More

    ಕಾಂಗ್ರೆಸ್ ಕಡೆ ವಾಲುತ್ತಿರುವ ದೇಶದ ಜನತೆ

    ಬೈಲಕುಪ್ಪೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಹೆಚ್ಚಾಗುತ್ತಿರುವುದನ್ನು ಕಂಡು ವಿರೋಧ ಪಕ್ಷಗಳ ನಾಯಕರು ಹೊಟ್ಟೆಕಿಚ್ಚಿನಿಂದ ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದರು.

    ತಾಲೂಕಿನ ಪಿ.ಬಸವನಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕುಂದು-ಕೊರತೆ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ಆರಂಭದಲ್ಲಿ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಯಾವುದೇ ಕಾರಣಕ್ಕೂ ಸಾಧ್ಯ ಇಲ್ಲ ಎಂದು ಅಪಹಾಸ್ಯ ಮಾಡಿದ್ದವು. ಆದರೆ ನಾವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ದಿನಗಳಲ್ಲಿ ಜನತೆಗೆ ನೀಡಿದ್ದ 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಮರ್ಮಾಘಾತವಾಗಿದೆ ಎಂದು ವ್ಯಂಗ್ಯವಾಡಿದರು.

    ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ 60 ಸಾವಿರ ಕೋಟಿ ರೂ. ವಿನಿಯೋಗ ಮಾಡುತ್ತಿದೆ. ದೇಶದಲ್ಲಿ ಬಡವರಿಗಾಗಿ ಈ ರೀತಿಯ ಯೋಜನೆಗಳನ್ನು ತಂದಿರುವುದು ಕರ್ನಾಟಕ ಮಾತ್ರ. ಹಾಗಾಗಿ ದೇಶದ ಜನತೆ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ. ಶಕ್ತಿ ಯೋಜನೆಯನ್ನು ಎಲ್ಲ ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ನಿರುದ್ಯೋಗಿ ಪದವೀಧರರಿಗಾಗಿ ಡಿಸೆಂಬರ್ ತಿಂಗಳಲ್ಲಿ ‘ಯುವನಿಧಿ’ ಕಾರ್ಯಕ್ರಮ ಆರಂಭವಾಗಲಿದೆ. ಯಾರೂ ಕೂಡ ಸರ್ಕಾರದ ಯೋಜನೆಗಳಿಂದ ವಂಚಿತವಾಗಬಾರದು ಎಂಬ ಸದುದ್ದೇಶದಿಂದ ನೋಂದಣಿ ಪ್ರಕ್ರಿಯೆಯನ್ನು ಇನ್ನೂ ಮುಂದುವರಿಸುತ್ತಿದ್ದೇವೆ. ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

    ತಾಲೂಕಿನ ಪಿ.ಬಸವನಹಳ್ಳಿ ಗ್ರಾಮದಲ್ಲಿ ಮುಖಂಡ ಬಿ.ಎ.ಪ್ರಕಾಶ್ ಮಾತನಾಡಿ, ಗ್ರಾಮದ ಸುತ್ತಮುತ್ತ ಇರುವ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸಬೇಕು. ರಸ್ತೆಗಳು ಹಾಳಾಗಿದ್ದು, ದುರಸ್ತಿ ಮಾಡಬೇಕು. ಪಂಚಾಯಿತಿ ವ್ಯಾಪ್ತಿಯ ಬಡಜನರಿಗೆ 50 ಮನೆಗಳನ್ನು ಮಂಜೂರು ಮಾಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

    ಗಾಂಧಿನಗರ ಪುನಾಡಹಳ್ಳಿ ಗ್ರಾಮಕ್ಕೂ ಸಚಿವರು ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ತಹಸೀಲ್ದಾರ್ ಕುಂಞ ಅಹಮದ್, ತಾಪಂ ಇಒ ಸುನೀಲ್ ಕುಮಾರ್, ಪಿಡಿಒ ಮಂಜುನಾಥ್, ನಾಗಶೆಟ್ಟಿ, ಗ್ರಾಪಂ ಅಧ್ಯಕ್ಷೆ ಜಯಮ್ಮ , ಉಪಾಧ್ಯಕ್ಷ ಶಿವನಂಜುಂ ಡ, ಮುಖಂಡರಾದ ಡಿ.ಟಿ.ಸ್ವಾಮಿ, ಪಿ.ಬಸವನಹಳ್ಳಿ ಪ್ರಕಾಶ್, ರಹಮತ್ ಜಾನ್‌ಬಾಬು, ಬಸವರಾಜ್, ನಾಗೇಗೌಡ, ಪಿ.ಮಹದೇವ್, ರಾಮಚಂದ್ರ, ಯಜಮಾನ್ ರಾಜೇಗೌಡ, ಶಂಕರೇಗೌಡ, ಗಣೇಶ್, ಪಾಪೇಗೌಡ, ಬಸವಯ್ಯ, ಪ್ರತಾಪ್ ಕುಮಾರ್, ಸುರೇಶ್, ಮೋಹನ್ ಕುಮಾರ್, ಚಂದ್ರು , ನಂದಿನಾಥಪುರ ಸತೀಶ್, ಹುಣಸವಾಡಿ ಹರೀಶ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts