲಿ ಬಿಡಬ್ಲ್ಯೂಎಸ್​ಎಸ್​ಬಿಗೆ ವಾರ್ಷಿಕ 43 ಕೋಟಿ ರೂ. ಗಳನ್ನು ಮೀಸ ಲಿರಿಸಿದೆ. ಇದರಿಂದ 110 ಹಳ್ಳಿ ಗಳು ಸೇರಿ 2.5 ಲಕ್ಷ ಕುಟುಂಬಗಳಿಗೆ ಅನುಕೂಲ ವಾಗಲಿದೆ. ಮಾಸಿಕ 10 ಸಾವಿರ ಲೀ. ಒಳಗಿನ ಬಳಕೆಗೆ ಸಂಪೂರ್ಣ ಶುಲ್ಕವನ್ನು ಬಿಬಿಎಂಪಿಯೇ ಭರಿಸುತ್ತದೆ. ಅಂಗಡಿ ಮುಂಗಟ್ಟು, ಶಾಪಿಂಗ್ ಕಾಂಪ್ಲೆಕ್ಸ್ ಸೇರಿ ವಾಣಿಜ್ಯ ಸಂಪರ್ಕಕ್ಕೆ ಇದು ಅನ್ವಯವಾಗುವುದಿಲ್ಲ. ಆದರೆ, 1 ಲೀಟರ್ ಹೆಚ್ಚಿಗೆ ನೀರು ಬಳಸಿದರೂ 10,001 ಲೀ.ಗೆ ಶುಲ್ಕ ಭರಿಸಬೇಕಾಗುತ್ತದೆ. ಹಾಗಾಗಿ, ಸೂಕ್ತವಾಗಿ ಅನುಷ್ಠಾನವಾದರೆ ಜನರಲ್ಲಿ ನೀರಿನ ಮಿತಬಳಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ.

    ಕೊಳೆಗೇರಿ, ದಲಿತರ ಕಾಲನಿಗಳಲ್ಲಿ ಈಗಾಗಲೇ ಯೋಜನೆ ಜಾರಿಯಲ್ಲಿದೆ. ಉಚಿತ ಕಾವೇರಿ ನೀರು ಎಂದಾಕ್ಷಣ ಫಲಾನುಭವಿಗಳ ಆಯ್ಕೆಯಲ್ಲೂ ಮಾನದಂಡಗಳಿರುತ್ತವೆ. ನೀರಿನ ವಾರ್ಷಿಕ ಸರಾಸರಿ ಬಳಕೆ ಆಧಾರದ ಮೇಲೆ ಫಲಾನುಭವಿಗಳಿಗೆ ಈ ನೀರು ಸಿಗಲಿದೆ.

    | ತುಷಾರ್ ಗಿರಿನಾಥ್ ಜಲಮಂಡಳಿ ಅಧ್ಯಕ್ಷ

    ಆಸ್ತಿ ಗುತ್ತಿಗೆ ದರಗಳ ಪರಿಷ್ಕರಣೆ

    ನಗರದಲ್ಲಿ ದೀರ್ಘಾವಧಿಗೆ ವಿವಿಧ ಸಂಘ-ಸಂಸ್ಥೆಗಳಿಗೆ ಗುತ್ತಿಗೆ ನೀಡಲಾದ ಕಟ್ಟಡಗಳು ಹಾಗೂ ಇತರೆ ಆಸ್ತಿಗಳ ದರಗಳನ್ನು ಪರಿಷ್ಕರಣೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಪಾಲಿಕೆಯಿಂದ ವಿವಿಧ ಸಂಘ- ಸಂಸ್ಥೆಗಳಿಗೆ 35 ವರ್ಷ ಅಥವಾ 99 ವರ್ಷಗಳಿಗೆ ನೀಡಲಾದ ದೀರ್ಘಾವಧಿ ಗುತ್ತಿಗೆ ಆಸ್ತಿಗಳ ದರ ಪರಿಷ್ಕರಣೆ ಮಾಡಲಾಗುವುದು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗದ ಗುತ್ತಿಗೆ ಆಸ್ತಿಗಳನ್ನು ಪಾಲಿಕೆ ವಶಕ್ಕೆ ಪಡೆಯಲಾಗುತ್ತದೆ.

    ಉದ್ಯಾನ, ಮೈದಾನಕ್ಕೆ ತಂತಿಬೇಲಿ: ಪಾಲಿಕೆ ಸ್ವತ್ತಿನ ಉದ್ಯಾನಗಳು ಹಾಗೂ ಆಟದ ಮೈದಾನಗಳು ಭೂಗಳ್ಳರ ಪಾಲಾಗದಂತೆ ತಂತಿಬೇಲಿ ಹಾಕಿ ಸಂರಕ್ಷಣೆ ಮಾಡಲು 15 ಕೋಟಿ ರೂ. ಮೀಸಲಿರಿಸಲಾಗಿದೆ. ಸಾರ್ವಜನಿಕರಿಂದ ವಶಕ್ಕೆ ಪಡೆಯಲಾದ ಆಸ್ತಿಗಳಿಗೆ ಭೂ ಪರಿಹಾರ ನೀಡಲು 40 ಕೋಟಿ ರೂ. ಹಾಗೂ ಪಾಲಿಕೆಗೆ ಸೇರಿದ ಎಲ್ಲ ನಿವೇಶನಗಳಿಗೆ ತಂತಿ ಬೇಲಿಹಾಕಿ ರಕ್ಷಣೆ ಮಾಡಲು 5 ಕೋಟಿ ರೂ. ತೆಗೆದಿರಿಸಲಾಗಿದೆ.

    ಉದ್ಯಾನ, ವೃತ್ತಗಳ ಅಭಿವೃದ್ಧಿ: ನಗರದಲ್ಲಿರುವ ಉದ್ಯಾನ, ವೃತ್ತ, ಮೀಡಿಯನ್ಸ್ (ರಸ್ತೆ ವಿಭಜಕ), ಮೇಲ್ಸೇತುವೆಗಳಲ್ಲಿ ಗಿಡಗಳ ನಿರ್ವಹಣೆಗೆ 54 ಕೋಟಿ ರೂ., ಹೊಸ ವಲಯಗಳಲ್ಲಿ ಉದ್ಯಾನಗಳ ಅಭಿವೃದ್ಧಿಗೆ 10 ಕೋಟಿ ರೂ., ಉದ್ಯಾನಗಳಲ್ಲಿ ಅಲಂಕಾರಿಕ ಗಿಡ ಬೆಳೆಸಲು 2 ಕೋಟಿ ರೂ., ಉದ್ಯಾನಗಳಲ್ಲಿ ಕೊಳವೆಬಾವಿ ಕೊರೆಸಲು 10 ಕೋಟಿ ರೂ., ಮಳೆನೀರು ಕೊಯ್ಲಿಗೆ 2 ಕೋಟಿ ರೂ., ವೃತ್ತಗಳ ಅಂದ ಹೆಚ್ಚಸಲು 1 ಕೋಟಿ ರೂ. ಅನುದಾನ ನೀಡಲಾಗಿದೆ.

    ನಗರ ಅರಣ್ಯಕ್ಕೆ 74 ಕೋಟಿ ರೂ.: ರಾಜಧಾನಿಯಲ್ಲಿ ಶುದ್ಧ ಪರಿಸರ ಕಾಪಾಡಲು ಸಸಿ ಬೆಳಸಿ ಸಾರ್ವಜನಿಕರಿಗೆ ವಿತರಿಸಲು 5 ಕೋಟಿ ರೂ., ಉದ್ಯಾನಗಳಲ್ಲಿ ದಟ್ಟ ಅರಣ್ಯ ಬೆಳೆಸಲು 1 ಕೋಟಿ ರೂ., ರಸ್ತೆಬದಿಯ ಮರಗಳ ಕೊಂಬೆ ಕತ್ತರಿಸಿ ನಿರ್ವಹಣೆ ಮಾಡಲು 9 ಕೋಟಿ ರೂ., ಕಾಮಗಾರಿಗೆ ಕತ್ತರಿಸಲಾದ ಮರಗಳ ಸ್ಥಳದಲ್ಲಿ ಮರ ಸಸಿ ನೆಡಲು 1 ಕೋಟಿ ರೂ. ಹಾಗೂ ಕೆರೆಗಳ ಬಫರ್ ಜೋನ್ ಅಭಿವೃದ್ಧಿ ಸೇರಿ ಒಟ್ಟು 73.38 ಕೋಟಿ ರೂ. ಮೀಸಲಿಡಲಾಗಿದೆ.

    ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಹಾಲು ಮತ್ತು ದಿನಪತ್ರಿಕೆ ಹಂಚುವವರಿಗೆ ಗುಂಪು ವಿಮೆ ಸೌಲಭ್ಯ ಒದಗಿಸಲಾಗುತ್ತದೆ. ಈ ಬಜೆಟ್ ರಾಜಕೀಯ ಅಥವಾ ಚುನಾವಣಾ ಬಜೆಟ್ ಆಗಿರದೆ ಅಭಿವೃದ್ಧಿಪರ ಬಜೆಟ್ ಆಗಿದೆ.

    | ಆರ್. ಅಶೋಕ್ ಕಂದಾಯ ಸಚಿವ

    ಚುನಾವಣೆಗೆ ಆಸರೆ ಆಗುವುದೇ ನೀರು?

    ಬಿಬಿಎಂಪಿ ಆಡಳಿತಾವಧಿ ಸೆಪ್ಟೆಂಬರ್​ನಲ್ಲಿ ಮುಕ್ತಾಯಗೊಂಡು ಚುನಾವಣೆ ನಡೆಯುವ ವರ್ಷದಲ್ಲಿ ದೆಹಲಿ ಮಾದರಿ ಅನುಸರಿಸಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಬಜೆಟ್ ಮಂಡನೆ ಮಾಡಿದೆ. ದೇಶದಲ್ಲೆ ಮೊದಲ ಬಾರಿಗೆ, ಗೃಹೋಪಯೋಗಿ ನೀರಿನ ಸಂಪರ್ಕಗಳಿಗೆ ಉಚಿತ ನೀರು ನೀಡುವ ಯೋಜನೆಯನ್ನು ಆಮ್​ದಿ್ಮ ಪಕ್ಷದ ಅರವಿಂದ ಕೇಜ್ರಿವಾಲ್ ಸರ್ಕಾರ ಘೋಷಣೆ ಮಾಡಿತ್ತು. ನೀರಿನ ಜತೆಗೆ 200 ಯೂನಿಟ್​ವರೆಗೆ ವಿದ್ಯುತ್ ಉಚಿತವಾಗಿ ನೀಡುತ್ತಿರುವುದರಿಂದಲೇ ಎರಡು ಬಾರಿ ಭರ್ಜರಿ ಬಹುಮತದಿಂದ ಕೇಜ್ರಿವಾಲ್ ಜಯಿಸಿ ಬಂದಿದ್ದಾರೆ ಎನ್ನಲಾಗುತ್ತಿದೆ.

    ದೆಹಲಿಯಲ್ಲಿ 20 ಸಾವಿರ ಲೀ.ವರೆಗೆ ಉಚಿತ ನೀರು ನೀಡಲಾಗುತ್ತಿದ್ದು, ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಆರ್ಥಿಕ ವೆಚ್ಚ ಹೆಚ್ಚಳವಾಗುವ ಕಾರಣ ಮೊದಲ ಹಂತದಲ್ಲಿ ಇದನ್ನು 10 ಸಾವಿರ ಲೀ.ಗೆ ಮಿತಿಗೊಳಿಸಲಾಗಿದೆ. ಅದನ್ನು ಮೀರಿ 1 ಲೀ. ಹೆಚ್ಚು ನೀರು ಬಳಸಿದರೂ 10,001 ಲೀ.ಗೆ ಬಿಲ್ ಪಾವತಿಸಬೇಕಿರುವ ಕಾರಣ ಸಾರ್ವಜನಿಕರಲ್ಲಿ ನೀರು ಉಳಿತಾಯದ ಹೊಣೆಗಾರಿಕೆ ಮೂಡುತ್ತದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ, ಮೀಟರ್ ರೀಡಿಂಗ್ ಕಡಿಮೆ ತೋರಿಸುವ ಸಲುವಾಗಿ ನೀರಿನ ಕಳ್ಳತನ ಹೆಚ್ಚಳಕ್ಕೆ ಅವಕಾಶವಾಗದಂತೆ ಜಲಮಂಡಳಿ ಎಚ್ಚರಿಕೆ ವಹಿಸಬೇಕಿದೆ.

    ವಾಸ್ತವಿಕ ಬಜೆಟ್ ಮಂಡನೆ ಮಾಡುವುದಾಗಿ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಹೇಳಿದ್ದರು. ಪ್ರಸಕ್ತ ವರ್ಷ ರಾಜ್ಯ ಸರ್ಕಾರದಿಂದ, ಬಿಬಿಎಂಪಿ ತೆರಿಗೆ, ತೆರಿಗೆಯೇತರ ಆದಾಯದಿಂದ ಒಟ್ಟು 10,899.23 ಕೋಟಿ ರೂ. ನಿರೀಕ್ಷಿಸಲಾಗಿದೆ. ಒಟ್ಟಾರೆ 10,895.84 ಕೋಟಿ ರೂ. ವೆಚ್ಚವಾಗಿ 3.39 ಕೋಟಿ ರೂ. ‘ಉಳಿತಾಯ‘ ಬಜೆಟ್ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ವಾಸ್ತವಿಕವಾಗಿ ಇದು 2-3 ಸಾವಿರ ಕೋಟಿ ರೂ. ಕೊರತೆ ಬಜೆಟ್. 2019-20ರಲ್ಲಿ ಬಿಬಿಎಂಪಿ 12,958 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿತ್ತು. ನಂತರ ಸ್ವತಃ ಆಯುಕ್ತರೇ ಸರ್ಕಾರಕ್ಕೆ ಇದು ಅವಾಸ್ತವಿಕ ಎಂದು ಪತ್ರ ಬರೆದು, 9 ಸಾವಿರ ಕೋಟಿ ರೂ.ಗೆ ತಗ್ಗಿಸಬೇಕು ಎಂದಿದ್ದರು. ನಂತರ 11,648.90 ಕೋಟಿ ರೂ.ಗೆ ಪರಿಷ್ಕರಿಸಲಾಗಿತ್ತು. ಆದರೆ ಈಗಿನ ಬಜೆಟ್ ದಾಖಲೆಯಲ್ಲಿ ನೀಡಿರುವ ವರದಿ ಪ್ರಕಾರ ಆದಾಯವನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಿದ್ದು, ಮಾ.31ರವರೆಗೆ ಕೇವಲ 7,067 ಕೋಟಿ ರೂ.ಗೆ ನಿಗದಿ ಮಾಡಲಾಗಿದೆ. ಅಂದರೆ ಶೇ.40 ಕುಗ್ಗಿಸಲಾಗಿದೆ. ಇದೀಗ ಮತ್ತೆ ಬಜೆಟ್ ಗಾತ್ರವನ್ನು 10,899 ಕೋಟಿ ರೂ.ಗೆ ನಿಗದಿಪಡಿಸಿದ್ದು, 2019-20 ಪರಿಷ್ಕೃತ ಆದಾಯ ಹೋಲಿಕೆಯಲ್ಲಿ ಶೇ.53 ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ಯಾವುದೇ ಸರ್ಕಾರ ಒಂದು ವರ್ಷದ ಆದಾಯದಲ್ಲಿ ಶೇ.50 ಆದಾಯ ಹೆಚ್ಚಳ ನಿರೀಕ್ಷಿಸುವುದು ಎಷ್ಟು ವಾಸ್ತವಿಕ ಎಂಬುದು ಪ್ರಶ್ನೆ.

    ಬೆಂಗಳೂರಿನ ಜನರ ಸಮಸ್ಯೆಗಳ ಅರಿವಿಲ್ಲದೆ, ಚುನಾವಣೆ ಹಾಗೂ ಕಾಪೋರೇಟರ್​ಗಳನ್ನು ದೃಷ್ಟಿಯಲ್ಲಿ ಟ್ಟುಕೊಂಡು ಅನುದಾನ ನೀಡಲಾಗಿದೆ. ಉಚಿತ ನೀರು ಕೊಡುವುದು ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ. ಘನತ್ಯಾಜ್ಯ ನಿರ್ವಹಣೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಯಾವುದೇ ಸ್ಪಷ್ಟ ಯೋಜನೆಗಳಿಲ್ಲ.

    | ಶಾಂತಲಾ ದ್ಯಾಮ್ಲೆ ಎಪಿಪಿ ರಾಜ್ಯ ಸಹ ಸಂಚಾಲಕಿ

    ಬಿಬಿಎಂಪಿ ಬಜೆಟ್​| ಉಚಿತ ನೀರಿಗೆ 43 ಕೋಟಿ ರೂ.: ಮಾಸಿಕ 10 ಸಾವಿರ ಲೀ. ನೀರು ಉಚಿತ

    ತಾಯಿಯ ಹಸಿವು ನೀಗಿಸಲು ಕಳ್ಳತನ ಮಾಡಿದ ಹುಡುಗನಿಗೆ ನ್ಯಾಯಾಧೀಶರಿಂದ ಅನಿರೀಕ್ಷಿತ ‘ಶಿಕ್ಷೆ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts