More

    ಬ್ಯಾನರ್ ಹರಿದ ಕಿಡಿಗೇಡಿಗಳು

    ಕೊಕಟನೂರ : ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರವಿದ್ದ ಬ್ಯಾನರ್ ಹರಿದು, ಮಾಲೆ ಕಿತ್ತು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾನುವಾರ ಸುಮಾರು 2 ಗಂಟೆ ಅಥಣಿ-ಗುಡ್ಡಾಪುರ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಯಲಿಹಡಲಗಿ ಗ್ರಾಮದ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಧಾರಾವಾಹಿಗೆ ಶುಭ ಕೋರುವ ಬ್ಯಾನರ್‌ಅನ್ನು ಯಲಿಹಡಲಗಿ ಗ್ರಾಮದಲ್ಲಿ ಶನಿವಾರ ಅಳವಡಿಸಲಾಗಿತ್ತು. ಆದರೆ, ರಾತ್ರೋರಾತ್ರಿ ದುಷ್ಕರ್ಮಿಗಳು ಬ್ಯಾನರ್ ಹರಿದು ಅವಮಾನಗೊಳಿಸಿದ್ದರಿಂದ ಸಂಘಟಕರು ಆಕ್ರೋಶ ವ್ಯಕ್ತಪಡಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

    ನ್ಯಾಯವಾದಿ ದಯಾನಂದ ವಾಘಮೋರೆ ಮಾತನಾಡಿ, ಕೃತ್ಯ ಎಸಗಿರುವವರನ್ನು 24 ಗಂಟೆಯೊಳಗೆ ಪತ್ತೆ ಹಚ್ಚಿ ಬಂಧಿಸಬೇಕು. ಇಲ್ಲದಿದ್ದರೆ ತಾಲೂಕಿನಲ್ಲಿ ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅಥಣಿ ಡಿವೈಎಸ್‌ಪಿ ಎಸ್.ವಿ. ಗಿರೀಶ ಅವರಿಗೆ ಗಡುವು ನೀಡಿದರು.

    ಬಳಿಕ ಡಿವೈಎಸ್‌ಪಿ ಎಸ್.ವಿ. ಗಿರೀಶ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ನಿಮಗೆ ಯಾರ ಮೇಲಾದರೂ ಸಂಶಯವಿದ್ದರೆ ಮೌಖಿಕ ಇಲ್ಲವೆ ಲಿಖಿತವಾಗಿ ತಿಳಿಸಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಮುಲಾಜಿಲ್ಲದೆ ಪೊಲೀಸ್ ಇಲಾಖೆ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು. ವಿಜಯ ದೊಡಮನಿ, ಸದಾಶಿವ ಕಾಂಬಳೆ, ಚಿದಾನಂದ ತಳಕೇರಿ, ರಾಕೇಶ ಕಟ್ಟಿಮನಿ, ವಿಕಾಸ ದೊಡಮನಿ, ಅಭಿಜಿತ ಕೊಡಗ, ವಿನೋದ ದೊಡಮನಿ, ಸಾಗರ ಕುರಣಿ, ಸದಾಶಿವ ದೊಡಮನಿ, ಸೇರಿ ಅಡಹಳ್ಳಿ, ಕೋಹಳ್ಳಿ, ಯಕ್ಕಂಚಿ ಸೇರಿ ವಿವಿಧ ಗ್ರಾಮಗಳ ದಲಿತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts