More

    11ರಿಂದ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ

    ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಫೆ.11 ರಿಂದ ಐದು ದಿನ ಜರುಗಲಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಾನುವಾರು ಜಾತ್ರೆಯ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹು ದೊಡ್ಡ ಐತಿಹಾಸಿಕ ಮೋಟಗಿ ಬಸವೇಶ್ವರ ಜಾತ್ರೆ ಹಲವಾರು ದಶಕಗಳಿಂದ ಅತ್ಯಂತ ಯಶಸ್ವಿಯಾಗಿ ಜರುಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಯಶಸ್ವಿಗೊಳಿಸುವಂತೆ ನಿರ್ದೇಶನ ನೀಡಿದರು.

    ಕೃಷಿ, ತೋಟಗಾರಿಕೆ ಇಲಾಖೆಯವರು ರೈತರಿಗೆ ಅನುಕೂಲವಾಗುವಂತೆ ಶಾಮಿಯಾನ ಹಾಕಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಜಾನುವಾರುಗಳಿಗೆ ಹಾಗೂ ರೈತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಜಾನುವಾರುಗಳ ಆರೋಗ್ಯ ರಕ್ಷಣೆ, ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ವೈದ್ಯಕೀಯ ಸೌಲಭ್ಯಗಳ ಜತೆಗೆ ಜಾತ್ರೆ ಸ್ಥಳದಲ್ಲಿಯ ಹೋಟೆಲ್‌ಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಜಾನುವಾರು ಮಾರಾಟಕ್ಕೆ ಆಗಮಿಸುವ ರೈತರಿಗೆ ಪ್ರತಿ ದಿನ ರಾತ್ರಿ ಮನರಂಜನಾ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

    ಜಾತ್ರೆಯಲ್ಲಿ ಆಯ್ಕೆಯಾದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸುವ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಜಾನುವಾರು ಜಾತ್ರೆ ಯಶಸ್ವಿಗೊಳಿಸಲು ಎಲ್ಲ ಇಲಾಖೆ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಜಾನುವಾರು ಆಗಮಿಸುತ್ತಿರುವುದರಿಂದ ಜಾತ್ರೆ ವ್ಯವಸ್ಥಿತವಾಗಿ ನಡೆಸಲು ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ರೈತರಿಗಾಗಿ ಜಾತ್ರಾ ಸ್ಥಳದಲ್ಲಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

    ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ನಿಂಗಪ್ಪ ಅರಕೇರಿ, ವ್ಯಾಪಾರಸ್ಥರ ಅಸೋಸಿಯೇಷನ್ ಅಧ್ಯಕ್ಷ ಮಹೇಶ ಅಂಗಡಿ, ಸದಸ್ಯರಾದ ಕೆ.ವಿ.ಅಥಣಿ, ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ಸಹ ಕಾರ್ಯದರ್ಶಿ ಆರ್.ಎಸ್. ರಾಠೋಡ, ಆರ್.ವಿ. ದಂಡಿನ, ಜಿ.ಎಂ.ಬಗಲಿ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಎಸ್.ಎಚ್.ಅಂಗಡಿ, ಸಹಾಯಕ ನಿರ್ದೇಶಕ ಆರ್.ಎಸ್.ಪದರಾ, ರೈತ ಸಂಪನ್ಮೂಲ ಕೇಂದ್ರದ ಆರ್.ಎಸ್. ಪಂಚಮುಖಿ ಸೇರಿ ಇತರರು ಉಪಸ್ಥಿತರಿದ್ದರು.

    ಬಾಗಲಕೋಟೆ ಜಾನುವಾರು ಜಾತ್ರೆ ಉತ್ತರ ಭಾಗದಲ್ಲಿಯೇ ದೊಡ್ಡ ಹೆಸರು ಪಡೆದಿದೆ. ದೂರದ ಊರುಗಳ ರೈತರು ತಮ್ಮ ರಾಸುಗಳನ್ನು ಮಾರಾಟಕ್ಕೆ ತರುತ್ತಾರೆ. ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಬೇಕು.
    ನಿಂಗಪ್ಪ ಅರಕೇರಿ ಎ.ಪಿ.ಎಂ.ಸಿ. ಅಧ್ಯಕ್ಷ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts