More

    ಸಖಿಯರಿಗೆ ಸರ್ಕಾರದಿಂದ ಹೊಸ ಶಕ್ತಿ: ಸಿಇಒ ರೇವಣಪ್ಪ ಮಾಹಿತಿ

    ಬೆಂಗಳೂರು ಗ್ರಾಮಾಂತರ: ಈಗಾಗಲೇ ಗ್ರಾಮೀಣ ಸ್ವಸಹಾಯ ಗುಂಪುಗಳ ಸಹಭಾಗಿತ್ವದಲ್ಲಿ ಉದ್ಯೋಗ ಸಖಿಯರು ಎಂಬ ಯೋಜನೆ ಅಸ್ತಿತ್ವದಲ್ಲಿತ್ತು. ಈಗ ಮತ್ತಷ್ಟು ಸಖಿಯರಿಗೆ ಹೊಸ ಶಕ್ತಿ ತುಂಬುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ ತಿಳಿಸಿದರು.


    ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ಗ್ರಾಪಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ (ಕೃಷಿ ಸಖಿಯರಿಗೆ) ಮೊದಲನೇ ಬ್ಯಾಚಿನ 6 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಒಂದೊಂದು ಗ್ರಾಮ ಪಂಚಾಯಿತಿಗೆ ಒಬ್ಬ ಕೃಷಿ ಸಖಿಯರನ್ನು ನೇಮಿಸಲಾಗಿದೆ, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಪಟ್ಟ ಮಾಹಿತಿಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದ್ದು, ಈ ಕುರಿತು ಕೃಷಿ ಸಖಿಯರ ಸಾಮರ್ಥ್ಯ ಅಭಿವೃದ್ಧಿಗೆ ಸಂಜೀವಿನಿ ತರಬೇತಿ ಶಿಬಿರ ಪೂರಕವಾಗಿದೆ ಎಂದು ಹೇಳಿದರು.


    ಹಳ್ಳಿಗಳಲ್ಲಿ ಮನೆಮನೆಗೂ ತೆರಳಿ ಕೃಷಿ ಮತ್ತು ಪಶು ವಲಯಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆಯಿಂದ ಜಾರಿಗೊಳಿಸಲಾಗುವ ಯೋಜನೆಗಳು, ಅವುಗಳನ್ನು ಸದುಪಯೋಗ ಮಾಡಿಕೊಳ್ಳುವ ಕುರಿತು ಸಲಹೆಗಳನ್ನು ಕೃಷಿ ಸಖಿಯರು ನೀಡಲಿದ್ದಾರೆ ಎಂದರು.


    ಪ್ರತಿ ಗ್ರಾಪಂಗೆ ಒಬ್ಬರಂತೆ 101 ಕೃಷಿ ಸಖಿಯರನ್ನು ಆಯ್ಕೆಮಾಡಲಾಗಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಮುಖ ಕಾರ್ಯಕ್ರಮಗಳಲ್ಲೊಂದಾದ ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಒಳಪಡುವ ’ಸಂಜೀವಿನಿ-ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

    ವಿಷಯಾಧಾರಿತ ತರಬೇತಿ: ಸಣ್ಣ ಮತ್ತು ಅತಿ ಸಣ್ಣ ಮಹಿಳಾ ರೈತ ಕುಟುಂಬಗಳಿಗೆ ಅಗತ್ಯವಿರುವ ವಿಸ್ತರಣಾ ಸೇವೆಗಳು, ತಾಂತ್ರಿಕ ಜ್ಞಾನ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಜೀವನೋಪಾಯ ಸಮೂಹ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅವರ ಸಾಮರ್ಥ್ಯ ಮತ್ತು ತಾಂತ್ರಿಕ ಜ್ಞಾನ ಹೆಚ್ಚಿಸಲು ವಿವಿಧ ವಿಷಯಾಧಾರಿತ ತರಬೇತಿ ನೀಡಿ ರೈತರ ಮನೆ ಬಾಗಿಲಿಗೆ ವಿಸ್ತರಣಾ ಸೇವೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮಲ್ಲಿಕಾರ್ಜುನಗೌಡ ತಿಳಿಸಿದರು.

    ವಿಪತ್ತುಗಳಿಗೆ ಪರಿಹಾರ: ರೈತರು ತಮ್ಮ ಜಮೀನುಗಳ ಬೆಳೆ ಬಗ್ಗೆ ತಿಳಿಯಲು ಹೊಲಗಳಲ್ಲಿ ಮಣ್ಣಿನ ಪರೀಕ್ಷೆ ಕೀಟನಾಶಕ, ರಸಗೊಬ್ಬರ ಪ್ರಮಾಣ ಬಗ್ಗೆ ನೇರವಾಗಿ ರೈತರ ಜಮೀನುಗಳಿಗೆ ಬಂದು ಪರೀಕ್ಷೆ ಮಾಡಲಾಗುತ್ತದೆ ಜಮೀನುಗಳಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೆಳೆ ಬೆಳವಣಿಗೆ, ಕೀಟ ಮತ್ತು ರೋಗದಂತಹ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಒದಗಿಸುವುದರ ಬಗ್ಗೆ ತಿಳಿಸುವ ಸಂಪೂರ್ಣ ಜವಾಬ್ದಾರಿ ಕೃಷಿ ಸಖಿಯರದ್ದಾಗಿರುತ್ತದೆ ಎಂದು ಜಿಪಂ ಮಾಜಿ ಸದಸ್ಯ ಅಪ್ಪಯ್ಯಣ್ಣ ಹೇಳಿದರು.

    ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವಿಠಲ್ ಕಾವಲೇ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮಲ್ಲಿಕಾರ್ಜುನಗೌಡ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts