More

    ಸೊರಗುತ್ತಿವೆ ಜಲಮೂಲಗಳು

    ಶ್ರವಣ್‌ಕುಮಾರ್ ನಾಳ, ಪುತ್ತೂರು
    ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ, ಇನ್ನೂ ಮಳೆಯಾಗುತ್ತಿದೆ. ಆದರೆ, ನದಿಗಳು ಮಾತ್ರ ಸೊರಗಿದಂತೆ ಕಾಣುತ್ತಿವೆ, ಜಲಮೂಲಗಳು ಬರಿದಾಗುವ ಹಾದಿಯಲ್ಲಿವೆ.
    ಭವಿಷ್ಯತ್ತಿನಲ್ಲಿ ನದಿಮೂಲಗಳು ಬರಿದಾಗಬಹುದು ಎಂದು ಹೇಳಿದ್ದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ವರದಿ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ವರ್ಷ ಜಲಸ್ಫೋಟ ಪರಿಣಾಮ ಈ ಬಾರಿ ಮಳೆಗಾಲದಲ್ಲಿ ಪಶ್ಚಿಮಘಟ್ಟದ ನದಿಮೂಲಗಳಲ್ಲಿ ನೀರಿನ ಪ್ರಮಾಣ ಹೆಚ್ಚು ಕಂಡುಬಂದಿತ್ತು. ಆದರೆ ಈಗ ಮಳೆಗಾಲದ ಅಂತಿಮ ಕ್ಷಣಗಳಲ್ಲಿ ಪಶ್ಚಿಮಘಟ್ಟದ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಕೆಯಾಗಿದೆ.
    ಪಶ್ಚಿಮಘಟ್ಟದ ಬೆಟ್ಟಗಳು ನೇತ್ರಾವತಿ ಉಪನದಿಗಳು ನದಿಮೂಲಗಳು. ಒಟ್ಟು ಬೆಟ್ಟ ಪ್ರದೇಶಗಳಲ್ಲಿ ಜೂನ್ 1ರಿಂದ ಅಕ್ಟೋಬರ್ 30ರವರೆಗೆ ದಿನಕ್ಕೆ ಸರಾಸರಿ 494 ಮಿ.ಮೀ ವಾಡಿಕೆ ಮಳೆಯಾಗುವಲ್ಲಿ 483 ಮಿ.ಮೀ. (ಶೇ.5 ಕೊರತೆ)ಯಾಗಿದೆ. ಆದರೂ ನೀರಿನ ಹರಿಯುವಿಕೆ ಪ್ರಮಾಣ ಹೆಚ್ಚಾಗಿತ್ತು.

    ನೀರಿನ ಕೊರತೆ ಸಾಧ್ಯತೆ: ಇತ್ತೀಚೆಗೆ ‘ವಿಜಯವಾಣಿ’ ತಂಡ ಪುಷ್ಪಗಿರಿ ಬೆಟ್ಟದ ವಿರುದ್ಧ ದಿಕ್ಕಿನಲ್ಲಿರುವ ಕನ್ನಡಿಕಲ್ಲು ಬೆಟ್ಟ ವ್ಯಾಪ್ತಿಗೆ ಭೇಟಿ ನೀಡಿದ ಸಂದರ್ಭ ಬಹುತೇಕ ಕಡೆ ನೀರಿನ ಒರತೆ ಕ್ಷೀಣವಾಗಿತ್ತು. ಗಿರಿಹೊಳೆ ಹಾಗೂ ಅಡ್ಡಹೊಳೆಗಳಲ್ಲೂ ನೀರು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಡಿಸೆಂಬರ್‌ವರೆಗೆ ತುಂಬಿ ಹರಿಯಬೇಕಿದ್ದ ನೇತ್ರಾವತಿ ಉಪನದಿಗಳಾದ ಕೆಂಪುಹೊಳೆ, ಎಳನೀರು ಹೊಳೆ, ಮೃತ್ಯುಂಜಯ ಹೊಳೆ, ಅಣಿಯೂರು ಹೊಳೆ, ಕುಮಾರಧಾರಾ, ಕಪಿಲಾ, ಬಂಡಾಜೆ, ಸುನಾಲ, ನೆರಿಯಾ ಹೊಳೆಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಹೀಗೆ ಮುಂದುವರಿದರೆ ಈ ಬಾರಿ ಕರಾವಳಿಗೆ ನೀರಿನ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಿದೆ.

    ಪಶ್ಚಿಮಘಟ್ಟಕ್ಕೆ ಹಾನಿಯ ಪರಿಣಾಮ: ಪಶ್ಚಿಮಘಟ್ಟದ ಸುತ್ತಮುತ್ತ ಜಲಸ್ಫೋಟ, ಗುಡ್ಡಕುಸಿತ ಸಹಿತ ಪ್ರಾಕೃತಿಕ ವಿಕೋಪ ಸಂಭವಿಸಲು ಪಶ್ಚಿಮಘಟ್ಟದ ಭೌಗೋಳಿಕ ವಿನ್ಯಾಸಕ್ಕೆ ಹಾನಿಯಾಗಿರುವುದೇ ಮೂಲ ಕಾರಣ ಎಂಬುದಾಗಿ ಜಿಎಸ್‌ಐ ತಜ್ಞರು 2019ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅದರ ಮುಂದುವರಿದ ಭಾಗವಾಗಿಯೇ ಜಲಮೂಲಗಳು ಬರಿದಾಗುತ್ತಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಇದಕ್ಕೆ ಪರಿಹಾರ ಒದಗಿಸುವ ಯಾವುದೇ ಯೋಜನೆ ಇದುವರೆಗೂ ಸರ್ಕಾರದಿಂದ ರೂಪುಗೊಂಡಿಲ್ಲ. ಹೀಗೆ ಮುಂದುವರಿದರೆ ಶಾಶ್ವತವಾಗಿ ನೀರಿನ ಬರ ಎದುರಾಗುವ ಭೀತಿ ಇದೆ.

    ನೇತ್ರಾವತಿ ನದಿಮೂಲಗಳಾದ ಕುದುರೆಮುಖ, ದುರ್ಗದ ಬೆಟ್ಟ, ಮಧುಗುಂಡಿ, ಬಾಲೂರುಗುಡ್ಡ, ಸೋಮನ ಕಾಡು, ಬಾರಿಮಲೆ, ಕಾಗಿನಿಲೆ, ಎತ್ತಿನಬುಜ, ಪುಪ್ಪಗಿರಿ ಪ್ರದೇಶ ಸೇರಿದಂತೆ 48 ಪ್ರದೇಶಗಳಿಗೆ ತೆರಳಿ ಸ್ಥಳ ತನಿಖೆ ನಡೆಸಿದ್ದ ವಿಜ್ಞಾನಿಗಳಾದ ಕಪಿಲ್‌ಸಿಂಗ್ ಹಾಗೂ ಕಮಲ್ ಕುಮಾರ್ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಗಣನೀಯ ಪ್ರಮಾಣದಲ್ಲಿ ಪಶ್ಚಿಮಘಟ್ಟದ ಭೌಗೋಳಿಕ ವಿನ್ಯಾಸಕ್ಕೆ ಹಾನಿಯಾಗಿದ್ದರಿಂದ ಭವಿಷ್ಯತ್ತಿನಲ್ಲಿ ನದಿಮೂಲಗಳು ಬರದಾಗಬಹುದು ಎಂದಿರುವ ತಜ್ಞರು, ಹೊಸ ನದಿಮೂಲಗಳ ಸೃಷ್ಟಿ, ನದಿಗಳ ದಿಕ್ಕು ಬದಲಾವಣೆ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

    ಪಶ್ಚಿಮಘಟ್ಟದ ಭೌಗೋಳಿಕ ವಿನ್ಯಾಸಕ್ಕೆ ಹಾನಿಯಾದಾಗ ಇದರ ತಕ್ಷಣದ ಪರಿಣಾಮ ನದಿಮೂಲಗಳಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಕೆಯಾಗುವುದು. ಈ ಬಗ್ಗೆ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಸರ್ಕಾರ ವರದಿಯನ್ನು ಪರಿಶೀಲಿಸಿ, ಪಶ್ಚಿಮಘಟ್ಟದ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಿತ್ತು.
    – ದಿನೇಶ್ ಹೊಳ್ಳ, ಪರಿಸರ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts