More

    ಸಂವಿಧಾನ ಇಕ್ಕಟ್ಟಿನಲ್ಲಿ ಸಿಲುಕಿದೆ: ಸಿ.ಎಂ. ಇಬ್ರಾಹಿಂ

    ಬಾಗಲಕೋಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಆಡಳಿತ, ಅಭಿವೃದ್ಧಿ ಬಗ್ಗೆ ಪರಿಜ್ಞಾನ ಇಲ್ಲ. ಸದ್ಯ ದೇಶದ ಸಂವಿಧಾನ ಇಕ್ಕಟ್ಟಿನಲ್ಲಿದೆ. ಸಂವಿಧಾನ ಬದಲಿಸೋಕೆ ನಾವು ಬಂದಿರುವುದು ಅಂತ ಹೇಳಿದ್ದರು. ಅದರಂತೆ ಹಂತ ಹಂತವಾಗಿ ಬದಲಿಸುತ್ತಿದ್ದಾರೆ. ಸಂವಿಧಾನ ರಕ್ಷಿಸಲು ಜೆಪಿ ಚಳವಳಿ ಮಾದರಿಯಲ್ಲಿ ಹೋರಾಟ ನಡೆಸಬೇಕಿದೆ ಎಂದು ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

    ಅಂದು ಮತ್ತು ಇಂದಿನ ಎನ್‌ಪಿಆರ್ ಪ್ರಶ್ನೆಗಳು ಬೇರೆ ಇವೆ. ಪೌರತ್ವ ಕಾಯ್ದೆ ಮೂಲಕ ಬೇರೆ ದೇಶದಿಂದ ನುಸುಳಿ ಬಂದವರನ್ನು ಹೊರಗೆ ಹಾಕಲಾಗುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಮುಸ್ಲಿಂ ಜನಾಂಗಕ್ಕೆ ಮಾತ್ರವಲ್ಲ, ದೇಶದ 130 ಕೋಟಿ ಜನರಲ್ಲಿ 25 ಕೋಟಿ ದಲಿತರು, 10 ಕೋಟಿ ಅಲೆಮಾರಿ ಹಾಗೂ ಹಿಂದುಳಿದ ವರ್ಗ ಸೇರಿ 80 ಕೋಟಿಯಷ್ಟು ಜನರಿಗೆ ಇದರಿಂದ ಸಮಸ್ಯೆಯಾಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ನಾನು ಬ್ರಾಹ್ಮಣ, ಬಸವಣ್ಣನ ವಿರೋಧಿ ಅಲ್ಲ. 800 ವರ್ಷಗಳ ಹಿಂದೆಯೇ ಬಸವಣ್ಣ ಮನುಸ್ಮತಿಯಲ್ಲಿನ ಜಾತಿ ವ್ಯವಸ್ಥೆ ವಿರೋಧಿಸಿ ಹೋರಾಟ ಮಾಡಿದ್ದರು. ಆದರೆ ಸಂಘ ಪರಿವಾರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಮನುಸ್ಮತಿ ಜಾರಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಸೌದಾಗರ, ಬಿಟಿಡಿಎ ಮಾಜಿ ಅಧ್ಯಕ್ಷ ಎ.ಟಿ.ಮೊಕಾಶಿ, ಮುಖಂಡರಾದ ರಾಜು ಮನ್ನಿಕೇರಿ, ಹಾಜಿಸಾಬ ದಂಡಿನ ಸುದ್ದಿಗೋಷ್ಠಿಯಲ್ಲಿ ಇದ್ದರು.

    ತೇಜಸ್ವಿ ಹೇಳಿದ್ದು ಸತ್ಯ
    ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದು ಸತ್ಯ. ಮುಸ್ಲಿಂ ಜನಾಂಗ ಪಂಚರ್ ಹಾಕುವ ಉದ್ಯೋಗ ಮಾಡುತ್ತಾರೆ. ದಿನವು ದುಡಿದು ತಿನ್ನುತ್ತಾರೆ. ಇದರಲ್ಲಿ ತಪ್ಪೇನಿದೆ? 800 ವರ್ಷ ದೇಶವನ್ನು ಆಳಿದ ಮುಸ್ಲಿಂ ದೊರೆಗಳು ಪ್ರಮುಖ ಹುದ್ದೆಗಳಲ್ಲಿ ಬ್ರಾಹ್ಮಣರಿಗೆ ಅವಕಾಶ ನೀಡಿದ್ದರು. ಶಿವಾಜಿ ಆಡಳಿತದಲ್ಲಿ 7 ಮುಸ್ಲಿಮರು ಮಂತ್ರಿಗಳಾಗಿದ್ದರು. ಇದು ನಿಜವಾದ ಜಾತ್ಯತೀತ. ಮಹಾತ್ಮ ಗಾಂಧಿ ಹತ್ಯೆ ಮಾಡುವಾಗ ಗೋಡ್ಸೆ ಜೈರಾಮ ಎಂದ. ಗಾಂಧಿ ಹೇ ರಾಮ ಎಂದರು. ಅಂದೇ ಇದರ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಇಬ್ರಾಹಿಂ ಹೇಳಿದರು.

    ದಲಿತ ನಾಯಕರಿಗೆ ಆವರಿಸಿದ ಭಯ
    ಪೌರತ್ವ ಕಾಯ್ದೆ ಮೂಲಕ ಹೊರಗಿನಿಂದ ಬಂದ ಶೇ.68 ಜನರಿಗೆ ನಾಗರಿಕತ್ವ ನೀಡುತ್ತಿದ್ದೇವೆ ಎಂದು ಬಿ.ಎಲ್.ಸಂತೋಷ ಹೇಳುತ್ತಿದ್ದಾರೆ. ದಲಿತರು, ಅಲೆಮಾರಿಗಳು ಹೊರಗಿನವರಾ?. ಸಂಸತ್ತಿನಲ್ಲಿರುವ 70ಕ್ಕೂ ಹೆಚ್ಚು ದಲಿತ ಸಂಸದರು, ನಾಯಕರಾದ ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಯಾವ ಭಯ ಅವರನ್ನು ಆವರಿಸಿದೆ ಎನ್ನುವುದು ಗೊತ್ತಿಲ್ಲ ಎಂದು ಇಬ್ರಾಹಿಂ ಹೇಳಿದರು.

    ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ
    ರಾಜ್ಯ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಬಸ್ ಸ್ಟಾೃಂಡ್ ಬಸವಣ್ಣನ ಜೋಳಿಗೆ ಎನ್ನುವಂತಾಗಿದೆ. ಸಿಎಂ ಯಡಿಯೂರಪ್ಪ ಅವರಿಗೆ ಕಿಮ್ಮತ್ತು ಇಲ್ಲವಾಗಿದೆ. ಮಠ-ಮಾನ್ಯಗಳಿಗೆ ದಾಸೋಹದ ಅಕ್ಕಿ ಕೊಡುವುದು ನಿಲ್ಲಿಸಲಾಗಿದೆ. ಮೇ, ಜೂನ್ ನಂತರ ಆಹಾರಕ್ಕಾಗಿ ಹೊಡೆದಾಟ ಶುರುವಾಗಲಿದೆ. ಕುರುಬ ಜನಾಂಗದ ಸಿದ್ದರಾಮಯ್ಯ ಅಕ್ಕಿ ಕೊಟ್ಟ. ಆದರೆ, ಲಿಂಗಾಯತರಾದ ಯಡಿಯೂರಪ್ಪ ಅಕ್ಕಿ ಕೊಡಲು ಆಗುತ್ತಿಲ್ಲ ಎಂದು ತಮ್ಮ ಶೈಲಿಯಲ್ಲಿ ವಾಗ್ದಾಳಿ ನಡೆಸಿದ ಸಿ.ಎಂ.ಇಬ್ರಾಹಿಂ ಏಪ್ರಿಲ್ ನಂತರ ರಾಜ್ಯ ಉಳಿಸಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts