More

  ದುಡಿಯುವ ಕೈಗಳಿಗೆ ನರೇಗಾ ವರದಾನ

  ಬಾಗಲಕೋಟೆ: ಉದ್ಯೋಗ ಅರಿಸಿ ಮಂಗಳೂರು, ಬೆಂಗಳೂರು, ಗೋವಾಗೆ ಗುಳೆ ಹೋಗುವ ಜನರರನ್ನು ತಡೆದು ಸ್ಥಳೀಯವಾಗಿ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಆರಂಭಿಸಿದೆ. ಸಾಕಷ್ಟು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

  ಬಾದಾಮಿ ತಾಲೂಕಿನ ತೋಗುಣಸಿ ಮತ್ತು ಕೋಟೆಕಲ್ಲ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಐಇಸಿ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡ ಕಾರ್ಮಿಕರಿಗೆ ಆರೋಗ್ಯ ಉಚಿತ ತಪಾಸಣೆ ಹಾಗೂ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ದೂರದ ನಗರಗಳಿಗೆ ಉದ್ಯೋಗ ಅರಿಸಿ ಹೋಗಬೇಡಿ. ಸ್ಥಳೀಯವಾಗಿಯೇ ನಿಮಗೆ ಉದ್ಯೋಗ ನೀಡಲಾಗುತ್ತದೆ. ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿದವರಿಗೆ 100 ದಿನ ಹಾಗೂ ಬರಗಾಲದಲ್ಲಿ 150 ದಿನ ಕೂಲಿ ನೀಡಲಾಗುತ್ತಿದೆ. ದಿನಕ್ಕೆ 249 ರೂ. ಕೂಲಿ ನೀಡಲಾಗುತ್ತದೆ. ಗಂಡು, ಹೆಣ್ಣು ಎನ್ನದೆ ಸಮಾನ ಕೂಲಿ ನೀಡಲಾಗುತ್ತಿದೆ. ಅಂಗವಿಕಲತೆ ಮತ್ತು ಹಿರಿಯ ನಾಗರಿಕರಿಗೆ ಕೆಲಸದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

  ತೋಗುಣಶಿ ಗ್ರಾಮದ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ವಿವಿಧ ಕಾಮಗಾರಿಗಳಲ್ಲಿ 350ಕ್ಕೂ ಹೆಚ್ಚು ಜನ ಕೂಲಿ ಮಾಡುತ್ತಿದ್ದಾರೆ. ಮಹಿಳಾ ಕಾರ್ಮಿಕರಿಗೆ ಗ್ರಾಮೀಣೋಪಾಯ ಯೋಜನೆ ಅಡಿಯಲ್ಲಿ ಸ್ವ-ಸಹಾಯ ಗುಂಪು ರಚನೆ ಮಾಡಿ ಸ್ವ-ಉದ್ಯೋಗ ಕೈಗೊಳ್ಳಲು ಸಹಾಯಧನ ಸಾಲದ ಸೌಲಭ್ಯಗಳ ಒದಗಿಸಲಾಗುವುದು. ನರೇಗಾದಲ್ಲಿ ಕುರಿ, ಕೋಳಿ, ದನದ ತೊಟ್ಟಿ ನಿರ್ಮಾಣ ಸೇರಿ ವಿವಿಧ ಕಾಮಾಗಾರಿ ಕೈಗೊಳ್ಳಲು ಅವಕಾಶವಿದೆ. ದುಡಿಯುವ ಕೈಗಳಿಗೆ ಮಾತ್ರವಲ್ಲದೆ ರೈತರಿಗೂ ಸಹ ನರೇಗಾ ವರದಾನವಾಗಿದೆ ಎಂದು ಹೇಳಿದರು.

  ಕಾರ್ಮಿಕ ಯಲ್ಲಪ್ಪ ಉಪ್ಪಾರ ಮಾತನಾಡಿದರು. ಬಾದಾಮಿ ತಾಪಂ ಇಒ ಡಾ.ಪುನೀತ್, ತೋಗುಣಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಲ್.ಜಿ. ಶಾಂತಗೇರಿ, ಎಡಿಪಿಸಿ ನಾಗರಾಜ ರಾಜನಾಳ, ಜಿಲ್ಲಾ ಐಇಸಿ ಸಂಯೋಜಕ ಪವನ ಕುಲಕರ್ಣಿ, ಜಿಲ್ಲಾ ಡಿಎಂಐಎಸ್ ಉಜ್ವಲ ಸಕ್ರಿ, ತಾಲೂಕು ಐಇಸಿ ಸಂಯೋಜಕ ಸಮೀರ್ ಉಮರ್ಜಿ, ಈರಣ್ಣ ಮಾಸ್ತಿ ಇತರರು ಇದ್ದರು.

  350 ಜನರ ಆರೋಗ್ಯ ತಪಾಸಣೆ
  ಕೋಟಿಕಲ್ ಗ್ರಾಮ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಸ್ಥಳದಲ್ಲಿ ಆರೋಗ್ಯ ಶಿಬಿರ ನಡೆಸಲಾಯಿತು. 350 ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಸ್ಥಳದಲ್ಲಿಯೇ ಔಷಧಗಳನ್ನು ವಿತರಿಸಲಾಯಿತು. ತೋಗುಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ.ಬಸವರಾಜ ಕಾರ್ಮಿಕರ ತಪಾಸಣೆ ಮಾಡಿದರು. ಆರೋಗ್ಯ ಇಲಾಖೆಯಿಂದ ಕೊಡಮಾಡುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ನೀಡಲಾಯಿತು. ಈ ಕಾರ್ಡ್‌ನ್ನು ಪಡೆದವರು 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ ಇದ್ದರು.

  ನರೇಗಾ ಯೋಜನೆಯಡಿ ಹಮ್ಮಿಕೊಂಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಓರ್ವ ಕೂಲಿ ಕಾರ್ಮಿಕ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ತಾಪಂ ಇಒ ಡಾ.ಪುನೀತ್ ಅವರಿಗೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಸೂಚಿಸಿದರು.

  ಅಂಗವಿಕಲತೆಯಿಂದ ಬಳಲುತ್ತಿರುವ ನನಗೆ ನರೇಗಾ ಯೋಜನೆ ವರದಾನವಾಗಿದೆ. ಇದರಿಂದ ಉದ್ಯೋಗ ಅರಿಸಿ ವಲಸೆ ಹೋಗುವುದು ತಪ್ಪಿದೆ. ಬರಗಾಲ, ಅತಿವೃಷ್ಟಿ ಸಂದರ್ಭದಲ್ಲಿ ಜಮೀನಿನಿಂದ ನಷ್ಟವಾಗುತ್ತದೆ. ಇದೀಗ ನರೇಗಾ ಯೋಜನೆಯಿಂದ ತುಂಬಾ ಅನುಕೂಲವಾಗುತ್ತಿದೆ.
  – ಯಮನವ್ವ ಪೂಜಾರಿ ಕೂಲಿ ಕಾರ್ಮಿಕರು ತೋಗುಣಸಿ ಗ್ರಾಮ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts