More

    ಸಮಾಜಕ್ಕೆ ಬದ್ಧತೆಯ ಮಾರ್ಗ ತೋರಿದ ಸಂತ

    ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅಭಿಪ್ರಾಯ — ಬಸವಣ್ಣ, ಮಲ್ಲಮ್ಮ ಜಯಂತಿ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಬಸವಣ್ಣ ತನ್ನ ನಡೆ-ನುಡಿಗಳಿಂದಲೇ ದೈವತ್ವಕ್ಕೆ ಕಾರಣರಾದವರು. ಅವರು ವಚನಗಳ ಮೂಲಕ ಸಮಾಜದಲ್ಲಿರುವ ಮೌಢ್ಯ, ಮೇಲು-ಕೀಳು ಎಂಬ ಭಾವ ಹೋಗಲಾಡಿಸಿ, ಸಮಾಜದ ನಡೆ ಹಾಗೂ ಬದ್ಧತೆ ಹೇಗಿರಬೇಕೆಂಬ ಮಾರ್ಗ ತೋರಿದ ಸಂತರಾಗಿದ್ದಾರೆ. ಅಂತೆಯೇ ಹೇಮರೆಡ್ಡಿ ಮಲ್ಲಮ್ಮ ಸಹ ಇಂದಿನ ಸ್ತ್ರೀ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.

    ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವಣ್ಣ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಉತ್ತಮ ಪ್ರತಿಫಲ

    ಬಸವಣ್ಣ 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ದೇಶಾದ್ಯಂತ ಕ್ರಾಂತಿ ಮೂಡಿಸಿದ್ದರು. ಅವರ ‘ಕಾಯಕವೇ ಕೈಲಾಸ’ ಎಂಬ ಆಶಯದಂತೆ ಪ್ರತಿಯೊಬ್ಬರೂ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಉತ್ತಮ ಪ್ರತಿಫಲ ದೊರೆಯುತ್ತದೆ ಎಂದರು.

    ಸಮ ಸಮಾಜ ನಿರ್ಮಾಣ

    ಶರಣ ಸಮಿತಿಯ ಅಧ್ಯಕ್ಷ ಡಾ. ನಿರಂಜನ್​ ಮಾತನಾಡಿ, ಬಸವಣ್ಣ ಅವರು ಮತ, ವರ್ಗ ಯಾವುದೇ ಭೇದವಿಲ್ಲದೆ ಎಲ್ಲರೂ ಒಂದೇ ಎಂಬುದನ್ನು ಸಾರಿದರು. ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಕನ್ನಡದಲ್ಲಿ ಅಧ್ಯಾತ್ಮ ಹೇಳುವ ಮೂಲಕ ಅನೇಕ ವಚನಕಾರರು ಹಾಗೂ ವಚನಗಾರ್ತಿಯರನ್ನು ಮುನ್ನಲೆಗೆ ತಂದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ ಎಂದರು.

    ತೆಲಗು ಭಾಷೆಯಲ್ಲೂ ಸಾಹಿತ್ಯ

    ಹೇಮರೆಡ್ಡಿ ಮಲ್ಲಮ್ಮಳ ತತ್ವ ಪದಗಳು, ಲಾವಣಿ ಹಾಗೂ ಜನಪದ ಗೀತೆಗಳು ಇಂದಿಗೂ ಉತ್ತರ ಕರ್ನಾಟಕ ಭಾಗದಲ್ಲಿ ಬೇಸಾಯದ ಸಮಯದಲ್ಲಿ ಬಳಕೆ ಮಾಡುತ್ತಾರೆ. ಕನ್ನಡವಷ್ಟೇ ಅಲ್ಲದೆ, ತೆಲಗು ಭಾಷೆಯಲ್ಲೂ ಸಾಹಿತ್ಯ ರಚಿಸಿದ್ದು, ಆಂಧ್ರ ಪ್ರದೇಶದ ನಾಡಗೀತೆಯಲ್ಲಿ ಮಲ್ಲಮ್ಮಳ ಪತಿ ಭಕ್ತಿಯ ಕುರಿತು ಉಲ್ಲೇಖವಿದೆ. ಗುಲ್ಬರ್ಗ ವಿವಿಯಲ್ಲಿ ಮಲ್ಲಮ್ಮ ಅಧ್ಯಯನ ಪೀಠ ಆರಂಭಗೊಂಡಿರುವುದು ಸಂತಸದ ವಿಚಾರ ಎಂದರು.

    ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಐ.ಪಿ. ಗಡಾದ್​, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಅಭಿಮಾನಿ ಬಳಗದ ಶಾಂತೇನ ಗೌಡ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಬಸವ ಸಮಿತಿ ಅಧ್ಯಕ್ಷ ಗಂಗಾಧರ್​, ಜಗನ್ನಾಥ್​ ಪಣಸಾಲೆ, ಕಸಾಪ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮೂರ್ತಿ, ವೀರಶೈವ ಸಮಾಜ, ಉಡುಪಿ ಬಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
    ಜಿಲ್ಲಾ ಕನ್ನಡ ಮತ್ತುಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ರಾಮಾಂಜಿ ವಂದಿಸಿದರು.

    ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಆಸ್ತಿತ್ವ ಕಳೆದುಕೊಂಡಿದ್ದ ಸ್ತ್ರೀಯರು ಬಸವಣ್ಣನ ವಚನಗಳ ಪ್ರಭಾವದಿಂದ ಮುಕ್ತವಾಗಿ ಬದುಕಲು ಸಾಧ್ಯವಾಯಿತು. ಬಸವಣ್ಣನ ವಚನ ಅನುಸರಿಸಿದರೆ ಎಲ್ಲರಿಗೂ ನೆಮ್ಮದಿಯ ಜೀವನ ಲಭಿಸಲಿದೆ.

    ನೀಲಾವರ ಸುರೇಂದ್ರ ಅಡಿಗ.
    ಜಿಲ್ಲಾಧ್ಯಕ್ಷ. ಕಸಾಪ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts