More

    ಉಡುಪಿ ನಗರಕ್ಕಿಲ್ಲ ನೀರಿನ ಸಮಸ್ಯೆ, ಬಜೆಯಲ್ಲಿ 53 ದಿನಕ್ಕಾಗುವಷ್ಟು ನೀರು

    ಉಡುಪಿ: ಪ್ರತಿವರ್ಷ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿ ನಗರ ಈ ವರ್ಷ ಅದರಿಂದ ಪಾರಾಗುವ ಲಕ್ಷಣ ತೋರಿಸಿವೆ. ಪ್ರಸ್ತುತ ಕಡು ಬೇಸಿಗೆಯಲ್ಲೂ ರೇಶನಿಂಗ್ ಇಲ್ಲದೆ ವಾರದ ಏಳು ದಿನವೂ ನಗರಕ್ಕೆ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ಯಶಸ್ವಿಯಾಗಿದ್ದು, ಇನ್ನೂ 53 ದಿನಕ್ಕಾಗುವಷ್ಟು ನೀರಿನ ಸಂಗ್ರಹವಿದೆ.

    ಲಾಕ್‌ಡೌನ್ ಹಿನ್ನೆಲೆಯಿಂದ ನಗರಕ್ಕೆ ಹೊರಗಿನಿಂದ ಬರುವವರ ಸಂಖ್ಯೆ ಕಡಿಮೆಯಾಗಿರುವುದು, ಹೋಟೆಲ್, ಅಂಗಡಿ, ಶಾಲಾ-ಕಾಲೇಜು, ಕೈಗಾರಿಕೆ, ಶ್ರದ್ಧಾಕೇಂದ್ರಗಳು, ಕಚೇರಿಗಳು, ಸಭೆ, ಸಮಾರಂಭಗಳು ಸ್ಥಗಿತಗೊಂಡಿರುವುದರಿಂದ ಸ್ವಲ್ಪ ಪ್ರಮಾಣದಲ್ಲಿ ನೀರು ಉಳಿಕೆಯಾಗುತ್ತಿದೆ.

    1.5 ಎಂಎಲ್‌ಡಿ ನೀರು ಉಳಿತಾಯ: ಎರಡು ತಿಂಗಳ ಹಿಂದೆ 35 ವಾರ್ಡ್‌ಗಳನ್ನು ಮೂರು ವಲಯಗಳಾಗಿ ವಿಂಗಡಿಸಿ ದಿನಕ್ಕೆ 6 ಗಂಟೆ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು. ಪರಿಣಾಮ 1.5 ಎಂಎಲ್‌ಡಿ ನೀರು ಉಳಿಕೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಸ್ವರ್ಣ ನದಿಯ ಬಜೆ ಡ್ಯಾಂ ಸಮೀಪ ಹೊಂಡಗಳಲ್ಲಿ ತುಂಬಿರುವ ನೀರನ್ನು ಡ್ರೆಜ್ಜಿಂಗ್ ಹಾಗೂ ಪಂಪ್ ಮಾಡಿ ಡ್ಯಾಂನತ್ತ ಹರಿಸಲಾಗುತ್ತಿದೆ.

    ಬಜೆ ಡ್ಯಾಂನಲ್ಲಿರುವ ನೀರೆಷ್ಟು ? : ಬಜೆ ಡ್ಯಾಂನಲ್ಲಿ ಪ್ರಸ್ತುತ 3.4 ಮೀಟರ್ ನೀರಿನ ಸಂಗ್ರಹ ಇದೆ. ಈ ಸಮಯದಲ್ಲಿ ಕಳೆದ ವರ್ಷ ನೀರಿನ ಪ್ರಮಾಣ 1.6 ಮೀಟರ್ ಆಗಿತ್ತು. ಇಷ್ಟು ಪ್ರಮಾಣದ ನೀರನ್ನು 23 ದಿನಗಳವರೆಗೆ ನಿಭಾಯಿಸಬಹುದು. ಪಂಪಿಂಗ್ ಮಾಡಿ ಡ್ಯಾಂನತ್ತ ಹಾಯಿಸಿದ ನೀರು 10 ದಿನಕ್ಕಾಗುವಷ್ಟು ಸಾಕಾಗಲಿದೆ. ಜೂನ್‌ನಲ್ಲಿ ನಿಗದಿತ ಸಮಯದಲ್ಲಿ ಮಳೆಯಾದರೆ ಉಡುಪಿ ನಗರ ನೀರಿನ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ ಹೊಂದಬಹುದು.

    2.2 ಕೋಟಿ ಲೀಟರ್ ನೀರು ಖರ್ಚು: ಲಾಕ್‌ಡೌನ್ ಅವಧಿಯಲ್ಲಿ ನೀರಿನ ಬಳಕೆ ಪ್ರಮಾಣ ಕಡಿಮೆಯಾಗಿಲ್ಲ. ಅಂದಾಜು ಪ್ರಕಾರ ನಗರದ ಜನಸಂಖ್ಯೆ ಲೆಕ್ಕಾಚಾರದಲ್ಲಿ ಇಲ್ಲಿ ಪ್ರತಿದಿನ 1.5 ಕೋಟಿ ಲೀಟರ್ ನೀರು ಬೇಕು. ಆದರೆ ಪ್ರಸಕ್ತ 2.2 ಕೋಟಿ ಲೀಟರ್ ನೀರು ಖರ್ಚಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ನಗರದಲ್ಲಿ 10,500 ಮನೆಗಳು, ಮಣಿಪಾಲ ಕೈಗಾರಿಕಾ ವಲಯದಲ್ಲಿ 70ರಿಂದ 80 ಕೈಗಾರಿಕಾ ಘಟಕ, 570 ಫ್ಲಾೃಟ್‌ಗಳಿವೆ. 1,000 ವಾಣಿಜ್ಯ ಸಂಸ್ಥೆಗಳು ಇವೆ. 600 ಹೋಟೆಲ್, 40 ಲಾಡ್ಜ್‌ಗಳಿವೆ.

    ಉಡುಪಿ ನಗರಕ್ಕೆ ಈ ಭಾರಿ ನೀರಿನ ಸಮಸ್ಯೆ ಇಲ್ಲ. ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ 23 ದಿನಕ್ಕಾಗುವಷ್ಟು ನೀರಿನ ಸಂಗ್ರಹವಿದೆ. ಅಲ್ಲದೆ ಡ್ಯಾಂ ಸಮೀಪ ಮಾಣೆ, ಪುತ್ತಿಗೆ ಸೇತುವೆ ಬಳಿ, ಬಂಡಾರಿಬೆಟ್ಟುನಲ್ಲಿರುವ 5 ಹೊಂಡಗಳಲ್ಲಿ 30 ದಿನಕ್ಕಾಗುವಷ್ಟು ನೀರಿದೆ. ಈ ನೀರನ್ನು ಡ್ಯಾಂನತ್ತ ಹಾಯಿಸುವ ಕೆಲಸ ಪ್ರಗತಿಯಲ್ಲಿದೆ.
    -ಮೋಹನ್‌ರಾಜ್, ಎಇಇ ಉಡುಪಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts