More

    ಬಸಿ ನೀರಿಗೆ ಬೇಸತ್ತ ಗುರು – ಶಿಷ್ಯರು, ಜಾಲಹಳ್ಳಿ ಸರ್ಕಾರಿ ಪ್ರೌಢಶಾಲೆ ದುಃಸ್ಥಿತಿ

    ವಿಜಯವಾಣಿ ವಿಶೇಷ ದೇವದುರ್ಗ

    ತಾಲೂಕಿನ ಜಾಲಹಳ್ಳಿ ಬಾಲಕರ ಸರ್ಕಾರಿ ಪ್ರೌಢಶಾಲೆಗೆ ಗದ್ದೆಯಿಂದ ಬರುತ್ತಿರುವ ಬಸಿನೀರು ಕಂಟಕವಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳು, ಶಿಕ್ಷಕರು ಬಸಿಯುವ ನೀರಿಗೆ ಬೇಸತ್ತಿದ್ದು, ಕಟ್ಟಡ ಶಿಥಿಲಗೊಳ್ಳುವ ಆತಂಕ ಎದುರಾಗಿದೆ.

    ಜಾಲಹಳ್ಳಿ ಹೊರವಲಯದ ಲಿಂಗದಹಳ್ಳಿ ರಸ್ತೆಯಲ್ಲಿ ನಾಲ್ಕು ಎಕರೆ ಜಾಗದಲ್ಲಿ ಪ್ರೌಢ ಶಾಲೆ ನಿರ್ಮಿಸಲಾಗಿದೆ. ಕೆಲ ವರ್ಷಗಳ ಹಿಂದೆ ಎದುರುಗಡೆ ಸರ್ಕಾರಿ ಪಿಯು ಕಾಲೇಜು ಪ್ರಾರಂಭಿಸಲಾಗಿದೆ. ಪ್ರೌಢ ಶಾಲೆಯಲ್ಲಿ 350 ಕಾಲೇಜಿನಲ್ಲಿ 200 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಟ್ಟಡದ ಸುತ್ತಲೂ ಅಕ್ಕಪಕ್ಕದ ಗದ್ದೆಯಿಂದ ಬಸಿನೀರು ಬರುತ್ತಿದ್ದು, ಸಂಕಷ್ಟ ಅನುಭವಿಸುವಂತಾಗಿದೆ.

    ಇದನ್ನೂ ಓದಿ: ತೇವಾಂಶ ತಡೆಯಲು ಬಸಿಗಾಲುವೆ ಮಾಡಿ

    ಕಟ್ಟಡದ ಸುತ್ತಲೂ ಗದ್ದೆಗಳಿದ್ದು ರೈತರು ಭತ್ತನಾಟಿ ಮಾಡಿದ್ದಾರೆ. ನೀರಾವರಿ ಬರುವ ಮುನ್ನವೇ ಪ್ರೌಢಶಾಲೆಗೆ ಜಾಗ ಗುರುತಿಸಿ ಕಟ್ಟಡ ನಿರ್ಮಿಸಲಾಗಿತ್ತು. ಅಂದು ರಸ್ತೆಗಿಂತ ಕೆಳಭಾಗದಲ್ಲಿ ಕಟ್ಟಡ ಹಾಗೂ ಗ್ರೌಂಡ್ ನಿರ್ಮಿಸಲಾಗಿತ್ತು. ನಾರಾಯಣಪುರ ಬಲದಂಡೆ ನಾಲೆ ನೀರಾವರಿ ನಂತರ ಸುತ್ತಲಿನ ಗದ್ದೆಗಳು ಮೇಲ್ಭಾಗದಲ್ಲಿದ್ದು, ಬಸಿ ನೀರು ಶಾಲೆ ಆವರಣಕ್ಕೆ ನುಗ್ಗುತ್ತಿದೆ.

    ಐದು ವರ್ಷಗಳ ಹಿಂದೆ ಕರ್ನಾಟಕ ಕಲ್ಯಾಣವೃದ್ಧಿ ಮಂಡಳಿಯಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ 3 ಮಹಡಿಯ ಹೊಸ ಕಟ್ಟಡ ನಿರ್ಮಿಸಲಾಗಿದೆ. ರೈತರು ಭತ್ತ ಬೆಳೆಯಲು ಗದ್ದೆಯಲ್ಲಿ ನೀರು ಸಂಗ್ರಹ ಮಾಡಿದ್ದರಿಂದ ಶಾಲೆ ಕಟ್ಟಡದ ಬುನಾದಿಯಲ್ಲೆ ನೀರಿನ ಬುಗ್ಗೆಗಳು ಏಳುತ್ತಿವೆ. ಮೈದಾನದಲ್ಲಿ 10ಕ್ಕೂ ಹೆಚ್ಚು ಹಳೆಯ ಕಟ್ಟಡಗಳಿದ್ದು, ಬೀಳುವ ಹಂತಕ್ಕೆ ತಲುಪಿವೆ. ಕಟ್ಟಡದ ಸುತ್ತಲೂ ಬಸಿನೀರು ಸೋಸುವುದರಿಂದ ಕಟ್ಟಡಕ್ಕೆ ಹಾನಿಯಾಗಿದ್ದು, ಅಲ್ಲಲ್ಲಿ ಬುನಾದಿ ಸಿಮೆಂಟ್ ಉದುರು ಬೀಳುತ್ತಿದೆ.

    ಮೈದಾನದಲ್ಲಿ ನಿತ್ಯ ಯುವಕರು ವಿವಿಧ ಕ್ರೀಡೆ ಆಡುತ್ತಾರೆ. ಪ್ರೌಢಶಾಲೆಗಳ ಕ್ರೀಡಾಕೂಟ ಇಲ್ಲೇ ಆಯೋಜನೆ ಮಾಡಲಾಗುತ್ತಿದೆ. ಅವಘಡ ಸಂಭವಿಸುವ ಮುನ್ನ ಎಚ್ಚೇತ್ತುಕೊಳ್ಳಬೇಕಾಗಿದೆ. ಹಳೆ ಕಟ್ಟಡಗಳನ್ನು ತೆರವುಗೊಳಿಸಬೇಕು ಎನ್ನುವ ಒತ್ತಾಯಕ್ಕೆ ಸ್ಪಂದನೆ ದೊರೆತಿಲ್ಲ.

    ಶಿಥಿಲಗೊಂಡ ಕಟ್ಟಡ ತೆರವುಗೊಳಿಸದಿದ್ದರೆ ಅನಾಹುತ ಸಂಭವಿಸುವುದು ಕಟ್ಟತ್ತ ಬುತ್ತಿಯಾಗಿದೆ. ಕಟ್ಟಡ ಸುತ್ತಲೂ ಗಿಡ ಗಂಟಿ, ಮುಳ್ಳು ಬೆಳೆದಿರುವುದರಿಂದ ವಿಷ ಜಂತುಗಳು ಶಾಲೆಗೆ ಬರುತ್ತಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಜೀವದ ಭಯ ಕಾಡುವಂತಾಗಿದೆ.

    ಪ್ರೌಢ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸುತ್ತಲಿನ ಹೊಲ ಗದ್ದೆಗಳ ಬಸಿನೀರು ಶಾಲೆ ಆವರಣಕ್ಕೆ ಬರುತ್ತದೆೆ. ಬಸಿ ನೀರು ತಡೆಗೆ ಬಸಿಗಾಲವೆ ನಿರ್ಮಿಸಲಾಗಿದೆ. ವಿಶೇಷ ಅನುದಾನ ಕಾಯ್ದಿರಿಸಿದ್ದು, ಮುಂದಿನ ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು.
    | ಪತ್ತ್ಯೆಪ್ಪ ರಾಠೋಡ್, ಪಿಡಿಒ ಜಾಲಹಳ್ಳಿ ಗ್ರಾಪಂ.

    ಪ್ರೌಢ ಶಾಲೆ, ಕಾಲೇಜು ಆವರಣದಲ್ಲಿ ಬಸಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಪಿಡಿಒ ಜತೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ವಿಶೇಷ ಅನುದಾನ ಕಾಯ್ದಿರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಸದ್ಯ ಬಿಸಿಗಾಲವೆ ತೆಗೆದು ನೀರು ಹೊರಗಡೆ ಹೋಗುವಂತೆ ಮಾಡಲಾಗುವುದು.
    | ಅಯ್ಯಪ್ಪಸ್ವಾಮಿ ಗಣಜಲಿಮಠ, ಗ್ರಾಪಂ ಸದಸ್ಯ

    ಶಾಲೆಗೆ ಬಸಿ ನೀರಿನ ಸಮಸ್ಯೆ ಕಾಡುತ್ತಿದೆ. ಪರಿಹಾರ ಕಲ್ಪಿಸಲು ಈಗಾಗಲೇ ಗ್ರಾಪಂ ಅಧ್ಯಕ್ಷ, ಪಿಡಿಒಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಹಳೆಯ ಕಟ್ಟಡ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
    | ನಿಂಗಪ್ಪ ನಾಯಕ, ಪ್ರಭಾರ ಮುಖ್ಯಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts