More

    ಮಿಲಿಟರಿ ಕ್ಯಾಂಟೀನ್ ಎದುರು ಮಾಜಿ ಸೈನಿಕರ ಪ್ರತಿಭಟನೆ

    ಬಾಗಲಕೋಟೆ: ಗ್ರೊಸರಿ ಹಾಗೂ ಲಿಕ್ಕರ್‌ನ್ನು ಸರಿಯಾಗಿ ಕೊಡದೆ ಹೊರಗಡೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೂರಾರು ಮಾಜಿ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರು ಗುರುವಾರ ನಗರದ ಮಿಲಿಟರಿ ಕ್ಯಾಂಟೀನ್ ಎದುರು ಪ್ರತಿಭಟನೆ ನಡೆಸಿದರು.

    ಮಿಲಿಟರಿ ಕ್ಯಾಂಟೀನ್‌ನಲ್ಲಿ ತಿಂಗಳು ಪೂರ್ತಿ ವಸ್ತುಗಳನ್ನು ಕೊಟ್ಟರೆ ಯಾವುದೇ ತೊಂದರೆ ಆಗಲ್ಲ. ಆದರೆ, ಬಾಗಲಕೋಟೆಯಲ್ಲಿ ಮಾತ್ರ ತಿಂಗಳಿಗೆ ಬರೀ ಎರಡು ದಿನ ಮಾತ್ರ ಕೊಡುತ್ತಾರೆ. ಬಳಿಕ ಖಾಲಿ ಆಗಿದೆ ಎಂದು ಸಾಗಹಾಕುತ್ತಾರೆ. ಎರಡು ದಿನಗಳಲ್ಲಿ ನಾಲ್ಕು ಸಾವಿರದಷ್ಟು ಇರುವ ಮಾಜಿ ಸೈನಿಕರು ಹೇಗೆ ವಸ್ತುಗಳನ್ನು ಖರೀದಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಬಾಗಲಕೋಟೆ, ಕೊಪ್ಪಳ, ಗದಗ ಜಿಲ್ಲೆಗಳಿಂದ ಸೈನಿಕರ ಕುಟುಂಬಗಳು ಇಲ್ಲಿಗೆ ಬರುತ್ತವೆ. ಎರಡೇ ದಿನ ಇವರು ಕೊಡುವುದರಿಂದ ಅನೇಕರು ರಾತ್ರಿ ಹಾಸಿಗೆ ತಂದು ಕ್ಯಾಂಟೀನ್ ಎದುರು ರಸ್ತೆಯಲ್ಲಿ ಮಲಗುತ್ತಾರೆ. ಆದರೂ ಪಾಳೆ ಸಿಗಲ್ಲ. ಮೂರ್ನಾಲ್ಕು ದಿನಗಳ ಆದ ಬಳಿಕ ಖೋಟಾ ಖಾಲಿ ಆಗಿದೆ ಎಂದು ಸಾಗಿಹಾಕುತ್ತಾರೆ. ಮೂರು, ನಾಲ್ಕು ತಿಂಗಳು ಅನೇಕ ಸೈನಿಕರ ಕುಟುಂಬಗಳಿಗೆ ವಸ್ತುಗಳೆ ಸಿಗಲ್ಲ. ನಮ್ಮ ಪಾಲಿನ ಖೋಟಾ ಎಲ್ಲಿಗೆ ಹೋಗುತ್ತದೆ? ಅದರಲ್ಲೂ ಲಿಕ್ಕರ್ ಸಿಗುವುದು ಅಪರೂಪವಾಗಿದೆ. ಅದೆಲ್ಲಿ ಹೋಗುತ್ತದೆ? ಎಲ್ಲಿ ಮಾರಾಟ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದಲ್ಲದೆ, ಹೊರಗಡೆ ಮಾರಾಟ ಮಾಡಲಾಗುತ್ತಿದೆ ಎಂದು ನೇರವಾಗಿಯೇ ಆರೋಪಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು. ತನಿಖೆ ನಡೆಸಿ, ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಂಡು ಅಲ್ಲಿನ ಬೇರೆ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

    ಪ್ರತಿಭಟನೆ ವೇಳೆ ಸಾವಿರಕ್ಕೂ ಅಧಿಕ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ಇದ್ದರು. ಕೆಲ ಮಾಜಿ ಸೈನಿಕರು ರಾತ್ರಿ ಕ್ಯಾಂಟೀನ್ ಎದುರು ಮಲಗಲು ತಂದಿದ್ದ ಹಾಸಿಗೆಯನ್ನು ಸಹ ಪ್ರದರ್ಶಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಮಾಜಿ ಸೈನಿಕರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದರು. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತೆರಳಿ ಚರ್ಚೆ ನಡೆಸಿದರು. ಖರೀದಿಗೆ ಬಂದಿದ್ದ ಎಲ್ಲರಿಗೂ ವಸ್ತುಗಳನ್ನು ಕೊಡುವ ಹಾಗೂ ಇನ್ನು ಮುಂದೆ ಪ್ರತಿ ತಿಂಗಳು ಕನಿಷ್ಠ ಒಂದು ವಾರದ ವರೆಗೆ ವಸ್ತುಗಳನ್ನು ಕೊಡಲು ಒಪ್ಪಿದ್ದಾರೆಂದು ಹಾಗೂ ಪಾಳೆಗಾಗಿ ಇಲ್ಲಿ ರಾತ್ರಿ ಬಂದು ವಾಸ್ತವ್ಯ ಮಾಡದಂತೆ ನೋಡಿಕೊಳ್ಳಲಾಗುತ್ತದೆ ಎಂದು ಪದಾಧಿಕಾರಿಗಳು ಭರವಸೆ ನೀಡಿದ ಬಳಿಕ ಮಾಜಿ ಸೈನಿಕರು ಸಮಾಧಾನಗೊಂಡರು.

    ಲಾಕ್‌ಡೌನ್ ಓಪನ್ ಆದ ಬಳಿಕ ನಸುಕಿನ ವೇಳೆ ಬಂದು ಪಾಳೆ ನಿಂತು ವಸ್ತುಗಳನ್ನು ಖರೀದಿ ಮಾಡುತ್ತಿದ್ದೇವು. ಈಗ ಮೂರು ತಿಂಗಳಿಂದ ಹಿಂದಿನ ದಿನವೇ ಬಂದು ಕ್ಯಾಂಟೀನ್ ಬಳಿಯೇ ಮಲಗುತ್ತೇವೆ. ಆದರೂ ಮೂರು ತಿಂಗಳಿಂದ ಗ್ರೊಸರಿ ಸಿಕ್ಕಿಲ್ಲ. ಬೇಕಿದ್ದರೆ ನಮ್ಮ ಮನೆಗೆ ಬಂದು ಚೆಕ್ ಮಾಡಲಿ. ಈ ವಯಸ್ಸಿನಲ್ಲಿ ಇಲ್ಲಿಗೆ ಬಂದು ಮಲಗಿ, ವಸ್ತು ಖರೀದಿ ಮಾಡುವುದು ಅಂದರೆ ಹೇಗೆ?
    ನರಸಿಂಹ ಮಾಜಿ ಸೈನಿಕ



    ಮಿಲಿಟರಿ ಕ್ಯಾಂಟೀನ್ ಎದುರು ಮಾಜಿ ಸೈನಿಕರ ಪ್ರತಿಭಟನೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts