More

    ಕೃಷಿಯಲ್ಲಿ ಖುಷಿ ಕಂಡ ಬಸವರಾಜ

    ಚಂದ್ರಶೇಖರಯ್ಯ ಹಿರೇಮಠ ಮುಂಡಗೋಡ

    ಯುವ ಜನತೆ ಕೃಷಿಯಿಂದ ದೂರ ಸರಿಯುತ್ತಿರುವ ಸಂದರ್ಭದಲ್ಲಿ ತಾಲೂಕಿನ ಯುವಕನೊಬ್ಬ ತನ್ನ ಜಮೀನಿನಲ್ಲಿ ಸಮಗ್ರ ಕೃಷಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ರೈತನಾಗಿ ಹೊರ ಹೊಮ್ಮಿದ್ದಾನೆ.

    ಮುಂಡಗೋಡ ನಂದಿಗಟ್ಟ ಪಂಚಾಯಿತಿ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಯುವ ರೈತ ಬಸವರಾಜ ಈರಯ್ಯ ನಡುವಿನಮನಿ ಪರಂಪರಾಗತವಾಗಿ ಬಂದ ಕೃಷಿ ಭೂಮಿಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿಗಳನ್ನು ಅಳವಡಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಪದವಿ ಮುಗಿದ ನಂತರ ಪೊಲೀಸ್ ಅಧಿಕಾರಿಯಾಗಬೇಕು ಎಂದು ಯೋಚಿಸಿ ಪರೀಕ್ಷೆ ಎದುರಿಸಿ, ಸಂದರ್ಶನವನ್ನೂ ನೀಡಿದ್ದರು. ಆದರೆ, ನೌಕರಿ ದೊರೆಯದಿದ್ದಾಗ ತಮ್ಮ ಪೂರ್ವಜರಿಂದ ಬಂದ ಜಮೀನಿನಲ್ಲಿ ಕೃಷಿ ಆರಂಭಿಸಿದರು. ತಮ್ಮ ಪಾಲಿನ 63 ಎಕರೆಯಲ್ಲಿ ಇಸ್ರೇಲ್ ಮಾದರಿ ಕೃಷಿ, ಸಮಗ್ರ ಹಾಗೂ ಅರಣ್ಯ ಕೃಷಿ ಅಳವಡಿಸಿಕೊಂಡರು. ತೋಟದಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಇಡೀ ತೋಟದಲ್ಲಿ ಸ್ಪ್ರಿಂಕ್ಲರ್ ಅಳವಡಿಸಿ, ರಾತ್ರಿಯಿಡೀ ಗಾಯತ್ರಿ ಮಂತ್ರ ಹಚ್ಚಿಡುತ್ತಾರೆ. ಗಿಡಗಳೂ ಸಂಗೀತ ಆಲಿಸಿ ಖುಷಿಯಾಗಿರುತ್ತವೆ ಎಂಬುದನ್ನು ಕೇಳಿದ್ದೇನೆ. ಇದರಿಂದ ಎರಡು ವರ್ಷಗಳಲ್ಲಿ ಸಕಾರಾತ್ಮಕ ಫಲಿತಾಂಶ ಕಂಡಿದ್ದೇನೆ ಎನ್ನುತ್ತಾರವರು.

    ಸಮಗ್ರ ಕೃಷಿ: ಅಡಕೆ ತೋಟದ ನಡುವೆ, ಪಕ್ಕದಲ್ಲಿ ಶ್ರೀಗಂಧ, ಮಹಾಗನಿ, ಸಿಲ್ವರ್ ಓಕ್, ರಕ್ತ ಚಂದನ ಮುಂತಾದ ಅರಣ್ಯ ಗಿಡಗಳನ್ನು ಬೆಳೆಸಿದ್ದಾರೆ. ಅರಣ್ಯ ಕೃಷಿ ದೀರ್ಘಕಾಲದಲ್ಲಿ ಕೋಟ್ಯಂತರ ರೂ. ಆದಾಯ ನೀಡಿ ರೈತರನ್ನು ಸಶಕ್ತರನ್ನಾಗಿ ಮಾಡುತ್ತದೆ ಎನ್ನುತ್ತಾರವರು. ಅಲ್ಲದೆ, ಕರಿಬೇವು, ಗೋಡಂಬಿ, ಲಿಂಬು, ಕಾಳು ಮೆಣಸು, ಏಲಕ್ಕಿ ಹಲಸು, ಕಾಫಿ, ಪಪ್ಪಾಯ ಮುಂತಾದ ಬೆಳೆಗಳನ್ನು ವಾಣಿಜ್ಯಿಕವಾಗಿ ಬೆಳೆಯುತ್ತಿದ್ದಾರೆ. ಹೊಂಡದಲ್ಲಿ ಮೀನುಗಾರಿಕೆ, ಕೃಷಿಗೆ ಪೂರಕವಾಗಿ ಹೈನುಗಾರಿಕೆ ಮಾಡುತ್ತಿದ್ದಾರೆ. ‘ಸದ್ಯ ನನಗೆ ಅಡಕೆಯ ಜತೆ ಬಾಳೆ, ಪಪ್ಪಾಯ, ಕಾಳು ಮೆಣಸು ಮುಂತಾದವು ಆದಾಯ ನೀಡುತ್ತಿವೆ. ಇಂಥ ಉಪ ಬೆಳೆಗಳು ಹವಾಮಾನ ವೈಪರೀತ್ಯ, ಬೆಲೆಗಳ ಏರಿಳಿತದಿಂದ ರೈತರು ಸಂಕಷ್ಟ ಅನುಭವಿಸುವುದನ್ನು ತಪ್ಪಿಸುತ್ತವೆ’ ಎನ್ನುತ್ತಾರವರು.

    ಪ್ರಶಸ್ತಿಗಳು: ಬಸವರಾಜ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ. ಕೃಷಿ ಕಾಡು ಕರ್ತಾರು ಪ್ರಶಸ್ತಿ, ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಜಿಲ್ಲಾ ಮಟ್ಟದ ಯುವ ಶ್ರೇಷ್ಠ ಕೃಷಿಕ ಪ್ರಶಸ್ತಿ, ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯದ ರಾಜ್ಯ ಮಟ್ಟದ ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿ, ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಸಹ ಪುರಸ್ಕಾರ ನೀಡಿ ಸನ್ಮಾನಿಸಿವೆ.

    ವೈಜ್ಞಾನಿಕ ಪದ್ಧತಿ ಅಳವಡಿಕೆ: ಪ್ರತಿ ಮೂರು ವರ್ಷಗಳಿಗೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುತ್ತೇನೆ. ಅದಕ್ಕೆ ಅನುಗುಣವಾಗಿ ಗೊಬ್ಬರ ನೀಡುತ್ತೇನೆ. ನಮ್ಮ ಊರಿನ ಪಕ್ಕ ಗೌಳಿಗಳು ಸಾಕುವ ಜಾನುವಾರುಗಳ ಗೊಬ್ಬರ ಪಡೆದು ಹಾಕುತ್ತೇನೆ. ಮಣ್ಣು ಪರೀಕ್ಷೆಯ ಫಲಿತಾಂಶ ನೋಡಿಕೊಂಡು ಅವಶ್ಯಕತೆಗೆ ಅನುಗುಣವಾಗಿ ಅಲ್ಪ ರಾಸಾಯನಿಕ ಗೊಬ್ಬರ ನೀಡುತ್ತೇನೆ ಎನ್ನುತ್ತಾರೆ ಬಸವರಾಜ ನಡುವಿನಮನಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts