More

    ಬಿ.ಜಿ.ಕೆರೆಯಲ್ಲಿ ವಿಜೃಂಭಣೆಯ ಬಸವೇಶ್ವರ ರಥೋತ್ಸವ

    ಕೊಂಡ್ಲಹಳ್ಳಿ: ಇಲ್ಲಿನ ಬಿ.ಜಿ.ಕೆರೆಯಲ್ಲಿ ಮಂಗಳವಾರ ಬಸವೇಶ್ವರಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಉತ್ಸವದ ಅಂಗವಾಗಿ ಬೆಳಗ್ಗೆ ಸ್ವಾಮಿಯ ವಿಗ್ರಹಕ್ಕೆ ಪೂಜೆ, ಬಲಿ ಅನ್ನವನ್ನು ರಥಕ್ಕೆ ಅರ್ಪಿಸಲಾಯಿತು. ಭಕ್ತರಿಂದ ದೇವರಿಗೆ ಎಡೆ ಅರ್ಪಣೆ, ಇತರೆ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು.

    ರಥವನ್ನು ವಿವಿಧ ಬಗೆಯ ಹೂವಿನ ಹಾರದಿಂದ ಅಲಂಕರಿಸಲಾಗಿತ್ತು. ಪುಷ್ಪಾಲಂಕಾರಗೊಂಡ ಪಲ್ಲಕ್ಕಿಯಲ್ಲಿ ಆಗಮಿಸಿದ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು. ಸ್ವಾಮಿಗೆ ಜೈಕಾರ ಕೂಗುತ್ತಾ ಭಕ್ತರು ದೇಗುಲದ ಮುಂಭಾಗದಿಂದ ಪಾದಗಟ್ಟೆಯವರೆಗೆ ರಥ ಎಳೆದರು.

    ಪಾದಗಟ್ಟೆಯಿಂದ ದೇಗುಲಕ್ಕೆ ಮರಳುವಾಗ ಭಕ್ತರು ಉರುಳು ಸೇವೆ ಸಲ್ಲಿಸಿದರು. ಸೂರುಬೆಲ್ಲ, ಬಾಳೆಹಣ್ಣುಗಳನ್ನು ತೇರಿಗೆ ಎಸೆದು, ಹಣ್ಣು-ಕಾಯಿಗಳನ್ನು ಸಮರ್ಪಿಸುವ ಮೂಲಕ ತಮ್ಮ ಹರಕೆ ತೀರಿಸಿದರು.

    ಉತ್ಸವದಲ್ಲಿ ನಂದಿಕೋಲು, ಕೋಲಾಟ, ವೀರಗಾಸೆ, ಕರಡಿ ಮಜಲು, ಭಜನೆ ಎಲ್ಲರ ಗಮನ ಸೆಳೆದವು. ದೇವಾಲಯದ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಪಂ ಸದಸ್ಯ ಡಾ.ಬಿ.ಯೋಗೇಶ್‌ಬಾಬು, ಗ್ರಾಪಂ ಅಧ್ಯಕ್ಷ ಎಸ್.ಜಯಣ್ಣ, ಉಪಾಧ್ಯಕ್ಷ ಮಂಗಳ ರಮೇಶಗೌಡ್ರು, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಅಜ್ಜಪ್ಪ ಇತರರು ಸ್ವಾಮಿಯ ದರ್ಶನ ಪಡೆದರು.

    1.05 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು: ಬಸವೇಶ್ವರ ಸ್ವಾಮಿ ರಥದ ಮುಕ್ತಿ ಬಾವುಟವನ್ನು ಹರಾಜು ಕೂಗಲಾಯಿತು. ಗೊಂಚಿಗಾರ್ ನಾಗರಾಜಪ್ಪ 1.05 ಲಕ್ಷ ರೂ.ಗಳಿಗೆ ಬಾವುಟ ಪಡೆದರು.

    ಉತ್ಸವಕ್ಕೆ ಕೊಂಡ್ಲಹಳ್ಳಿ, ಮೊಳಕಾಲ್ಮೂರು, ಕೋನಸಾಗರ, ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ, ರಾಯದುರ್ಗ ಹಾಗೂ ಆಂಧ್ರದ ಭಕ್ತರು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts