More

    ಸರ್ಕಾರಿ ಮೆಡಿಕಲ್ ಕಾಲೇಜಿಗೆ ವಿರೋಧವಿಲ್ಲ

    ಬಾಗಲಕೋಟೆ: ಬಾಗಲಕೋಟೆಗೆ ಘೋಷಣೆಯಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ನನ್ನ ವಿರೋಧವಿಲ್ಲ. ಕಾಲೇಜು ಸ್ಥಾಪನೆಗೆ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಖುದ್ದಾಗಿ ಭೇಟಿಯಾಗಿ ಮನವಿ ಮಾಡಿದ್ದೇನೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ಸರ್ಕಾರಿ ಕಾಲೇಜು, ಸಂಸ್ಥೆಗಳು ಬಾಗಲಕೋಟೆ ಮತಕ್ಷೇತ್ರಕ್ಕೆ ಅತಿ ಹೆಚ್ಚಾಗಿ ತೆಗೆದುಕೊಂಡು ಬಂದಿದ್ದು, ನನ್ನ ಅವಧಿಯಲ್ಲಿ ಸರ್ಕಾರಿ ಡಿಪ್ಲೊಮಾ ಕಾಲೇಜು, ಪದವಿ ಕಾಲೇಜು ಮಂಜೂರು ಮಾಡಿಸಿ ಕಾರ್ಯಾರಂಭ ಸಹ ಮಾಡಲಾಗಿದೆ. ಮೆಡಿಕಲ್ ಕಾಲೇಜಿಗೆ ವಿರೋಧ ಮಾಡಿಲ್ಲ. ಕೆಲವರು ಅನಗತ್ಯವಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಒಳ್ಳೆಯ ಕೆಲಸ ಸಹಿಸಿಕೊಳ್ಳದೆ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸರ್ಕಾರಿ ಮೆಡಿಕಲ್ ಕಾಲೇಜಿಗೆ ಶೇ.60 ಕೇಂದ್ರ, ಶೇ.40 ರಷ್ಟು ಅನುದಾನ ರಾಜ್ಯ ಸರ್ಕಾರ ಒದಗಿಸಬೇಕು. ಆದರೆ, ಕೋವಿಡ್ ಪರಿಣಾಮ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇದೆ. ಹೀಗಾಗಿ ಅನುದಾನ ಬಿಡುಗಡೆಗೆ ವಿಳಂಬವಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ಜಲಜೀವನ ಮಿಷನ್ ಯೋಜನೆಯಡಿ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸಬೇಕೆಂಬ ಉದ್ದೇಶವಿದೆ. ರೈತರು ಸ್ವಯಂ ಪ್ರೇರಣೆಯಿಂದ ಭೂಮಿ ನೀಡಬೇಕು. ಒತ್ತಾಯ ಪೂರ್ವಕವಾಗಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದರು.

    ಭದ್ರಾ ಯೋಜನೆಯಂತೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಅವರ ಅವಧಿಯಲ್ಲಿಯೇ ಈ ಯೋಜನೆ ರಾಷ್ಟ್ರೀಯ ಯೋಜನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಾಣಾಪುರ – ಗದ್ದನಕೇರಿ 367 ರಾಷ್ಟ್ರೀಯ ಹೆದ್ದಾರಿ ಯೋಜನೆ ಅಂತಿಮ ಹಂತಕ್ಕೆ ಬಂದಿದೆ. ಈ ಚತುಷ್ಪಥ ರಸ್ತೆಗೆ 264 ಕೋಟಿ ರೂ. ಅನುಮೋದನೆ ಸಿಕ್ಕಿದೆ. ಬಾಗಲಕೋಟೆ ನಗರದಲ್ಲಿ ಹಾಯ್ದು ಹೋಗುವ ಈ ರಸ್ತೆ ಶಿರೂರ ಕ್ರಾಸ್‌ದಿಂದ ಬಿವಿವಿ ಸಂಘದ ಕಾಲೇಜು ಮಾರ್ಗವಾಗಿ ಗದ್ದನಕೇರಿವರೆಗೆ ಸಾಗಲಿದೆ. ಬಾಗಲಕೋಟೆ ನಗರದಲ್ಲಿ ಯಾವುದೇ ಕಟ್ಟಡ, ಭೂಮಿ ಹಾನಿ ಮಾಡುವುದಿಲ್ಲ. ಅಗಲದಲ್ಲಿ ಕಡಿಮೆ ಮಾಡಲಾಗುತ್ತದೆ. ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು. ಇನ್ನು ಭಾರತ ಮಾಲಾ ಯೋಜನೆ ಅಡಿಯಲ್ಲಿ ವಿವಿಧ ಹೆದ್ದಾರಿಗಳು ಜಿಲ್ಲೆಯಲ್ಲಿ ನಿರ್ಮಾಣವಾಗಲಿವೆ.
    ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ



    ಸರ್ಕಾರಿ ಮೆಡಿಕಲ್ ಕಾಲೇಜಿಗೆ ವಿರೋಧವಿಲ್ಲ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts