More

    ಬೀಳಿನ ಬುಟ್ಟಿ ಕಣ್ಮರೆ: ನೇಪಥ್ಯಕ್ಕೆ ಸರಿಯಲು ಕಾರಣ?

    ಬೀಳಿನ ಬುಟ್ಟಿ ಆಧುನಿಕ ಕಾಲಘಟ್ಟದಲ್ಲಿ ನೇಪಥ್ಯಕ್ಕೆ ಸರಿಯುತ್ತಿವೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. – ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಬೇಸಿಗೆ ಮುಗಿಯುತ್ತಿದ್ದಂತೆ ಗ್ರಾಮೀಣ ಭಾಗದ ಕೃಷಿ ಕುಟುಂಬಗಳು ಮಳೆಗಾಲದ ಸಿದ್ಧತೆಯನ್ನು ಮಾಡಿಕೊಳ್ಳುವುದು ಸಾಮಾನ್ಯ. ಅದರಂತೆ ತರಗೆಲೆ ಸಂಗ್ರಹಿಸುವ ಕಾರ್ಯ ಎಲ್ಲೆಡೆ ನಡೆಯುತ್ತಿದ್ದರೂ ತರಗೆಲೆ ಹೊತ್ತು ಸಾಗಲು ಇದೀಗ ಬುಟ್ಟಿಗಳು ಸಿಗದೆ ಕೃಷಿಕರು ಪ್ಲಾಸ್ಟಿಕ್ ಚೀಲ ಅವಲಂಬಿಸುವಂತಾಗಿದೆ.

    ಬಿಸಿಲ ಬೇಗೆ ಏರಿಕೆ ಕಂಡಿರುವುದರಿಂದ ಏಕಾಏಕಿ ಮಳೆ ಬೀಳುವ ಸಾಧ್ಯತೆ ಕರಾವಳಿ ಭಾಗದಲ್ಲಿ ಹೆಚ್ಚು. ಹೀಗಾಗಿ ಮಳೆಗಾಲಕ್ಕೂ ಮೊದಲೇ ತರಗೆಲೆ, ಕಟ್ಟಿಗೆ ಸಂಗ್ರಹಿಸುವ ಕಾರ್ಯ ಹಳ್ಳಿಗಳಲ್ಲಿ ನಡೆಯುತ್ತದ್ಯೆ. ಕೃಷಿ ಕುಟುಂಬಗಳು ಜಾನುವಾರುಗಳ ಸಾಕಣೆಗೆ ಬೇಕಾದ ತರಗೆಲೆ ಸಂಗ್ರಹಿಸುವಲ್ಲಿ ನಿತ್ಯ ತೊಡಗಿಕೊಂಡಿದ್ದು, ಸಂಗ್ರಹಿಸಿಟ್ಟ ತರಗೆಲೆ ಹೊತ್ತು ಸಾಗಲು ಬುಟ್ಟಿಯ ಕೊರತೆ ಎಲ್ಲೆಡೆ ಕಾಣುತ್ತಿದೆ.

    ಇತ್ತೀಚಿನ ದಿನಗಳಲ್ಲಿ ತರಗೆಲೆ ಹೊತ್ತುಕೊಂಡು ಹೋಗುವ ಹಿರಿದಾದ ಬೀಳಿನ ಬುಟ್ಟಿಗಳು(ತುಳುವಿನ ಕುರ್ಕಿಲ್) ಕ್ಷೀಣಿಸುತ್ತಿವೆ. ಕಾಡಿನ ಬದಿಗಳಲ್ಲಿ ವಾಸಿಸುವ ಕೆಲವು ಸಮುದಾಯದ ಜನರು ಬಳ್ಳಿಗಳನ್ನು ಸಂಗ್ರಹಿಸಿ ಅದರಿಂದ ಸುಂದರ ಬುಟ್ಟಿಯನ್ನು(ಕುರ್ಕಿಲ್) ಹೆಣೆದು ಮಾರಾಟ ಮಾಡುತ್ತಿದ್ದರು. ಆದರೆ ಇಂದು ಬಳ್ಳಿಯಿಂದ ತಯಾರಿಸಿದ ಬುಟ್ಟಿಗಳು ಕಾಣ ಸಿಗುವುದು ಅಪರೂಪವಾಗಿದೆ. ತೀರ ಗ್ರಾಮೀಣ ಭಾಗದಲ್ಲಿ ಕೆಲವೆಡೆ ಮಾತ್ರ ಬುಟ್ಟಿಗಳು ಕಂಡುಬರುತ್ತಿದ್ದು, ಬಹುತೇಕ ಕಡೆಗಳಲ್ಲಿ ಬುಟ್ಟಿ ಹೆಣೆಯುವವರು ಇಲ್ಲದೆ ಬಳ್ಳಿಯ ಬುಟ್ಟಿಗಳು ನೇಪಥ್ಯಕ್ಕೆ ಸರಿಯುತ್ತಿವೆ.

    ಹಳ್ಳಿಗಳಲ್ಲಿ ತರಗೆಲೆ ಹೊರಲು ಬೀಳಿನ ಬುಟ್ಟಿ ಬದಲು ಪ್ಲಾಸ್ಟಿಕ್ ಗೋಣಿಗಳು ಹಾಗೂ ಹಳೇ ಸೀರೆಗಳು ಬಳಕೆಯಾಗುತ್ತಿವೆ. ಜಂಬೋ ಗಾತ್ರದ ಪ್ಲಾಸ್ಟಿಕ್ ಗೋಣಿ ಹಾಗೂ ಸೀರೆಗಳಲ್ಲಿ ಸಾಗಾಟ ಸುಲಭ. ಬೀಳಿನ ಬಟ್ಟಿಗಳು ಭಾರ ಹೆಚ್ಚು, ಆದ್ದರಿಂದ ಹಳ್ಳಿಯ ಜನರು ತರಗೆಲೆ ಹೊರಲು ಜಂಬೋ ಗಾತ್ರದ ಪ್ಲಾಸ್ಟಿಕ್ ಗೋಣಿ ಚೀಲ ಹಾಗೂ ಸೀರೆಯನ್ನೇ ಚೀಲದಂತೆ ಪೋಣಿಸಿ ಮಾಡಿಕೊಂಡು ಸಾಗಿಸುವ ಸುಲಭ ಉಪಾಯ ಕಂಡುಕೊಂಡಿದ್ದಾರೆ.

    ತುಳುವಿನಲ್ಲಿ ಕರೆಯುವ ಮಾಜಿರ, ಕುರ್ಕಿಲ್ ಎಂಬ ಬೀಳಿನಿಂದ ಸಿದ್ಧಪಡಿಸಲಾಗುತ್ತಿರುವ ಈ ಬುಟ್ಟಿ ಕೃಷಿ ಕಾಯಕಕ್ಕೆ ಅತ್ಯಗತ್ಯ. ಪ್ಲಾಸ್ಟಿಕ್ ಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೂ, ಈ ಕನ್ನಡಿ ಬುಟ್ಟಿ ಬೇಡಿಕೆ ಕಳೆದುಕೊಂಡಿಲ್ಲ ಎನ್ನುವುದು ವಾಸ್ತವ. ಸಿದ್ಧಪಡಿಸಿದಷ್ಟು ಬೇಡಿಕೆಯನ್ನು ಈ ಬುಟ್ಟಿಗೆ ಇದೆ. ಆದರೆ ಇತ್ತಿಚಿನ ದಿನಗಳಲ್ಲಿ ಬೇಡಿಕೆಯಿದ್ದರೂ ಸಿದ್ಧಪಡಿಸುವ ಮಂದಿ ಸಿಗುವುದು ಕಷ್ಟವಾಗಿದೆ.

    ಬೀಳಿನ ಕೊರತೆ

    ಬೀಳಿನ ಬುಟ್ಟಿಗಳನ್ನು ಈ ಹಿಂದೆ ಅರಣ್ಯ ಪ್ರದೇಶದಲ್ಲಿ ವಾಸಿಸುವ ಮಂದಿ ತಯಾರಿಸುತ್ತಿದ್ದರು . ಆದರೆ ಈಗ ದಿನಗಳಲ್ಲಿ ಎಲ್ಲರೂ ಪಟ್ಟಣದ ಕಡೆಗೆ ಮುಖ ಮಾಡುತ್ತಿರುವುದರಿಂದ ಬೀಳಿನ ಬುಟ್ಟಿ ನಿರ್ಮಿಸುವವರ ಸಂಖ್ಯೆ ಕಡಿಮೆಯಾಗಿದೆ. ಒಂದಷ್ಟು ಮಂದಿ ಬೀಳಿನ ಬುಟ್ಟಿ ನಿರ್ಮಿಸುವವರು ಇದ್ದರೂ ಬೇಕಾಗುವಷ್ಟು ಬೀಳು ಸಿಗುತ್ತಿಲ್ಲ. ಇದ್ದರೂ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಕಾಡುಗಳಲ್ಲಿ ಬೀಳು ತೆಗೆಯುವಂತಿಲ್ಲ. ಅರಣ್ಯ ಕಾಯಿದೆಯನ್ವಯ ಈ ಕಾಯಕ ಕಂಡುಬಂದರೆ ಶಿಕ್ಷಾರ್ಹ. ಗ್ರಾಮೀಣ ಭಾಗದಲ್ಲಿ ಕಾಡುಗಳು ನಾಶವಾಗುತ್ತಿವೆ. ಕಾಡು ಕಡಿದು ನಾಡಾಗಿರುವುದರಿಂದ ಅನೇಕ ಜಾತಿಯ ಬೀಳುಗಳು ಇಂದು ಕಣ್ಮರೆಯಾಗುತ್ತಿವೆ.

    ಯುವಕರಿಗೆ ಕಲಿಯಲು ಆಸಕ್ತಿಯಿಲ್ಲ

    ಹಿರಿಯರಿಂದ ಬಳುವಳಿಯಾಗಿ ಬಂದ ಈ ಕಸುಬುಗಾರಿಕೆಯನ್ನು ಪ್ರಸ್ತುತ ಕೆಲವು ಹಿರಿಯ ನಾಗರಿಕರು ಮುಂದುವರಿಸಿದ್ದಾರೆ. ಯುವ ಜನಾಂಗ ಆಸಕ್ತಿ ವಹಿಸುತ್ತಿಲ್ಲ. ಆಧುನಿಕತೆಯ ಸ್ಪರ್ಶದಿಂದಾಗಿ ಬೀಳುಗಳಿಂದ ಸಿದ್ಧಪಡಿಸಿದ ಸಲಕರಣೆಗಳ ಬದಲಾಗಿ, ಹೊಸ ಆವಿಷ್ಕಾರದ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಪರಿಣಾಮ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ ಎನ್ನುವ ಕಾರಣಕ್ಕಾಗಿ ಯುವ ಸಮುದಾಯ ಕಸುಬನ್ನು ಕಲಿಯಲು ಆಸಕ್ತಿ ವಹಿಸುತ್ತಿಲ್ಲ. ಹಲವು ದಶಕಗಳಿಂದ ಕಾರ್ಕಳದ ಕೆರ್ವಾಶೆಯ ಬೀಳಿನ ಬುಟ್ಟಿಗಳಿಗೆ ಬಹಳ ಡಿಮ್ಯಾಂಡ್ ಇತ್ತು. ಕೆರ್ವಾಶೆ ಬಂಗ್ಲೆಗುಡ್ಡೆ ಸಮೀಪದ ಹೆಕ್ಕಡ್ಕ ನದಿ ಬಳಿಯ ಜಾರಪ್ಪ ಎಂಬವರು ಬೀಳಿನ ಬುಟ್ಟಿಗಳನ್ನು ತಯಾರು ಮಾಡುವಲ್ಲಿ ಫೇಮಸ್ ಆಗಿದ್ದರು. ಅವರು ಕಾರ್ಕಳ ತಾಲೂಕಿನ ಅಜೆಕಾರು, ಮಿಯ್ಯರು, ಬಜಗೋಳಿ, ಹೊಸ್ಮಾರು, ನಾರಾವಿ ಭಾಗದಲ್ಲಿ ಬುಟ್ಟಿ ಮಾರಾಟ ಮಾಡುತ್ತಿದ್ದರು ಅವರು ನಿಧನರಾದ ಬಳಿಕ ಈ ಭಾಗದಲ್ಲಿ ಬುಟ್ಟಿಗಳು ಮೊದಲಿನಂತೆ ಕಾಣಸಿಗುತಿಲ್ಲ. ನಂದಳಿಕೆ, ನಿಟ್ಟೆ, ಕುಂದಾಪುರ, ಬೆಳ್ಮಣ್ ಭಾಗದಲ್ಲಿಯೂ ಒಂದಷ್ಟು ಜನ ಬುಟ್ಟಿ ತಯಾರು ಮಾಡುವ ಹಿರಿಯರಿದ್ದು ಇದೀಗ ಮಾರುಕಟ್ಟೆಯ ಪ್ಲಾಸ್ಟಿಕ್ ಬುಟ್ಟಿ ಬಂದಿರುವುದರಿಂದ ಹಾಗೂ ಸರಿಯಾದ ಬೀಳುಗಳು ಸಿಗದೆ ಬುಟ್ಟಿ ನಿರ್ಮಿಸುವುದನ್ನು ನಿಲ್ಲಿಸಿದ್ದಾರೆ.

    ಪ್ಲಾಸ್ಟಿಕ್ ಸ್ಪರ್ಧೆಯಲ್ಲಿ ಸೋತ ಬೀಳಿನ ಬುಟ್ಟಿ

    ಬೀಳಿನ ಬಟ್ಟಿಗಳನ್ನು ಮಾಡಲು ಹೆಚ್ಚು ಸಮಯ ತಗಲುತ್ತದೆ. ಕಾಡಿನಿಂದ ಬೀಳುಗಳನ್ನು ಆರಿಸಿ ಬಳಿಕ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕು. ನಿತ್ಯ ಎರಡು ದೊಡ್ಡ ಬೀಳಿನ ಬುಟ್ಟಿ ನಿರ್ಮಾಣ ಮಾತ್ರ ಸಾಧ್ಯ. ಪ್ರಸ್ತುತ ರೂ. 500 ರಿಂದ 1000 ರೂ.ಗೆ ಬೀಳಿನ ಬುಟ್ಟಿಗಳು ಮಾರಾಟವಾಗುತ್ತಿದ್ದು, ಹಳ್ಳಿಗರು ಕಡಿಮೆ ಬೆಲೆಯಲ್ಲಿ ಸಿಗುವ ಪ್ಲಾಸ್ಟಿಕ್ ಹಾಗೂ ಸೀರೆಗಳಿಗೆ ಮಾರು ಹೋಗಿದ್ದಾರೆ.

    ಪಶ್ಚಿಮ ಘಟ್ಟಗಳಿಂದ ಬೀಳನ್ನು ಆಯ್ದು ತಂದು ಕುರ್ಕಿಲ್ ಮಾಡುವಲ್ಲಿ ಜಾರಪ್ಪ ಹೆಸರು ತಾಲೂಕಿನಲ್ಲೆ ಬಲು ಪ್ರಸಿದ್ಧಿ. ಜಾಣ್ಮೆ ನೈಪುಣ್ಯತೆಯ ಅವರ ಕೆಲಸ ಹಾಗೂ ಗಟ್ಟಿಮುಟ್ಟಾದ ಬುಟ್ಟಿ ಬಾಳಿಕೆಗೆ ಹೆಸರುವಾಸಿ. ಇದೀಗ ಅವರ ಬಳಿಕ ಈ ಭಾಗದಲ್ಲಿ ಬೀಳಿನ ಬುಟ್ಟಿಗಳೇ ಸಿಗುತ್ತಿಲ್ಲ.
    -ನಾರಾಯಣ ಗುಡಿಗಾರ್, ಕೆರ್ವಾಶೆ

    ಬೀಳಿನ ಬುಟ್ಟಿಗಳಿಗೆಬೇಡಿಕೆಯಿದ್ದರೂ ಬುಟ್ಟಿಗಳು ಸಿಗುತ್ತಿಲ್ಲ. ಅಲ್ಲದೆ ಕೃಷಿಕರಿಗೆ ಕಡಿಮೆ ಬೆಲೆಯಲ್ಲಿ ಪ್ಲಾಸ್ಟಿಕ್ ಚೀಲ ಹಾಗೂ ಬುಟ್ಟಿಗಳು ದೊರಕುವುದರಿಂದ ಹೆಚ್ಚಾಗಿ ಪ್ಲಾಸ್ಟಿಕ್ ಚೀಲದತ್ತ ಮೊರೆಹೋಗುತ್ತಿದ್ದಾರೆ.
    -ಧರಣೇಂದ್ರ ಜೈನ್, ಕೃಷಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts