More

    ಅದಾನಿ, ಅಂಬಾನಿಗಾಗಿಯೇ ಕೇಂದ್ರ ಸರ್ಕಾರ: ಮಾಜಿ ಶಾಸಕ ಬಾಲಕೃಷ್ಣ ಆರೋಪ

    ಮಾಗಡಿ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಕಾಂಗ್ರೆಸ್ ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು.
    ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ನಾವಿಬ್ಬರು, ನಮಗಿಬ್ಬರು ಎನ್ನುವಂತೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಅದಾನಿ ಮತ್ತು ಅಂಬಾನಿ ಅವರಿಗಾಗಿ ಸರ್ಕಾರ ನಡೆಸುತ್ತಿದ್ದಾರೆ. ಪ್ರತಿದಿನ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿದೆ.

    ಇದರ ವಿರುದ್ಧ ಕಿಚ್ಚು ಇಂದು ಆರಂಭವಾಗಿದೆ. ಬಿಜೆಪಿ ಸರ್ಕಾರಗಳಿಗೆ ಕಡಿವಾಣ ಹಾಕಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಮೋದಿ ಆಡಳಿತ ಕೊನೆಗೊಳ್ಳುವ ತನಕ ಹೋರಾಟ ಮುಂದುವರಿಯಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

    ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಣ್ಣಪುಟ್ಟ ವಿಷಯಗಳಿಗೂ ಬಿಜೆಪಿ ನಾಯಕರು ಮೂಗು ತೂರಿಸುತ್ತಿದ್ದರು. ಪೆಟ್ರೋಲ್ ಬೆಲೆ 1 ರೂ.ಏರಿಕೆಯಾದಾಗ ಬೀದಿಗಿಳಿದು ಹೋರಾಡಿದ್ದರು. ಕಳೆದ 7 ವರ್ಷಗಳ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಲೀಟರ್‌ಗೆ 50 ರೂ. ಏರಿಕೆ ಮಾಡುವ ಮೂಲಕ ಜನಸಾಮಾನ್ಯನ ಮೇಲೆ ಹೊರೆ ಹೇರಿದ್ದಾರೆ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದರು.

    ಪ್ರಧಾನಿಯವರ ಮನ್ ಕೀ ಬಾತ್, ಮಂಕಿ ಬಾತ್ ಆಗಿದೆ. ಕೇಂದ್ರ, ರಾಜ್ಯ ಸರ್ಕಾರಗಳ ದುರಾಡಳಿತ, ಅನ್ಯಾಯಗಳನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಿಳಿಸಿ ಯುವಕರು ಜಾಗೃತಿ ಮೂಡಿಸಬೇಕು. ಈ ಸರ್ಕಾರ ಬಡವರು, ಕಾರ್ಮಿಕರು, ರೈತ ವಿರೋಧಿಯಾಗಿದೆ ಎಂದು ಕಿಡಿಕಾರಿದರು.

    ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದಂತೆ ಬಿಜೆಪಿ ವಿರುದ್ಧ ಹೋರಾಡಬೇಕಿದೆ. ಕೇಂದ್ರ ಸರ್ಕಾರ ಉದ್ಯಮಿಗಳ ಪರವಾಗಿದ್ದು, ರೈತರ ಸಾಲಮನ್ನಾ ಮಾಡಲಿಲ್ಲ. ಉದ್ಯಮಿಗಳ ಸಾಲಮನ್ನಾ ಮಾಡುವ ಮೂಲಕ ರೈತರಿಗೆ ದ್ರೋಹ ಮಾಡಿದೆ ಎಂದರು.
    ಜಿಪಂ ಮಾಜಿ ಸದಸ್ಯೆ ಕಲ್ಪನಾ ಶಿವಣ್ಣ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿಗೆ ಪೂರಕ ಎನ್ನಲಾಗುತ್ತದೆ. ಆದರೆ ಎರಡೂ ಸರ್ಕಾರಗಳು ಜನವಿರೋಧಿಯಾಗಿವೆ ಎಂದರು.

    ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚು ಕಾವೇರಿ ನೀರು ಹರಿಸಲಾಗುತ್ತಿದೆ. ನ್ಯಾಯಾಧೀಕರಣದ ಹೈ ತೀರ್ಪು, ಸುಪ್ರಿಂಕೋರ್ಟಿನ ತೀರ್ಪಿನ ಪ್ರಕಾರ ನ್ಯಾಯಾಧೀಕರಣದ ವಿರುದ್ಧ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಇದನ್ನು ಉಲ್ಲಂಘಿಸಲಾಗುತ್ತಿದೆ, ಕರ್ನಾಟಕ್ಕೆ ಅನ್ಯಾಯ ಮಾಡಿ ತಮಿಳುನಾಡು ಪರ ನಿಂತಿರುವುದಕ್ಕೆ ಕನ್ನಡಿಗರ ಧಿಕ್ಕಾರವಿದೆ ಎಂದರು.

    ಕೆಂಪೇಗೌಡ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಶಿವಕುಮಾರ ಸ್ವಾಮೀಜಿ ವೃತ್ತ, ನಾರಸಿಂಹ ಸರ್ಕಲ್ ಮೂಲಕ ತಾಲೂಕು ಕಚೇರಿ ತಲುಪಿತು. ತಹಸೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್‌ಗೆ ಮನವಿ ಸಲ್ಲಿಸಲಾಯಿತು.

    ಜಿಪಂ ಅಧ್ಯಕ್ಷ ಎಚ್.ಎನ್.ಅಶೋಕ್, ಸದಸ್ಯೆ ನಾಗರತ್ನ, ಮಾಜಿ ಸದಸ್ಯರಾದ ವಿಜಯ್ ಕುಮಾರ್, ಎಂ.ಕೆ. ಧನಂಜಯ, ತಾಪಂ ಅಧ್ಯಕ್ಷೆ ಸುಧಾ, ಸ್ಥಾಯಿಸಮಿತಿ ಅಧ್ಯಕ್ಷ ಧನಂಜಯನಾಯ್ಕ, ಸದಸ್ಯರಾದ ನಾರಾಯಣಪ್ಪ, ಸುಮಾ ರಮೇಶ್, ರತ್ನಮ್ಮ ಶ್ರೀನಿವಾಸ್, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಪುರಸಭಾ ಸದಸ್ಯ ಎಚ್.ಜೆ.ಪುರುಷೋತ್ತಮ್, ತಾಪಂ ಮಾಜಿ ಅಧ್ಯಕ್ಷರಾದ ಗಾಣಕಲ್ಲು ನಟರಾಜು, ಕಾಂತರಾಜು ಸೇರಿ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ದುರಾಡಳಿತ ಸರಿಪಡಿಸಿಕೊಳ್ಳಲು ಆರು ತಿಂಗಳ ಗಡುವು : ಮಾಗಡಿ ತಾಲೂಕಿನಲ್ಲಿ ನಡೆಯುತ್ತಿರುವ ದುರಾಡಳಿತ ಸರಿಪಡಿಸಿಕೊಳ್ಳಲು ಆರು ತಿಂಗಳು ಅವಕಾಶ ನೀಡಲಾಗುವುದು. ಶಾಸಕರು ಮಾಧ್ಯಮಗಳಲ್ಲಿ ಬಂದು ಹೋಗುವುದರಿಂದ ಪ್ರಯೋಜನವಿಲ್ಲ. ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಶಾಸಕರಿಗೆ ಬಾಲಕೃಷ್ಣ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts