More

    ಗಾಜಿನ ರೈಲು ಬೋಗಿ ಪ್ರಯಾಣಿಕರು ಫುಲ್ ಖುಶ್

    ಮಂಗಳೂರು: ಪಶ್ಚಿಮ ಘಟ್ಟದ ಸೊಬಗು ಆಸ್ವಾದಿಸುವ ಪ್ರವಾಸಿಗರನ್ನೇ ಮುಖ್ಯ ಲಕ್ಷೃದಲ್ಲಿರಿಸಿಕೊಂಡು ಮಂಗಳೂರು -ಬೆಂಗಳೂರು ಮಧ್ಯೆ ಆರಂಭಿಸಿದ ವಿಸ್ಟಾಡೋಮ್ ಗಾಜಿನ ರೈಲು ಬೋಗಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

    ವಾರದ ಹೆಚ್ಚಿನ ದಿನಗಳು ಮುಂಗಡ ಬುಕ್ಕಿಂಗ್ ಆಗಿ ವೇಟಿಂಗ್ ಲಿಸ್ಟ್ ಬೆಳೆಯುತ್ತಿದೆ. ಮಂಗಳವಾರ ಮಧ್ಯಾಹ್ನ ವೇಳೆಗೆ ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ಪ್ರಯಾಣಿಸುವ ಗುರುವಾರ, ಶನಿವಾರ ಮತ್ತು ಭಾನುವಾರದ ವಿಸ್ಟಾಡೋಮ್ ಬೋಗಿಗಳು ಭರ್ತಿಯಾಗಿವೆ. ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಪ್ರಯಾಣಿಸುವ ಗುರುವಾರ ಮತ್ತು ಭಾನುವಾರದ ಬೋಗಿಗಳು ಪೂರ್ಣ ಬುಕ್ ಆಗಿವೆ.

    ಮಂಗಳೂರು-ಬೆಂಗಳೂರು ಹಗಲು ರೈಲುಗಳು ಪ್ರಯಾಣಿಕರನ್ನು ಹೆಚ್ಚು ಆಕರ್ಷಿಸಿರಲಿಲ್ಲ. ವಿಸ್ಟಾಡೋಮ್‌ನಿಂದ ಈಗ ಹಗಲು ರೈಲುಗಳೂ ಭರ್ತಿಯಾಗುತ್ತಿವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ದಕ್ಷಿಣ ಭಾರತದ ಮೊದಲ ವಿಸ್ಟಾಡೋಮ್ ಬೋಗಿ ರೈಲು ಮಂಗಳೂರು-ಬೆಂಗಳೂರು ನಡುವೆ ಆರಂಭಗೊಂಡಿರುವ ಬಗ್ಗೆ ಸಂತೋಷವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಕಾರವಾರ ರೈಲು ಆರಂಭಿಸಲು ಒತ್ತಾಯ: ಮಂಗಳೂರು -ಕಾರವಾರ ಮಧ್ಯೆ ಪ್ರಯಾಣ ನಿಲ್ಲಿಸಿರುವ ಕಾರವಾರ-ಬೆಂಗಳೂರು ಹಗಲು ರೈಲು ಮರು ಆರಂಭಿಸುವಂತೆ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ(ಕುಂದಾಪುರ) ಕೊಂಕಣ ರೈಲ್ವೆ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಈ ರೈಲು ಮಂಗಳೂರು -ಬೆಂಗಳೂರು ಮಧ್ಯೆ ವಿಸ್ಟಾಡೋಮ್ ಬೋಗಿಗಳೊಂದಿಗೆ ಸಂಚರಿಸುತ್ತಿವೆ. ಈ ರೈಲು ಕಾರವಾರ ತನಕ ಬಂದರೆ ವಿಸ್ಟಾಡೋಮ್ ಬೋಗಿಗಳ ಮೂಲಕ ಪ್ರವಾಸಿಗರಿಗೆ ಕರ್ನಾಟಕ ಕರಾವಳಿಯ ಇನ್ನಷ್ಟು ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳಗಳ ವೀಕ್ಷಣೆ ಸಾಧ್ಯವಾಗಲಿದೆ. ಪಂಚಗಂಗಾವಳಿ ನದಿ ಸಮೂಹ, ಮುರ್ಡೇಶ್ವರ ಶಿವನಮೂರ್ತಿ, ಶರಾವತಿ ಸೇತುವೆ, ಕೊಂಕಣ ಪರ್ವತ ಸಾಲು, ಕೊಂಕಣ ರೈಲು ಮಾರ್ಗದ ವೈಶಿಷ್ಟೃಪೂರ್ಣ ಸುರಂಗಗಳು ಈ ಮಾರ್ಗದಲ್ಲಿ ವೀಕ್ಷಿಸಬಹುದಾದ ಕೆಲವು ಮುಖ್ಯ ಸ್ಥಳಗಳು.

    ಕೆಲವು ಅಡೆತಡೆಗಳು: ಬೆಂಗಳೂರು ಕಡೆಗೆ ಪ್ರಯಾಣ ಸಂದರ್ಭ ಸುಬ್ರಹ್ಮಣ್ಯ ರೋಡ್ ಬಳಿಕ ಸಕಲೇಶಪುರ ಮಾರ್ಗದಲ್ಲಿ ಘಟ್ಟ ಪ್ರದೇಶ ಹತ್ತುವ ವೇಳೆ ವಿಸ್ಟಾಡೋಮ್ ಕೋಚ್ ಹಿಂಭಾಗ ಬ್ರೇಕರ್ ಅಳವಡಿಸಲಾಗುತ್ತದೆ. ಇದರಿಂದ ಘಟ್ಟ ಪ್ರದೇಶವನ್ನು ಬೋಗಿಯ ಹಿಂಭಾಗದಿಂದ ವೀಕ್ಷಿಸುವ ರೋಚಕ ಅನುಭವ ಕಳೆದುಕೊಳ್ಳಬೇಕಾಗುತ್ತದೆ. ಉಳಿದ ಪ್ರಯಾಣದ ಸಂದರ್ಭ ಈ ಅಡಚಣೆ ಇರುವುದಿಲ್ಲ. ದಿನಂಪ್ರತಿ ಲಭ್ಯವಿರುವ ಈ ರೈಲು ವಾರದ ಏಳೂ ದಿನ ಮೂರು ಕ್ರಮಸಂಖ್ಯೆಗಳಲ್ಲಿ ಸಂಚರಿಸುತ್ತವೆ. ಇದರಿಂದ ಕ್ರಮಸಂಖ್ಯೆ ನೋಡಿ ಪ್ರಯಾಣಿಸುವವರಿಗೆ ಸ್ವಲ್ಪಮಟ್ಟಿನ ಗೊಂದಲ ಆಗುವ ಸಾಧ್ಯತೆ ಇದೆ.

    ವಿಸ್ಟಾಡೋಮ್ ರೈಲು ಬೋಗಿಗಳಿಗೆ ಪ್ರಯಾಣಿಕರ ಕಡೆಯಿಂದ ಉತ್ತಮ ಸ್ಪಂದನೆ ಇದೆ. ಈ ಯೋಜನೆ ಮುಂದಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಲಿದೆ.
    ಕಿಶನ್ ಬಂಗೇರ ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್(ಕಮರ್ಶಿಯಲ್), ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts