More

    18 ತಾಸು ನಿಂತರೂ ಸಿಗುತ್ತಿರಲಿಲ್ಲ ಟ್ರಿಪ್​! ಆತ್ಮಹತ್ಯೆ ಮಾಡಿಕೊಂಡ ಕ್ಯಾಬ್​ ಡ್ರೈವರ್​ನ ನೋವಿನ ಕಥೆಯಿದು..

    ಬೆಂಗಳೂರು: ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್​ ಚಾಲಕನೊಬ್ಬ ಕಾರೊಳಗೆ ಕುಳಿತುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಈ ರೀತಿ ನಿರ್ಧಾರದ ಹಿಂದೆ ಆ ಚಾಲಕ ಅನುಭವಿಸಿದ್ದ ನೋವು ಎಷ್ಟಿತ್ತು ಎನ್ನುವುದನ್ನು ಇದೀಗ ಆತನ ಸಹೋದರ ಬಿಚ್ಚಿಟ್ಟಿದ್ದಾರೆ.

    ಕ್ಯಾಬ್ ಚಾಲಕ ಪ್ರತಾಪ್ ಆತ್ಮಹತ್ಯೆ ಸಂಬಂಧ ಕೆಐಎ ಠಾಣೆಯಲ್ಲಿ ಕೆಎಸ್‌ಟಿಡಿಸಿ, ಬಿಐಎಎಲ್ ಅಧಿಕಾರಿಗಳ ಮತ್ತು ಆ್ಯಪ್ ಆಧಾರಿತ ಕಂಪನಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

    ರಾಮನಗರ ಜಿಲ್ಲೆ ಕೈಲಾಂಚ ಹೋಬಳಿ ತುಂಬೇನಹಳ್ಳಿಯ ಪ್ರತಾಪ್ ಸಹೋದರ ಪ್ರದೀಪ್ ಕುಮಾರ್ ಎಂಬುವರು ದೂರು ನೀಡಿದ್ದಾರೆ. ಇದರ ಅನ್ವಯ ಕೆಎಸ್‌ಟಿಡಿಸಿ, ಬಿಐಎಎಲ್ ಅಧಿಕಾರಿಗಳ ಮತ್ತು ಓಲಾ, ಊಬರ್ ಕ್ಯಾಬ್ ಕಂಪನಿ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ ಎಂದು ಕೆಐಎ ಪೊಲೀಸರು ತಿಳಿಸಿದ್ದಾರೆ.

    ಮಾರ್ಚ್ 30ರ ಸಂಜೆ 4.30ರಲ್ಲಿ ಪ್ರತಾಪ್, ಕೆಐಎ ಆಗಮನ ಸ್ಥಳದಲ್ಲಿ ಕ್ಯಾಬ್‌ನಲ್ಲಿ ಡೋರ್ ಲಾಕ್ ಮಾಡಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಮಾರ್ಚ್ 31ರ ಬೆಳಗಿನ ಜಾವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಈ ಕುರಿತು ಮೃತನ ಸಹೋದರ ಪ್ರದೀಪ್, ದೂರು ನೀಡಿದ್ದಾರೆ.

    ಕೆಎಸ್‌ಟಿಡಿಸಿಯಲ್ಲಿ 9 ವರ್ಷಗಳಿಂದ ಕ್ಯಾಬ್ ಚಾಲನೆ ಮಾಡುತ್ತಿದ್ದ ಪ್ರತಾಪ್, ಕರೊನಾ ಲಾಕ್‌ಡೌನ್‌ನಲ್ಲಿಯೂ ಸಾಲದ ಕಂತು, ತೆರಿಗೆ ಹಣ, ವಿಮೆ ಪಾವತಿ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಈ ವೇಳೆ ಕೇವಲ 250 ರೂ. ಬಾಕಿ ಇದ್ದ ಕಾರಣಕ್ಕೆ ಕೆಎಸ್‌ಟಿಡಿಸಿ ಅಧಿಕಾರಿಗಳು, ಪ್ರತಾಪ್‌ಗೆ ಟ್ರಿಪ್ ಕೊಡದಂತೆ ಕೆಐಎ ಅಧಿಕಾರಿಗಳಿಗೆ ವರದಿ ನೀಡಿದ್ದರು.

    ಬಿಐಎಎಲ್ ಅಧಿಕಾರಿಗಳಾದ ಸಂಜಯ್ ಚಂದ್ರ ಮತ್ತು ರಾಘವೇಂದ್ರ ಎಂಬುವರು ಪ್ರತಾಪ್‌ನ ಆರ್‌ಎಫ್​ಐಡಿ ಕಾರ್ಡ್ ಬ್ಲಾಕ್ ಮಾಡಿ ಶೋಷಣೆ ಮಾಡುತ್ತಿದ್ದರು.

    ಇತ್ತ ಓಲಾ, ಊಬರ್ ಕ್ಯಾಬ್‌ಗಳು ಶೇ.60 ವಿನಾಯಿತಿ ದರದಲ್ಲಿ ಸೇವೆ ನೀಡುತ್ತಿದ್ದರು. 18 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕೆಎಸ್‌ಟಿಡಿಸಿ ಕ್ಯಾಬ್‌ಗಳು ನಿಂತರು ಟ್ರಿಪ್ ಸಿಗುತ್ತಿರಲಿಲ್ಲ. ಅಧಿಕಾರಿಗಳ ಕಿರುಕುಳ, ಬ್ಯಾಂಕ್ ಅಧಿಕಾರಿಗಳ ಬೆದರಿಕೆ ಮತ್ತು ಆರ್ಥಿಕ ಸಂಕಷ್ಟದಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಪ್ರದೀಪ್ ಆರೋಪಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಕೆಐಎ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಕರೊನಾ ಲಾಕ್‌ಡೌನ್ ಮತ್ತು ಬಾಡಿಗೆ ಸಿಗದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಪ್ರತಾಪ್, ವಿಶ್ರಾಂತಿ, ನಿದ್ದೆ ಮಾಡಲು ಕೊಠಡಿ ಇರಲಿಲ್ಲ. ಕಾರಿನಲ್ಲಿಯೇ ನಿದ್ದೆ ಮಾಡಿ ಹಮಾಮ್‌ನಲ್ಲಿ ಸ್ನಾನ ಮಾಡಿಕೊಂಡು ಕ್ಯಾಬ್ ಓಡಿಸುತ್ತಿದ್ದ. ಆದರೂ ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಅದರಲ್ಲಿ ಅಧಿಕಾರಿಗಳ ಕಿರುಕುಳದೊಂದಿಗೆ ಆತ್ಮಹತ್ಯೆ ನಿರ್ಧರಕ್ಕೆ ಬಂದಿದ್ದಾರೆ ಎಂದು ದೂರಿಲ್ಲಿ ಉಲ್ಲೇಖಿಸಿದ್ದಾರೆ.

    ಹರಾಜು ಹಾಕುವುದಾಗಿ ಬೆದರಿಕೆ:
    ಆತ್ಮಹತ್ಯೆಗೆ ಯತ್ನಿಸುವ ಕೆಲವೇ ನಿಮಿಷಗಳ ಹಿಂದೆ ಫರೇಜರ್‌ಟೌನ್ ಶಾಖೆ ಸೌತ್ ಇಂಡಿಯನ್ ಬ್ಯಾಂಕ್ ಅಧಿಕಾರಿಗಳು ಕ್ಯಾಬ್ ಚಾಲಕ ಪ್ರತಾಪ್ ಮೊಬೈಲ್‌ಗೆ ಕರೆ ಮಾಡಿ ಸಾಲದ ಕಂತು ಪಾವತಿ ಮಾಡಿಲ್ಲ. ನಗರದ ಒಳಗೆ ಬನ್ನಿ ನಿಮ್ಮ ಕಾರನ್ನು ಜಪ್ತಿ ಮಾಡಿ ಹರಾಜು ಹಾಕುತ್ತೆವೆ ಎಂದು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಪ್ರದೀಪ್ ಆರೋಪಿಸಿದ್ದಾರೆ.

    ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದ ರಮೇಶ್‌ ಕುಮಾರ್‌

    ಅನಾಥಾಶ್ರಮದ ಮಕ್ಕಳೊಂದಿಗೆ ಈಸ್ಟರ್​ ಆಚರಿಸಿದ ರಾಹುಲ್​ ಗಾಂಧಿ; ವಿಡಿಯೋ ಕಾಲ್​ನಲ್ಲಿ ಜತೆಯಾದ ಪ್ರಿಯಂಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts