More

    ಮೂಢನಂಬಿಕೆ ಹೋಗಲಾಡಿಸಿ

    ಬಾಗಲಕೋಟೆ: ಹಿಂದು ಸಮಾಜ ಆಲದ ಮರ ಇದ್ದಂತೆ. ಇದಕ್ಕೆ ನೂರಾರು ಟೊಂಗೆಗಳು ಇವೆ. ಎಲ್ಲ ಸಮಾಜದ ಜನರಲ್ಲಿ ದೇಶವೇ ದೇವರು ಎನ್ನುವ ಭಾವನೆ ಎಲ್ಲರಲ್ಲಿ ಒಡಮೂಡಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಶ್ರೀಗುರು ಮೇದಾರ ಕೇತೇಶ್ವರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಕೇತೇಶ್ವರ ಜ್ಯೋತಿ ಯಾತ್ರೆ ಸ್ವಾಗತ ಹಾಗೂ ಮೇದಾರ ಜನಾಂಗದ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ಧರ್ಮದ ಆಧಾರ ಮೇಲೆ ದೇಶವನ್ನು ಇಬ್ಭಾಗ ಮಾಡಲಾಯಿತು. ಭಾರತ ಸರ್ವ ಧರ್ಮಕ್ಕೂ ಆಶ್ರಯ ನೀಡಿದೆ. ನಾವೆಲ್ಲ ಭಾರತೀಯರು ಎನ್ನುವುದನ್ನು ಯಾರೂ ಮರೆಯಬಾರದು. ದೇಶವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಮಹತ್ವದ ಕಾನೂನು ಜಾರಿ ಮಾಡುತ್ತಿದೆ. ಇದಕ್ಕೆ ಮೇದಾರ ಸಮಾಜ ಸೇರಿದಂತೆ ಎಲ್ಲ ಸಣ್ಣ-ಪುಟ್ಟ ಸಮಾಜಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

    ಮೇದಾರ ಜನಾಂಗದ ಕಾಯಕ ಮಾದರಿಯಾಗಿದೆ. ಶರಣ ಮೇದಾರ ಕೇತಯ್ಯನವರ ಕಾಯಕ, ದಾಸೋಹ ನಿಷ್ಠೆ ನಾವೆಲ್ಲ ಅನುಕರಣೆ ಮಾಡಬೇಕು. ಸಮಾಜದ ಮುಖಂಡರು ಮನವಿ ನೀಡಿದಲ್ಲಿ ನವನಗರದಲ್ಲಿ ಮೇದಾರ ಸಮಾಜಕ್ಕೆ ನಿವೇಶನ ನೀಡಲಾಗುವುದು. ಅಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರು, ಶಾಸಕರ ನಿಧಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ಮೇದಾರ ಸಮಾಜ ಶಿಕ್ಷಣ, ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

    ಕರ್ನಾಟಕ ಶ್ರೀಗುರು ಮೇದಾರ ಕೇತೇಶ್ವರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ.ಪಾಟೀಲ ಮಾತನಾಡಿ, ಮೇದಾರ ಕೇತಯ್ಯನವರ ಕಾಯಕ, ದಾಸೋಹ ಪರಂಪರೆಯನ್ನು ಅಣ್ಣ ಬಸವಣ್ಣ ಮೆಚ್ಚಿಕೊಂಡು ಅನುಭವ ಮಂಟಪದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದರು. ಕೇತಯ್ಯನವರು ಕಾಯಕದಿಂದ ಬರುವ ಧಾನ್ಯ, ನಾಣ್ಯ ಮಾತ್ರ ಸ್ವೀಕರಿಸುತ್ತಿದ್ದರು ಎಂದರು.

    ಎಸ್‌ಟಿ ಮೀಸಲಾತಿಯಲ್ಲಿ 58 ಸಮಾಜಗಳು ಬರುತ್ತವೆ. ಇದರಲ್ಲಿ ವಾಲ್ಮೀಕಿ ಸಮಾಜದ ನಂತರ ಮೇದಾರ ಸಮುದಾಯ ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಸಮುದಾಯವಾಗಿದೆ. ಕೆಲವು ಬುಡಕಟ್ಟು ಜನಾಂಗಗಳು ಎರಡು, ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇರುವ ಏಕೈಕ ಬುಡಕಟ್ಟು ಜನಾಂಗ ಎಂದರೆ ಅದು ಮೇದಾರ ಜನಾಂಗ. ಬಿದಿರು ಮರದಿಂದ ಬದುಕು ರೂಪಿಸಿಕೊಂಡಿದೆ. ಸಣ್ಣ ಸಮಾಜವಾಗಿರುವ ಮೇದಾರ ಸಮಾಜಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

    ಚಿತ್ರದುರ್ಗ ಜಿಲ್ಲೆಯ ಮೇದಾರ ಗುರುಪೀಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಕಮತಗಿಯ ವೀರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮುಖಂಡರಾದ ರಮೇಶ ಬುರುಡ, ಅಯ್ಯಪ್ಪ ಮೇದಾರ, ಸರೋಜಾ ಪಾಟೀಲ, ಬಸವರಾಜ ದಾವಣಗೆರೆ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

    12ನೇ ಶತಮಾನದಲ್ಲಿ ಮೇದಾರ ಕೇತಯ್ಯನವರು ಶರಣರಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದ್ದರು. ಕಾಯಕ ನಿಷ್ಠೆಯಿಂದ ಬಸವಣ್ಣನವರ ಪ್ರೀತಿಗೆ ಪಾತ್ರರಾಗಿದ್ದರು. ವಂಚನೆ, ಮೋಸ ಎನ್ನುವ ಶಬ್ದವೇ ಈ ಸಮಾಜಕ್ಕೆ ಗೊತ್ತಿಲ್ಲ. ಸಮಾಜದ ಅಭಿವೃದ್ಧಿಗೆ ಮುಖಂಡರು ಶ್ರಮಿಸಬೇಕು. ಮಕ್ಕಳಿಗೆ ಶಿಕ್ಷಣ ನೀಡಬೇಕು.
    – ಗುರುಮಹಾಂತ ಸ್ವಾಮೀಜಿ ವಿಜಯ ಮಹಾಂತೇಶ ಸಂಸ್ಥಾನಮಠ ಇಳಕಲ್ಲ

    ಭವ್ಯ ಮೆರವಣಿಗೆ…
    ಕೋಟೆನಗರಕ್ಕೆ ಆಗಮಿಸಿದ ಕೇತೇಶ್ವರ ಜ್ಯೋತಿಯಾತ್ರೆಯನ್ನು ಬೆಳಗ್ಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಚರಂತಿಮಠದಿಂದ ಆರಂಭವಾದ ಶೋಭಾಯಾತ್ರೆ ಮಾರವಾಡಿ ಗಲ್ಲಿ, ಅಡತ ಬಜಾರ್, ವಲ್ಲಭಭಾಯಿ ಚೌಕ್, ಎಂ.ಜಿ ರಸ್ತೆ, ಬಸವೇಶ್ವರ ವೃತ್ತ, ಕಾಲೇಜು ರಸ್ತೆ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚರಂತಿಮಠ ತಲುಪಿತು. ಪೂರ್ಣಕುಂಭ ಹೊತ್ತ ಮಹಿಳೆಯರು, ಜಾನಪದ ಕಲಾತಂಡಗಳು ಗಮನ ಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts