More

    ಯೂನಿಟ್-3 ನೀಲಿನಕ್ಷೆಗೆ ಶೀಘ್ರ ಅನುಮೋದನೆ

    ಬಾಗಲಕೋಟೆ: ಬಾಗಲಕೋಟೆ ನಗರದ ಸಂತ್ರಸ್ತರ ಬದುಕು ಹಸನುಗೊಳ್ಳುವ ನಿಟ್ಟಿನಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ನವನಗರ ಯೂನಿಟ್-3 ನೀಲಿನಕ್ಷೆ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆ ದೊರೆಯಲಿದೆ ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ನಗರ ಬಿಟಿಡಿಎ ಕಚೇರಿ ಆವರಣದಲ್ಲಿ ಶುಕ್ರವಾರ ಸಂತಸ್ತರಿಗೆ ಹಕ್ಕು ಪತ್ರ ವಿತರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಎಲ್. 523 ರಿಂದ 525 ಮೀಟರ್‌ವರೆಗಿನ ಮುಳುಗಡೆ ಪ್ರದೇಶದಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. 2421 ಕಟ್ಟಡ ಮಾಲೀಕರು ಹಾಗೂ 1163 ಬಾಡಿಗೆದಾರು ಸಂತ್ರಸ್ತರಾಗಿದ್ದಾರೆ. ಇವರಿಗೆ ಯೂನಿಟ್ 3 ಪುನರ್ವಸತಿ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ 1640 ಎಕರೆ ಜಮೀನು ಬಾಗಲಕೋಟೆ ಮುಚಖಂಡಿ ತಾಂಡಾ ಹಾಗೂ ಸಿಗಿಕೇರಿ ಗ್ರಾಮಗಳ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಅದರಲ್ಲಿ 1224.05 ಎಕರೆ ಈಗಾಗಲೇ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಉಳಿದ ಜಮೀನಿನ ಮಾಲೀಕರು ನ್ಯಾಯಾಲಯದಿಂದ ಸ್ವಾಧೀನ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದು, ಕೋರ್ಟ್ ಆದೇಶದ ಬಳಿಕ ಯೂನಿಟ್ 3 ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

    ಯೂನಿಟ್-3ರನ್ನು 300 ರಿಂದ 500 ಎಕರೆಗೆ 1 ಬ್ಲಾಕ್‌ದಂತೆ ಆಧುನಿಕ ಮಾದರಿಯಲ್ಲಿ 5 ಬ್ಲಾಕ್‌ಗಳನ್ನೊಳಗೊಂಡ ಲೇಔಟ್ ಪ್ಲಾೃನ್ ಸಿದ್ಧಪಡಿಸಲಾಗಿದೆ. ನಗರ ಯೋಜನಾ ಇಲಾಖೆಗೆ ಅನುಮೋದನೆಗೆ ಸಲ್ಲಿಸಲಾಗಿದೆ. 12.27 ಕೋಟಿ ರೂ. ಶುಲ್ಕ ಪಾವತಿಗೆ ನಗರ ಯೋಜನಾ ಪ್ರಾಧಿಕಾರವು ತಿಳಿಸಿದ್ದು, ಈ ಶುಲ್ಕಕ್ಕೆ ವಿನಾಯಿತಿ ಕೋರಿ ಜಲಸಂಪನ್ಮೂಲ ಇಲಾಖೆ ಮುಖಾಂತರ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಮನ್ನಿಸಿ 9.45 ಕೋಟಿ ರೂ. ಪಾವತಿಸಲು ಸೂಚನೆ ಬಂದಿತ್ತು. ಶುಲ್ಕ ಪಾವತಿಸಲಾಗಿದೆ ಎಂದು ಹೇಳಿದರು.

    ಯೂನಿಟ್-1ರ ಆರ್.ಎಲ್. 521 ಮೀಟರ್ ವ್ಯಾಪ್ತಿಯಲ್ಲಿ ಬರುವ 4585 ಯೋಜನಾ ಸಂತ್ರಸ್ತರನ್ನು ಸ್ಥಳಾಂತರಿಸಿ ನವನಗರದ ಯೂನಿಟ್-1ರಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಯೂನಿಟ್-1ರ ನವೀಕರಣ ಮತ್ತು ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 133 ಕೋಟಿ ರೂ.ಗಳೊಂದಿಗೆ ನಗರಸಭೆಗೆ ಹಸ್ತಾಂತರಿಸಲಾಗಿತ್ತು. ಸರ್ಕಾರದ ಆದೇಶದ ಅನ್ವಯ ಆ ಹಣವನ್ನು ಮರಳಿ ಅದರ ಮೇಲಿನ ಆಕರಿಸಿದ ಬಡ್ಡಿಯ ಸಮೇತ ಪ್ರಾಧಿಕಾರಕ್ಕೆ ಪಡೆದುಕೊಳ್ಳಲಾಗಿದೆ. ಸರ್ಕಾರದ ಆದೇಶದನ್ವಯ 150 ಕೋಟಿ ರೂ.ಗೆ ಮೀರದಂತೆ ನವನಗರದ ಯೂನಿಟ್-1ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಅನುಷ್ಠಾನಗೊಳ್ಳಲಿದೆ ಎಂದರು.

    ಇನ್ನು 521 ರಿಂದ 523 ಮೀಟರ್ ವ್ಯಾಪ್ತಿಯ ಸಂತ್ರಸ್ತರ ಕುಟುಂಬಗಳನ್ನು ನವನಗರದ ಯೂನಿಟ್-2ರಲ್ಲಿ ಪುನರ್ವಸತಿ ಕಲ್ಪಿಸಲು ಉದ್ದೇಶಿಸಿದ್ದು, ಬಿಟಿಡಿಎ ವ್ಯಾಪ್ತಿಯಲ್ಲಿ ಬರುವ 1333 ಎಕರೆ ಪ್ರದೇಶದಲ್ಲಿ ಈಗಾಗಲೇ 53 ಸೆಕ್ಟರ್‌ಗಳನ್ನು ಗುರುತಿಸಲಾಗಿದೆ. ಅದಕ್ಕೆ 42 ಸೆಕ್ಟರ್‌ಗಳನ್ನು ವಸತಿಗಾಗಿ, 6 ಸೆಕ್ಟರ್‌ಗಳನ್ನು ಸರ್ಕಾರಿ, ಅರೆ ಸರ್ಕಾರಿ, ಸಂಸ್ಥೆಗಳು ಇತ್ಯಾದಿಗಳಿಗೆ ಮೀಸಲಿಡಲಾಗಿದೆ. ವಸತಿ ಸೆಕ್ಟರ್‌ಗಳಿಗೆ ರಸ್ತೆ, ಚರಂಡಿ, ನೀರು ಸರಬರಾಜು, ವಿದ್ಯುತ್ತೀಕರಣ ಸೇರಿ ಮೂಲ ಸೌಕರ್ಯ ಒದಗಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

    ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕುಮಾರ ಎಳ್ಳಿಗುತ್ತಿ, ಮೋಹನ ನಾಡಗೌಡ, ಶಿವಾನಂದ ತವಳಿ, ಬಿಟಿಡಿಎ ಮಾಜಿ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿ, ಜಿ.ಎನ್. ಪಾಟೀಲ, ಸಿ.ವಿ. ಕೋಟಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಬಿಟಿಡಿಎ ಮುಖ್ಯ ಇಂಜಿನಿಯರ್ ಅಶೋಕ ವಾಸನದ ಸೇರಿ ಇತರರು ಇದ್ದರು.

    ಭಾರತ ಮಾಲಾ 365 ಚತುಷ್ಪ್ಪಥ ಹೆದ್ದಾರಿ ಗುಳೇದಗುಡ್ಡ ಕ್ರಾಸ್‌ದಿಂದ ಗದ್ದನಕೇರಿ ವರೆಗೆ 25 ಕಿ.ಮೀ ಬಾಗಲಕೋಟೆ ನಗರದ ನಡುವೆ ಕಾಲೇಜು ರಸ್ತೆ ಮೂಲಕ ಹಾಯ್ದು ಹೋಗಲಿದೆ. ಇದೀಗ ಡಿಪಿಆರ್ ಹಂತದಲ್ಲಿದೆ. ಕೇಂದ್ರ ಸರ್ಕಾರ ಒಪ್ಪಿಗೆ ಸೂಚನೆ ನೀಡಿದ ಬಳಿಕ ಮುಂದಿನ ಕಾರ್ಯಸೂಚಿ ಅನುಷ್ಠಾನಗೊಳ್ಳಲಿದೆ. ಹೆರಕಲ್ ಕುಡಿಯುವ ನೀರಿನ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಹಳೇ ಯೋಜನೆಯಲ್ಲಿ ಪೈಪ್‌ಲೈನ್ ಚಿಕ್ಕದಾಗಿದ್ದರಿಂದ ಮುಚಖಂಡಿ ಕೆರೆ ತುಂಬಲು ಸಾಧ್ಯವಾಗಿಲ್ಲ. ಹೀಗಾಗಿ ಮುಚಖಂಡಿ, ಶಿರೂರ, ಅಚನೂರ ಕೆರೆ ತುಂಬುವ ಯೋಜನೆ ಒತ್ತು ನೀಡಲಾಗುವುದು.
    ವೀರಣ್ಣ ಚರಂತಿಮಠ ಶಾಸಕ, ಬಿಟಿಡಿಎ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts