More

    ಇಂದು ಭಾರತ-ಇಂಗ್ಲೆಂಡ್ ನಿರ್ಣಾಯಕ ಟಿ20, ಗೆದ್ದವರಿಗೆ ಟ್ರೋಫಿ

    ಅಹಮದಾಬಾದ್: ಟಾಸ್ ಲೆಕ್ಕಾಚಾರವನ್ನು ತಲೆಕೆಳಗಾಗಿಸಿ 4ನೇ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ದಿಟ್ಟ ತಿರುಗೇಟು ನೀಡಿರುವ ಭಾರತ ತಂಡ ಇದೀಗ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಿದೆ. 2-2 ಸಮಬಲದಲ್ಲಿರುವ ಟಿ20 ಸರಣಿಯ 5ನೇ ಹಾಗೂ ಅಂತಿಮ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿದ್ದು, ವಿರಾಟ್ ಕೊಹ್ಲಿ ಬಳಗ ಸರಣಿ ಜಯಿಸುವ ತವಕದಲ್ಲಿದೆ.

    ಮುಂಬರುವ ಟಿ20 ವಿಶ್ವಕಪ್ ಸಿದ್ಧತೆಗೆ ವೇದಿಕೆಯಾಗಿರುವ ಈ ಸರಣಿಯಲ್ಲಿ ಉಭಯ ತಂಡಗಳೂ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿವೆ. ಹಾಲಿ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಭರ್ಜರಿ ನಿರ್ವಹಣೆ ತೋರಿದ್ದು, ಭಾರತ ಗೆದ್ದ ಸರಣಿಯ ಎರಡು ಪಂದ್ಯಗಳಲ್ಲೂ ಇವರ ಆಟವೇ ನಿರ್ಣಾಯಕ ಪಾತ್ರ ವಹಿಸಿದೆ. ಸರಣಿಯ ಮೊದಲ 3 ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡವೇ ಜಯಿಸಿತ್ತು. ಆದರೆ 4ನೇ ಪಂದ್ಯದಲ್ಲಿ ಭಾರತ ಟಾಸ್ ಸೋತರೂ ಗೆಲುವು ಒಲಿಸಿಕೊಂಡಿರುವುದು ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ಪ್ರಮುಖ ಅಂಶವಾಗಿದೆ. ಅಂಪೈರ್‌ರ ಕೆಲ ವಿವಾದಾತ್ಮಕ ತೀರ್ಪುಗಳು ಮತ್ತು ಇಬ್ಬನಿ ಸಮಸ್ಯೆಯ ನಡುವೆಯೂ ಭಾರತ ತಂಡ ಗೆಲುವು ಒಲಿಸಿಕೊಳ್ಳುವಲ್ಲಿ ಸಫಲವಾಗಿದ್ದು ಗಮನಾರ್ಹ.

    ಇದನ್ನೂ ಓದಿ: VIDEO | ಯುವ ವೇಗಿಯ ಎಸೆತಕ್ಕೆ ಧೋನಿ ಕ್ಲೀನ್ ಬೋಲ್ಡ್, ವಿಡಿಯೋ ವೈರಲ್!

    ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆ. 4ನೇ ಪಂದ್ಯದಲ್ಲಿ ಅವರು 4 ಓವರ್‌ಗಳಲ್ಲಿ ಕೇವಲ 16 ರನ್ ಬಿಟ್ಟುಕೊಟ್ಟಿದ್ದರು. ಚಾಹಲ್ ಬದಲಿಗೆ ಸ್ಥಾನ ಪಡೆದ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಬೌಲಿಂಗ್ ಕೂಡ ಭಾರತದ ಗೆಲುವಿಗೆ ನೆರವಾಗಿದೆ. ಈ ನಡುವೆ ಕನ್ನಡಿಗ ಕೆಎಲ್ ರಾಹುಲ್ ಅವರ ಕಳಪೆ ನಿರ್ವಹಣೆ ತಂಡದ ತಲೆನೋವಾಗಿ ಮುಂದುವರಿದಿದೆ. ಸತತ 2 ಶೂನ್ಯಗಳ ಬಳಿಕ 4ನೇ ಟಿ20ಯಲ್ಲಿ ಅವರು ಕೆಲಕಾಲ ಕ್ರೀಸ್‌ನಲ್ಲಿ ನಿಂತರೂ ದೊಡ್ಡ ಇನಿಂಗ್ಸ್ ಬರಲಿಲ್ಲ.

    ಪಂದ್ಯ ಆರಂಭ: ರಾತ್ರಿ 7.00
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1.

    ಟೀಮ್ ನ್ಯೂಸ್:
    ಭಾರತ: ತಂಡದಲ್ಲಿರುವ ಆಟಗಾರರ ಪೈಕಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರಾಹುಲ್ ತೆವಾಟಿಯಾ ಪದಾರ್ಪಣೆಯಷ್ಟೇ ಬಾಕಿ ಉಳಿದಿದ್ದು, ದುಬಾರಿ ಎನಿಸುತ್ತಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ನಿರ್ಣಾಯಕ ಪಂದ್ಯದಲ್ಲಿ ಸ್ಥಾನ ಪಡೆದರೂ ಅಚ್ಚರಿ ಇಲ್ಲ. ಇಶಾನ್ ಕಿಶನ್ ಫಿಟ್ ಆದರೆ ಈ ಬಾರಿ ಕೆಎಲ್ ರಾಹುಲ್ ಹೊರಬೀಳುವ ಅಪಾಯವೂ ಇದೆ. ಯಾರ್ಕರ್ ಸ್ಪೆಷಲಿಸ್ಟ್ ವೇಗಿ ಟಿ. ನಟರಾಜನ್ ಇದೀಗ ಫಿಟ್ ಆಗಿದ್ದು, ಭುವನೇಶ್ವರ್ ಬದಲಿಗೆ ಕಣಕ್ಕಿಳಿಯಬಹುದು.
    ಇಂಗ್ಲೆಂಡ್: ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ನಂ. 1 ಬ್ಯಾಟ್ಸ್‌ಮನ್ ಎನಿಸಿರುವ ಡೇವಿಡ್ ಮಲಾನ್ ಸರಣಿಯಲ್ಲಿ ಅದಕ್ಕೆ ತಕ್ಕ ಆಟ ಪ್ರದರ್ಶಿಸಿಲ್ಲ. 3ನೇ ವೇಗಿಯಾಗಿ ಕ್ರಿಸ್ ಜೋರ್ಡನ್ ಕೂಡ ದುಬಾರಿಯಾಗುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡ ಬದಲಾವಣೆ ಕಾಣುವುದಾದರೆ ಇವರಿಬ್ಬರು ಆಟಗಾರರನ್ನಷ್ಟೇ ಬದಲಿಸುವ ಸಾಧ್ಯತೆ ಇದೆ. ಇಲ್ಲದಿದ್ದರೆ ಗಾಯದ ಸಮಸ್ಯೆಯಷ್ಟೇ ಬದಲಾವಣೆಗೆ ಕಾರಣವಾಗಬಹುದು.

    ಇಂಗ್ಲೆಂಡ್ ತಂಡಕ್ಕೆ ದಂಡ
    ಭಾರತ ವಿರುದ್ಧದ 4ನೇ ಟಿ20 ಪಂದ್ಯದಲ್ಲಿನ ನಿಧಾನಗತಿ ಓವರ್‌ಗಾಗಿ ಇಂಗ್ಲೆಂಡ್ ತಂಡಕ್ಕೆ ಪಂದ್ಯ ಸಂಭಾವನೆಯ ಶೇ. 20 ದಂಡ ವಿಧಿಸಲಾಗಿದೆ. ನಿಗದಿತ ಸಮಯದ ವೇಳೆ ಇಂಗ್ಲೆಂಡ್ ತಂಡ 1 ಓವರ್ ಹಿಂದುಳಿದಿತ್ತು ಎಂದು ಪರಿಗಣಿಸಿ ಐಸಿಸಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಈ ಶಿಕ್ಷೆ ವಿಧಿಸಿದ್ದಾರೆ.

    ಪಿಚ್ ರಿಪೋರ್ಟ್
    ಸರಣಿಯಲ್ಲಿ ಟಾಸ್ ಗೆದ್ದವರೇ ಬಾಸ್ ಎಂಬ ಮಾತನ್ನು ಭಾರತ ತಂಡ 4ನೇ ಪಂದ್ಯದಲ್ಲಿ ಸುಳ್ಳಾಗಿಸಿದೆ. ಭಾರತ 180 ಪ್ಲಸ್ ಮೊತ್ತ ಪೇರಿಸಿದ್ದು ಇದಕ್ಕೆ ಪ್ರಮುಖ ಕಾರಣ. ಇನ್ನು ಇಬ್ಬನಿ ಸಮಸ್ಯೆಯ ನಡುವೆಯೂ ಶಿಸ್ತುಬದ್ಧ ದಾಳಿ ಸಂಘಟಿಸಿದ ಭಾರತೀಯ ಬೌಲರ್‌ಗಳ ಶ್ರಮವೂ ನೆರವಾಯಿತು. ಅಂತಿಮ ಪಂದ್ಯದಲ್ಲೂ ಟಾಸ್ ಸೋತ ತಂಡ ಇಂಥದ್ದೇ ನಿರ್ವಹಣೆ ತೋರಿದರಷ್ಟೇ ಗೆಲುವು ಒಲಿಸಿಕೊಳ್ಳಬಹುದು.

    1: ಯಾವ ತಂಡ ಸೋತರೂ ಇತ್ತೀಚೆಗಿನ ಅಜೇಯ ಓಟಕ್ಕೆ ತಡೆ ಬೀಳಲಿದೆ. ಭಾರತ ತಂಡ ತನ್ನ ಕೊನೇ 7 ಟಿ20 ಸರಣಿಗಳಲ್ಲಿ 6 ಗೆಲುವು, 1 ಡ್ರಾ ಕಂಡಿದ್ದರೆ, ಇಂಗ್ಲೆಂಡ್ ತನ್ನ ಕೊನೇ 8 ಟಿ20 ಸರಣಿಗಳಲ್ಲಿ 7 ಜಯ, 1 ಡ್ರಾ ಕಂಡಿದೆ.

    40: ರೋಹಿತ್ ಶರ್ಮ (2,800) ಪಂದ್ಯದಲ್ಲಿ 40 ರನ್ ಗಳಿಸಿದರೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗರಿಷ್ಠ ರನ್ ಸಾಧಕರಲ್ಲಿ ಮಾರ್ಟಿನ್ ಗುಪ್ಟಿಲ್‌ರನ್ನು (2,839) ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ. ವಿರಾಟ್ ಕೊಹ್ಲಿ (3,079) ಅಗ್ರಸ್ಥಾನದಲ್ಲಿದ್ದಾರೆ.

    ಇಂದಿನಿಂದ ಮಹಿಳೆಯರ ಟಿ20 ಸರಣಿ
    ಲಖನೌ: ಭಾರತ-ಇಂಗ್ಲೆಂಡ್ ಪುರುಷರ ಟಿ20 ಸರಣಿಯ ಅಂತಿಮ ಪಂದ್ಯದ ದಿನದಂದೇ ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಏಕದಿನ ಸರಣಿಯಲ್ಲಿ ಪ್ರವಾಸಿ ತಂಡದೆದುರು ಕಂಡ ಸೋಲಿಗೆ ಚುಟುಕು ಕ್ರಿಕೆಟ್ ಸರಣಿಯಲ್ಲಿ ತಿರುಗೇಟು ನೀಡಲು ಭಾರತ ತಂಡ ಹಂಬಲಿಸಿದೆ. ಆದರೆ ಅಂತಿಮ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಹರ್ಮಾನ್‌ಪ್ರೀತ್ ಕೌರ್ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರ ಗೈರಿನಲ್ಲಿ ಸ್ಮತಿ ಮಂದನಾ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಮಿಂಚಿದ್ದ 17 ವರ್ಷದ ಶೆಾಲಿ ವರ್ಮ ತಂಡದ ಅಗ್ರ ಸರದಿಗೆ ಬಲ ತುಂಬುವ ನಿರೀಕ್ಷೆ ಇದೆ. ಹರ್ಲೀನ್ ಡಿಯೋಲ್ ಮತ್ತು ರಿಚಾ ಘೋಷ್ ಕೂಡ ಟಿ20 ತಂಡ ಸೇರಿಕೊಂಡಿದ್ದಾರೆ. ಮೂವರು ಕನ್ನಡತಿಯರಾದ ರಾಜೇಶ್ವರಿ ಗಾಯಕ್ವಾಡ್, ಮೋನಿಕಾ ಪಟೇಲ್ ಮತ್ತು ಸಿ. ಪ್ರತ್ಯುಷಾ ಕೂಡ ತಂಡದಲ್ಲಿದ್ದಾರೆ.
    *ಪಂದ್ಯ ಆರಂಭ: ರಾತ್ರಿ 7.00
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2.

    ದಕ್ಷಿಣ ಆಫ್ರಿಕಾಕ್ಕೆ ಕುಲಶೇಖರ ಕಡಿವಾಣ, ಫೈನಲ್‌ಗೇರಿದ ಶ್ರೀಲಂಕಾ ಲೆಜೆಂಡ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts