More

    ಹಳ್ಳಿ ಫೈಟ್‌ಗೆ ಅಖಾಡ ಸಿದ್ಧ

    ಸಂತೋಷ ದೇಶಪಾಂಡೆ
    ಬಾಗಲಕೋಟೆ: ಹಳ್ಳಿ ಫೈಟ್ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ಅಖಾಡ ರಂಗೇರತೊಡಗಿದೆ. ಗ್ರಾಮಗಳ ಪ್ರತಿ ಗಲ್ಲಿ ಗಲ್ಲಿಯಲ್ಲಿ ಚುನಾವಣೆ ಗುಂಗು ಹಿಡಿದಿದೆ.!

    ಜಿಲ್ಲೆಯ 193 ಗ್ರಾಮ ಪಂಚಾಯಿತಿಗಳ ಪೈಕಿ ಡಿ.22 ರಂದು ಮೊದಲ ಹಂತದಲ್ಲಿ 89, ಡಿ.27 ರಂದು ಎರಡನೇ ಹಂತದಲ್ಲಿ 106 ಗ್ರಾಮ ಪಂಚಾಯಿತಿಗಳ ಸೇರಿ 3169 ಸ್ಥಾನಗಳಿಗೆ ಫೈಟ್ ನಡೆಯಲಿದೆ. ಹೀಗಾಗಿ ಹಳ್ಳಿಗಳಲ್ಲಿ ಚುನಾವಣೆ ಅಖಾಡಕ್ಕೆ ಪ್ರವೇಶಿಸಲು ಆಕಾಂಕ್ಷಿಗಳು ಮುಖಂಡರ ಮನವೊಲಿಕೆಗೆ ಮುಗಿಬೀಳುತ್ತಿದ್ದಾರೆ.

    ಪಂಚಾಯಿತಿ ಚುನಾವಣೆ ಪ್ರಮುಖವಾಗಿ ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಟೆನಾಡಿನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ 5 ರಲ್ಲಿ ಬಿಜೆಪಿ, 2 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಲಕ್ಷ ಮತಗಳ ಅಂತರದಿಂದ ಜಯಭೇರಿ ಭಾರಿಸಿತ್ತು. ಇನ್ನು ಎರಡು ಪಕ್ಷಗಳಿಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಿಶ್ರ ಫಲ ದೊರಕಿದ್ದರು ಸಹ ಕೆಲವೆಡೆ ಚಾಣಾಕ್ಷ ನಡೆ ಅನುಸರಿಸಿ ಕಾಂಗ್ರೆಸ್, ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿವೆ.

    2021 ಏಪ್ರಿಲ್, ಮೇ ನಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರ ಅವಧಿ ಮುಕ್ತಾಯಗೊಳ್ಳಲಿದೆ. ಅಲ್ಲದೆ, ಎಸ್.ಆರ್.ಪಾಟೀಲ, ಸುನೀಲಗೌಡ ಪಾಟೀಲ ಅವರ ವಿಧಾನ ಪರಿಷತ್ ಸದಸ್ಯ ಅವಧಿ 2021 ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ. ಈ ಪಂಚಾಯಿತಿ ಫಲಿತಾಂಶ ಪಕ್ಷಗಳ ಮತ್ತು ನಾಯಕರ ರಾಜಕೀಯ ಭವಿಷ್ಯದ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ. ಹೀಗಾಗಿ ಹೆಚ್ಚಿನ ಪಂಚಾಯಿತಿ ಗದ್ದುಗೆ ಹಿಡಿಯಲು ಎರಡು ಪಕ್ಷಗಳು ಬೆವರು ಹರಿಸಲಿವೆ.

    ಬಿಜೆಪಿಯಲ್ಲಿ ಉತ್ಸಾಹ ಜೋರು
    ಜಿಲ್ಲೆಯಲ್ಲಿ ಬಹುಮತ ಇದ್ದರೂ ಜಿಪಂ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿರುವ ಬಿಜೆಪಿಯಲ್ಲಿ ಉತ್ಸಾಹ ಜೋರಾಗಿದೆ. ಈಗಾಗಲೇ ಗ್ರಾಮ ಸ್ವರಾಜ್ ಸಮಾವೇಶ ಮೂಲಕ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಪಕ್ಷದ ಪದಾಧಿಕಾರಿಗಳಿಗೆ ಪಂಚಾಯಿತಿ ಚುನಾವಣೆಯ ಆಸಕ್ತಿ ಇಮ್ಮಡಿಗೊಳಿಸಿದೆ. ಅಲ್ಲದೆ, ಶೇ.80 ಸ್ಥಾನಗಳನ್ನು ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದೆ. ಚನಾವಣೆಗಾಗಿ ಪಂಚಸೂತ್ರಗಳನ್ನು ಅನುಸರಿಸಲಾಗುತ್ತಿದೆ. ವಾರ್ ರೂಂಗಳ ರಚನೆ, ಕಾಲ್ ಸೆಂಟರ್‌ಗಳ ಕಾರ್ಯಾರಂಭ, ಪ್ರತಿ ಬೂತ್‌ನಲ್ಲಿ 5 ಜನ ಒಳಗೊಂಡ ಪಕ್ಷದ ಕಾರ್ಯಕರ್ತರ ಪಂಚ ರತ್ನ ತಂಡ ರಚನೆ ಸೇರಿದಂತೆ ಪೇಜ್ ಪ್ರಮುಖರನ್ನು ನಿಯುಕ್ತಿಗೊಳಿಸಿದೆ.

    ಸರ್ಕಾರದ ವಿರೋಧಿ ಅಲೆ ನೆಚ್ಚಿಕೊಂಡ ಕಾಂಗ್ರೆಸ್
    ಜಿಲ್ಲಾ ಕಾಂಗ್ರೆಸ್ ಕೂಡ ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆಡಳಿತ ಪಕ್ಷದ ಬಿಜೆಪಿ ವಿರುದ್ಧ ಭಾರಿ ಪೈಪೋಟಿ ನೀಡುವ ಉದ್ದೇಶದಿಂದ ನಾಯಕರು, ಪಕ್ಷದ ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸುತ್ತಿದೆ. ತಂತ್ರ, ರಣತಂತ್ರಕ್ಕಿಂತ ಹೆಚ್ಚಾಗಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ಅಲೆ ನೆಚ್ಚಿಕೊಂಡಿದೆ. ರೈತ, ಕಾರ್ಮಿಕ ವಿರೋಧಿ ಕಾನೂನು ಬಿಜೆಪಿ ಸರ್ಕಾರಗಳು ರೂಪಿಸಿದ್ದು, ಚುನಾವಣೆಯಲ್ಲಿ ಕಮಲಕ್ಕೆ ಪಾಠ ಕಲಿಸಿ ಎಂದು ಮತದಾರರ ಬಳಿ ತೇರಳಲು ಕೈ ಪಡೆ ನಿರ್ಧರಿಸಿದೆ.

    ಚೇತರಿಕೆ ಕಾಣದ ಜೆಡಿಎಸ್
    ಜೆಡಿಎಸ್ ಪಕ್ಷವು ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತ್ತಿದೆ. ಹನುಮಂತ ಮಾವಿನಮರದ ಜಿಲ್ಲಾಧ್ಯಕ್ಷರಾದ ಬಳಿಕ ಹೊಸ ಕಾರ್ಯಕರ್ತರ ಸೇರ್ಪಡೆ, ಹಳೇ ಕಾರ್ಯಕರ್ತರನ್ನು ಮತ್ತೆ ಪಕ್ಷ ಕರೆತರುವ ಕಾರ್ಯ ನಡೆದಿದೆ. ಆದರೆ, ಪ್ರತಿ ಚುನಾವಣೆ ಕಾಲಕ್ಕೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿ ಹಾಗೂ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ. ಆದರೂ ಪಕ್ಷದಲ್ಲಿ ಚೇತರಿಕೆ ಕಂಡು ಬರುತ್ತಿಲ್ಲ.

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯ ಘಟಕದ ನಿರ್ದೇಶನದ ಮೇರೆಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಯಕರು, ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಿದ್ದೇವೆ.
    ಶಾಂತಗೌಡ ಪಾಟೀಲ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ

    ಕಳೆದ ಸಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಸ್ಥಾನ ಗಳಿಸಿತ್ತು. ಈ ಸಾರಿಯೂ ಅದೇ ರೀತಿ ಗೆಲ್ಲಲು ತಯಾರಿ ಮಾಡಿಕೊಳ್ಳಲಾಗಿದೆ. ಸರ್ಕಾರದ ಜನ ವಿರೋಧಿ ನೀತಿ ಮತದಾರರ ಎದುರು ಇಟ್ಟು ಮತ ಕೇಳಲಿದ್ದೇವೆ. ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಯಶಸ್ವಿಯಾಗುವ ನಿಟ್ಟಿನಲ್ಲಿ ಶ್ರಮ ವಹಿಸಲಾಗುವುದು.
    ನಾಗರಾಜ ಹದ್ಲಿಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ

    ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಅನುದಾನ ಬಂದರು ಪಕ್ಷಗಳ ರಾಜಕಾರಣದಿಂದ ಸುಭದ್ರ, ಪ್ರಾಮಾಣಿಕ ಆಡಳಿತ ಗ್ರಾಮೀಣಾಭಿವೃದ್ಧಿಗೆ ಹಿನ್ನಡೆಯಾಗಿದೆ. ಇದನ್ನು ಮನಗಂಡು ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಈ ಸಾರಿ ಗ್ರಾಪಂ ಚುನಾವಣೆಯಲ್ಲಿ ಕರವೇ ಬೆಂಬಲಿತ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಮತದಾರರು ಬೆಂಬಲಿಸುವ ವಿಶ್ವಾಸವಿದೆ.
    ರಮೇಶ ಬದ್ನೂರ, ಕರವೇ ಜಿಲ್ಲಾ ಘಟಕ ಅಧ್ಯಕ್ಷ (ನಾರಾಯಣಗೌಡ ಬಣ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts