More

    ಅಕ್ರಮ ಪಡಿತರ ಸಾಗಣೆ ಲಾರಿ ವಶ

    ಬಾಗಲಕೋಟೆ: ಸರ್ಕಾರದ ವಿವಿವಿಧ ಯೋಜನೆಗಳಿಗೆ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಮೇಲೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ 101 ಕ್ವಿಂಟಾಲ್ ಪಡಿತರ ಅಕ್ಕಿ, ಲಾರಿ ವಶಕ್ಕೆ ಪಡೆದಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಜಗದೀಶ ಬಿರಾದಾರ (25)ನನ್ನು ವಶಕ್ಕೆ ಪಡೆಯಲಾಗಿದೆ. ಬಾಗಲಕೋಟೆಯ ಎಪಿಎಂಸಿ ಬಳಿ ಅಕ್ರಮವಾಗಿ ಅಕ್ಕಿ ಮೂಟೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದರು. ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕನವಾಡಿ ನೇತೃತ್ವದಲ್ಲಿ ಬೆಳಗ್ಗೆ 6 ಗಂಟೆಗೆ ಪೊಲೀಸ್ ಇಲಾಖೆ, ಆಹಾರ ಇಲಾಖೆ ಸಿಬ್ಬಂದಿ ಜಂಟಿಯಾಗಿ ದಾಳಿ ಮಾಡಿದರು.

    ನವನಗರದ ಪೊಲೀಸ್ ಠಾಣೆಯಲ್ಲಿ ಅವಶ್ಯಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ, ಅಕ್ರಮವಾಗಿ ಯಾರು ಸಾಗಣೆ ಮಾಡುತ್ತಿದ್ದರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಅಕ್ಕಿಯನ್ನು ಗದಗ ಜಿಲ್ಲೆಯ ಗಜೇಂದ್ರಗಡದಿಂದ ಬಾಗಲಕೋಟೆ, ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ.

    ಲಾರಿ ಮೂಲಕ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ 101 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ನವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮುಚಖಂಡಿ ಗ್ರಾಮದಲ್ಲಿ ನ್ಯಾಯ ಬೆಲೆ ಮಳಿಗೆಗೆ ಇಲಾಖೆಯಿಂದ ನೀಡಲಾಗಿದ್ದ 14 ಕ್ವಿಂಟಾಲ್ ಅಕ್ಕಿಯನ್ನು ಬೇರೆ ಸ್ಥಳದಲ್ಲಿ ಇಡಲಾಗಿತ್ತು. ಪರಿಶೀಲನೆ ವೇಳೆ ಅಕ್ರಮ ಉದ್ದೇಶಕ್ಕೆ ಬೇರೆಡೆ ಅಕ್ಕಿ ಇಡಲಾಗಿದೆ ಎನ್ನುವುದು ಗೊತ್ತಾಗಿದೆ. ಹೀಗಾಗಿ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಇಲಾಖೆ ಸಿಬ್ಬಂದಿ ಪ್ರಕರಣ ದಾಖಲು ಮಾಡುತ್ತಿದ್ದಾರೆ.
    ಶ್ರೀಶೈಲ ಕಂಕನವಾಡಿ ಆಹಾರ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts