More

  ಬಿಡಿಎ ಪಾಲು ಕಸಿದ ಹೊಸ ಟೆಂಡರ್: ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆಕ್ಷೇಪ

  ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಾಲಿ ವಾಣಿಜ್ಯ ಸಂಕೀರ್ಣಗಳನ್ನು ನೆಲಸಮಗೊಳಿಸಿ ಪುನರ್ ನಿರ್ಮಾಣ ಮಾಡುವ ಹೊಸ ಟೆಂಡರ್‌ನಲ್ಲಿ ಪ್ರಾಧಿಕಾರಕ್ಕೆ ಕಡಿಮೆ ಪಾಲು ದೊರೆತಿದ್ದು, ಗುತ್ತಿಗೆ ಸಂಸ್ಥೆಗೆ ಲಾಭವಾಗುವ ರೀತಿ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

  ಹೊಸದಾಗಿ ನಿರ್ಮಿಸಲಾಗುವ ಕಮರ್ಷಿಯಲ್ ಕಾಂಪ್ಲೆಕ್ಸ್‌ಅನ್ನು ಗುತ್ತಿಗೆ ಪಡೆಯುವ ಕಂಪನಿಗೆ ಲಾಭವಾಗುವ ರೀತಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ ನಷ್ಟವಾಗಲಿದೆ. ಬಿಡಿಎ ಹಾಗೂ ಕಂಪನಿಗೆ ಕ್ರಮವಾಗಿ 35:65 ಅನುಪಾತದಲ್ಲಿ ಒಡಂಬಡಿಕೆ ಆಗಿರುವುದರಿಂದ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಸ್ವತ್ತು ಖಾಸಗಿ ಪಾಲಾಗುವ ಸಾಧ್ಯತೆ ಇದೆ ಎಂದು ಅವರು ದೂರಿದ್ದಾರೆ.

  2017-18ರ ಸಾಲಿನಲ್ಲಿ ಸಿದ್ಧರಾಮಯ್ಯ ಅವರು ಸಿಎಂ ಆಗಿದ್ದಾಗ ಇಂದಿರಾನಗರ, ಕೋರಮಂಗಲ, ಎಚ್‌ಎಸ್‌ಆರ್ ಬಡಾವಣೆ, ಸದಾಶಿವನಗರ, ಆರ್.ಟಿ. ನಗರ, ಕಾಕ್ಸ್ ಟೌನ್ ಮತ್ತು ಚಂದ್ರಾ ಲೇಔಟ್‌ಗಳಲ್ಲಿರುವ 7 ವಾಣಿಜ್ಯ ಸಂಕೀರ್ಣಗಳನ್ನು ಅವರ ಆಪ್ತ ವಲಯದಲ್ಲಿರುವ ಸಚಿವ ಕೆ.ಜೆ. ಜಾರ್ಜ್ ಪಾಲುದಾರಿಕೆ ಹೊಂದಿರುವ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಜತೆಗೆ ಲೀಸ್ ಅವಧಿಯನ್ನು 65 ವರ್ಷಕ್ಕೆ ಹಿಗ್ಗಿಸಿ ಜನ ವಿರೋಧಿ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಾದ ಅಕ್ರಮವನ್ನು 2019ರಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ಗಮನಕ್ಕೆ ದಾಖಲೆಗಳ ಸಹಿತ ತಿಳಿಸಿದ್ದೆ. ಇದನ್ನಧರಿ ಸಿದ್ಧರಾಮಯ್ಯ ಸರ್ಕಾರದ ಕಾನೂನು ಬಾಹಿರ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶಿಸಿದ್ದರು. ಆದರೆ, 2ನೇ ಬಾರಿ ರಾಜ್ಯದ ಸಿಎಂ ಆಗಿರುವ ಸಿದ್ಧರಾಮಯ್ಯ 7 ವರ್ಷಗಳ ಹಿಂದೆ ನಿರ್ಧಾರವನ್ನು ಮರು ಜಾರಿಗೊಳಿಸಿದ್ದಾರೆ. ಅಲ್ಲದೆ, ಹಿಂದೆ ಗುತ್ತಿಗೆ ರದ್ದುಪಡಿಸಿದ್ದ ಕಂಪನಿಗೆ 35 ವರ್ಷದ ಬದಲು 65 ವರ್ಷಕ್ಕೆ ಗುತ್ತಿಗೆ ವಹಿಸಲು ಒಪ್ಪಿಗೆ ನೀಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಹೊರಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕಾನೂನುಬಾಹಿರ ಕ್ರಮದಿಂದ ಬಿಡಿಎಗೆ ಕೋಟ್ಯಂತರ ರೂ. ಮೊತ್ತ ನಷ್ಟವಾಗಲಿದೆ ಎಂದಿದ್ದಾರೆ.

  ಸಾಲ ಲಭ್ಯತೆ ಬಳಸಿಕೊಳ್ಳದ ಬಿಡಿಎ:

  ಬಿಡಿಎ ಹಾಲಿ 7 ವಾಣಿಜ್ಯ ಸಂಕೀರ್ಣಗಳನ್ನು ನೆಲಸಮಗೊಳಿಸಿ ಹೊಸ ಕಾಂಪ್ಲೆಕ್ಸ್ ನಿರ್ಮಾಣಕ್ಕಾಗಿ ಖಾಸಗಿಯವರಿಗೆ ಕಾರ್ಯಾದೇಶ ನೀಡಿದೆ. ಆದರೆ, ಕೆಯುಐಡಿಎಫ್​​ಸಿ ಸಂಸ್ಥೆ ಅಥವಾ ವಿಶ್ವಬ್ಯಾಂಕ್‌ನಿಂದ ಸಾಲವನ್ನು ಪಡೆದು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಅವಕಾಶವಿದ್ದರೂ ಪಿಪಿಪಿಗೆ ಮಣೆ ಹಾಕಲಾಗಿದೆ. ಮುಖ್ಯವಾಗಿ ಸಿಎಂ ತಮ್ಮ ಆಪ್ತ ಸಚಿವರಿಗೆ ನೆರವಾಗಲು ಈ ತೀರ್ಮಾನವನ್ನು ಕೈಗೊಂಡಿದ್ದಾರೆ. ಮುಖ್ಯಮಂತ್ರಿಯವರ ಈ ಕಾನೂನುಬಾಹಿರ ನಡೆಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಿದ್ದು, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುವುದಾಗಿ ಎನ್.ಆರ್.ರಮೇಶ್ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts