More

    ಕಾಯಕಲ್ಪ ನಿರೀಕ್ಷೆಯಲ್ಲಿ ಬಗ್ಗುಂಡಿ ಕೆರೆ

    ಸುರತ್ಕಲ್: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಳಾಯಿ ಸಮೀಪದ ಬಗ್ಗುಂಡಿ ಕೆರೆಗೆ ಹಲವು ಕಡೆಗಳಿಂದ ಕೊಳಚೆ ನೀರು ಸೇರುತ್ತಿದ್ದು ಶುದ್ಧ ನೀರು ಕ್ರಿಮಿ ಕೀಟಗಳ, ಸೊಳ್ಳೆ ಇತ್ಯಾದಿಗಳ ಆವಾಸವಾಗುತ್ತಿದೆ. ಸುಮಾರು 30 ಎಕರೆ ಪ್ರದೇಶದಷ್ಟಿರುವ ಬಗ್ಗುಂಡಿ ಕೆರೆ ಸ್ವಚ್ಛಗೊಳಿಸಿ ಸೂಕ್ತ ರಕ್ಷಣೆ ಒದಗಿಸಿದರೆ ಇದೊಂದು ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ.

    ಬಗ್ಗುಂಡಿ ಕೆರೆ ಬೈಕಂಪಾಡಿ ಬಿಪಿಸಿಎಲ್ ಬಳಿ ವ್ಯಾಪಿಸಿದೆ. ಈ ಜಾಗ ನಾಗಾರ್ಜುನ ಉದ್ಯಮಕ್ಕೆ ಭೂಸ್ವಾಧೀನವಾದ ಬಳಿಕ ಜೆಸ್ಕೋ (ಜಯಪ್ರಕಾಶ್ ಇಂಜಿನಿಯರಿಂಗ್ ಆ್ಯಂಡ್ ಸ್ಟೀಲ್ ಕಂಪನಿ) ಕೈಯಲ್ಲಿತ್ತು. ಅದೀಗ ಮರಳಿ ಕೆಐಎಡಿಬಿ ವಶದಲ್ಲಿದೆ ಎನ್ನಲಾಗಿದೆ. ಪ್ರತಿವರ್ಷ ಇಲ್ಲಿನ ಕೋಟೆದ ಬಬ್ಬು ದೈವಸ್ಥಾನ ನೇಮೋತ್ಸವ ಸಂದರ್ಭ ಕೆರೆಯಲ್ಲಿ ಸಾಮೂಹಿಕ ಮೀನು ಹಿಡಿಯುವ ಜಾತ್ರೆ ನಡೆಯುತ್ತಿದ್ದು, ಸುಮಾರು ವರ್ಷಗಳಿಂದ ಕೊಳಚೆ, ಹಾವಸೆ ಸಮಸ್ಯೆಯಿಂದ ಮೀನು ಹಿಡಿಯಲು ಸಾಧ್ಯವಾಗುತ್ತಿಲ್ಲ.
    ಪ್ರಸಕ್ತ ಕೆರೆಯ ನೀರಿನಲ್ಲಿ ಕೊಳಚೆ ತುಂಬಿದೆ. ನಡುಲಚ್ಚಿಲ್ ಎಂಬಲ್ಲಿ ಕಲುಷಿತ ನೀರು ಸೇರಿ ಪರಿಸರದಲ್ಲಿ ವಾಸನೆ ಹರಡುತ್ತಿರುವ ಜತೆಗೆ ಇನ್ನೂ ಕೆಲವು ಕಡೆ ಚರಂಡಿ ತ್ಯಾಜ್ಯ ಸೇರುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಪರಿಸರದ ಹಲವು ಕಡೆ ಚರಂಡಿ ಕೊಳಚೆ ನೀರು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಿದ ಕಾಂಕ್ರೀಟ್ ತೋಡಿನ ಮೂಲಕ ಬಗ್ಗುಂಡಿ ಕೆರೆಯ ಒಡಲು ಸೇರುತ್ತಿದೆ. ಜನವಸತಿ ಪ್ರದೇಶದಲ್ಲೇ ತೋಡಿನಲ್ಲಿ ನೀರು ಹರಿಯುತ್ತಿರುವುದರಿಂದ ದುರ್ವಾಸನೆ ಜತೆಗೆ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಭೀತಿಯೂ ಹರಡುತ್ತಿದೆ. ವಿಷ್ಣುಮೂರ್ತಿ ಲೇಔಟ್ ಪಕ್ಕದಲ್ಲೂ ನೀರು ಬಗ್ಗುಂಡಿ ಕೆರೆ ಸೇರುತ್ತಿದೆ.

    ಸುಮಾರು 30 ಎಕರೆ ಜಾಗದಷ್ಟು ವ್ಯಾಪಿಸಿರುವ, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತಿ ದೊಡ್ಡ ಕೆರೆ ಎನಿಸಿರುವ ಬಗ್ಗುಂಡಿಗೆ ಕೊಳಚೆ ನೀರು ಹರಿಯುವುದನ್ನು ಎಲ್ಲ ಕಡೆಯಿಂದಲೂ ತಡೆಗಟ್ಟಿ ಶುದ್ಧ ನೀರು ಹರಿಯುವಂತೆ ಮಾಡಿದರೆ ಪರಿಸರದ ಅಷ್ಟೂ ಬಾವಿಗಳ ನೀರು ಪರಿಶುದ್ಧವಾಗಲಿದೆ. ಇಡೀ ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಒದಗಿಸಬಲ್ಲಷ್ಟು ಸಾಮರ್ಥ್ಯ ಹೊಂದಿರುವ ಬಗ್ಗುಂಡಿ ಕೆರೆಗೆ ಕಾಯಕಲ್ಪ ನೀಡಿದರೆ ಭವಿಷ್ಯದಲ್ಲಿ ಇದನ್ನು ಪ್ರವಾಸೋದ್ಯಮ ತಾಣವಾಗಿ ರೂಪಿಸಬಹುದು ಎನ್ನುತ್ತಾರೆ ಸ್ಥಳೀಯರು.

    ಮತ್ತೆ ರಂಗೇರಬೇಕು ಮೀನ ಸಂಕ್ರಮಣ: ಬಗ್ಗುಂಡಿ ಕೆರೆಗೂ ಕುಳಾಯಿ ಬಳಿಯ ಕೋಟೆದ ಬಬ್ಬು ದೈವಸ್ಥಾನಕ್ಕೂ ಸಂಬಂಧವಿದೆ. ಪ್ರತಿವರ್ಷ ಮಾರ್ಚ್‌ನಲ್ಲಿ ಬರುವ ಮೀನ ಸಂಕ್ರಮಣದಂದು ಈ ದೈವಸ್ಥಾನದ ನೇಮೋತ್ಸವ ಸಂದರ್ಭ ಕೆರೆಯಲ್ಲಿ ಮೀನು ಹಿಡಿಯುವ ಜಾತ್ರೆ ನಡೆಯುತ್ತದೆ. ಹಲವು ವರ್ಷಗಳಿಂದ ಇಲ್ಲಿ ಮೀನು ಹಿಡಿಯುವ ಜಾತ್ರೆ ಸಾಂಕೇತಿಕ ಶೈಲಿಯಲ್ಲಷ್ಟೇ ನಡೆಯುತ್ತಿದ್ದು, ಎಕರೆಗಟ್ಟಲೆ ವಿಸ್ತೀರ್ಣದ ಈ ಕೆರೆಯ ಸಂರಕ್ಷಣೆ ಜತೆಗೆ ಮೀನು ಹಿಡಿಯುವ ಜಾತ್ರೆ ಉಳಿವಿಗೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೆರೆ ಸಂರಕ್ಷಣೆ ಜತೆ ಮೀನು ಹಿಡಿಯುವ ಜಾತ್ರೆ ಮತ್ತೆ ನಡೆದರೆ ಮೀನ ಸಂಕ್ರಮಣ ಇಲ್ಲಿ ಮತ್ತಷ್ಟು ರಂಗೇರಲಿದೆ.

    ಕೆರೆ ಉಳಿಸಲು ನಡೆದಿತ್ತು ಅಭಿಯಾನ: ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಕುಳಾಯಿ ಮೊದಲಾದ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೆರೆ ಉಳಿಸಲು ಹಲವು ಸಲ ಸ್ವಚ್ಛತಾ ಅಭಿಯಾನ ನಡೆದಿತ್ತು. ಅಲ್ಲದೆ ರಾಸಾಯನಿಕ ಸಿಂಪಡಿಸಿ ಕೆರೆಯಲ್ಲಿ ತುಂಬಿರುವ ಹಾವಸೆ ನಾಶಗೊಳಿಸಲು ಪ್ರಸ್ತಾಪಿಸಲಾಗಿತ್ತು. ಸ್ವಚ್ಛತಾ ಅಭಿಯಾನ ನಿರಂತರ ನಡೆದರೂ ಆಳುವವರ ಸಹಕಾರ ಸಿಗದೆ ಹಾವಸೆ ಮತ್ತೆ ಮತ್ತೆ ತುಂಬಿಕೊಂಡಿತು.

    ಇನ್ನೂ ಮಾಸಿಲ್ಲ ಪ್ರಗತಿಯ ನಿರೀಕ್ಷೆ: ಕೆರೆ ಅಭಿವೃದ್ಧಿ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಹಿಂದೆ ಯೋಜನೆ ಬಗ್ಗೆ ದ.ಕ ಜಿಲ್ಲಾಧಿಕಾರಿ ಆಸಕ್ತಿ ವಹಿಸಿ, ಸ್ಥಳಕ್ಕೆ ಸಿಆರ್‌ಝಡ್, ಮೀನುಗಾರಿಕಾ ಇಲಾಖೆ ಅಧಿಕಾರಿಗಳನ್ನು ಪರಿಶೀಲನೆಗೆ ತೆರಳುವಂತೆ ಸೂಚಿಸಿದ್ದಾರೆ. ಇಲ್ಲಿ ಸರ್ಕಾರಿ ದಾಖಲೆಯಲ್ಲಿರುವ ಕೆರೆ 13 ಎಕರೆ, ಜೆಸ್ಕೋ ಉದ್ಯಮಕ್ಕೆ ನೀಡಿರುವ 72 ಎಕರೆಯನ್ನು ಕೆರೆ ಅಭಿವೃದ್ಧಿಗೆ ಬಳಸಲು ಪ್ರಸ್ತಾಪಿಸಲಾಗಿತ್ತು. ಕೆರೆಗೆ ಜೋಕಟ್ಟೆ ಬಳಿ ನದಿಯ ಸಂಪರ್ಕ ಮುಚ್ಚಿ ಹೋಗಿರುವ ಕಾರಣ ಉಬ್ಬರ ಇಳಿತದ ಪರಿಣಾಮ ನಿಂತು ಹೋಗಿದೆ. ಇವೆಲ್ಲವನ್ನು ಸರಿಪಡಿಸಿದರೆ ಮತ್ತೆ ಕೆರೆ ಹಿಂದಿನಂತೆಯೇ ಜೀವಕಳೆ ಪಡೆಯಲಿದೆ.

    ವರ್ಷವಿಡೀ ನೀರಿನ ಒರತೆ: ಬಗ್ಗುಂಡಿ ಕೆರೆಯಲ್ಲಿ ವರ್ಷದ 365 ದಿನವೂ ನೀರಿನ ಒರತೆಯಿದೆ. ಕೈಗಾರಿಕಾ ವಲಯ ಆರಂಭಗೊಳ್ಳುವ ಮುನ್ನ ಕುಳಾಯಿ ವ್ಯಾಪ್ತಿಯ ಹೊಸಬೆಟ್ಟು, ಕೋಡಿಕೆರೆ, ವಿಷ್ಣುಮೂರ್ತಿ ಲೇಔಟ್, ನಡುಲಚ್ಚಿಲ್, ಮಂಡಲಚ್ಚಿಲ್ ಸುತ್ತಮುತ್ತಲಿನ ಪ್ರದೇಶದ ಕೃಷಿ ಸೇರಿದಂತೆ ಇತರ ಚಟುವಟಿಕೆಗೆ ಈ ಕೆರೆ ನೀರು ಬಳಸಲಾಗುತ್ತಿತ್ತು. ಬಗ್ಗುಂಡಿ ಕೆರೆಯಲ್ಲಿ ವರ್ಷಪೂರ್ತಿ ನೀರಿರುವ ಕಾರಣ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ಒರತೆ ಕಂಡುಬರುತಿತ್ತು. ಆದರೆ ಈಗ ಸ್ಥಳೀಯ ಬಾವಿ ನೀರು ಮಲಿನವಾಗಿದೆ.

    ಕಾಲುವೆಯಲ್ಲಿ ಹರಿಯದ ತ್ಯಾಜ್ಯ: ಕೈಗಾರಿಕಾ ವಲಯದ ಜಲತ್ಯಾಜ್ಯ ಬೈಕಂಪಾಡಿ ಬಳಿ ನಿರ್ಮಿಸಲಾದ ಬೃಹತ್ ಕಾಲುವೆ ಮೂಲಕ ಸಮುದ್ರ ಸೇರುತ್ತಿತ್ತು. ಆದರೆ ಕುಳಾಯಿ, ಹೊಸಬೆಟ್ಟು ಸಮೀಪ ಕೆಲವರು ರಸ್ತೆ ಕಾಮಗಾರಿ ನಡೆಸುವಾಗ ಕಾಲುವೆಗೆ ಮಣ್ಣು ತುಂಬಿಸಿದ್ದಾರೆ. ಇದರಿಂದ ಕಾಲುವೆಯಲ್ಲಿ ಕೈಗಾರಿಕಾ ತ್ಯಾಜ್ಯ ಹರಿಯಲು ತೊಂದರೆಯಾಗುತ್ತಿದೆ. ಹಲವು ಭಾಗದಲ್ಲಿ ಕಾಲುವೆ ಒಡೆದು ತೋಡು ಮೂಲಕ ಬಗ್ಗುಂಡಿ ಕೆರೆಗೆ ಕೈಗಾರಿಕಾ ತ್ಯಾಜ್ಯ ಹರಿಯುತ್ತಿದೆ.

    ಬಗ್ಗುಂಡಿ ಕೆರೆ ಶುದ್ಧೀಕರಣಕ್ಕೆ ಸರ್ಕಾರ ಮುಂದಾಗಬೇಕು. ಇದಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬೇಕಾಗಬಹುದು. ಈ ಕೆರೆ ಉಳಿಸಿದರೆ ವಾಕಿಂಗ್ ಪಾತ್, ಬೋಟಿಂಗ್, ಪಾರ್ಕ್, ಸೈಕ್ಲಿಂಗ್ ಪಾತ್ ನಿರ್ಮಿಸಬಹುದು. ಕದ್ರಿ ಪಾರ್ಕ್, ಪಿಲಿಕುಳ ನಿಸರ್ಗಧಾಮಕ್ಕಿಂತಲೂ ದೊಡ್ಡ ಜಾಗ ಇಲ್ಲಿ ಪ್ರವಾಸೋದ್ಯಮಕ್ಕೆ ಸಿಗಬಹುದು. ಈ ಕೆರೆಗೆ ಹೋಗಲು ಕುಳಾಯಿಯ ಪಡೀಲ್ ಬಳಿ 60 ಫೀಟ್ ಅಗಲದ ರಸ್ತೆಗೆ ಜಾಗ ಬಿಟ್ಟುಕೊಡಲಾಗಿದೆ. ಕೆರೆ ಅಭಿವೃದ್ಧಿಗೆ ಈ ಜಾಗ ಅನುಕೂಲಕರ. ಈ ಕೆರೆ ಅಭಿವೃದ್ಧಿಯಾದರೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯರು. ಈ ಪರಿಸರದ ಸುತ್ತಲಿನ ಬಾವಿಗಳಿಗೆ ಇಲ್ಲಿನ ನೀರೇ ಒಸರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೇ ನೀರಿಗೆ ಅಭಾವ ಸೃಷ್ಟಿಯಾದರೂ ಬಗ್ಗುಂಡಿ ಕೆರೆಯಲ್ಲಿ ನೀರು ಆವಿಯಾದದ್ದಿಲ್ಲ. ಆದ್ದರಿಮದ ಕೆರೆಗೆ ಕಾಯಕಲ್ಪ ಒದಗಿಸುವ ಯತ್ನ ನಡೆಯಲಿ.

    ಎಂ.ಜೆ ಶೆಟ್ಟಿ
    ಮಾಜಿ ಅಧ್ಯಕ್ಷರು, ಕೆನರಾ ಇಂಡಸ್ಟ್ರೀಸ್ ಅಸೋಸಿಯೇಶನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts