More

    ಮಾಲೀಕರ ಮೇಲೆ ಕೇಸ್ ದಾಖಲಿಸಿ, ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಖಡಕ್ ಸೂಚನೆ

    ಬಾಗಲಕೋಟೆ: ಬಾಗಲಕೋಟೆ ನಗರ ಸ್ಲಂ ಮುಕ್ತವಾಗಬೇಕು. ಒತ್ತುವರಿ ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನೀರು, ವಿದ್ಯುತ್, ಚರಂಡಿ, ರಸ್ತೆ ಸೇರಿ ಮೂಲ ಸೌಕರ್ಯ ಒದಗಿಸದೆ ನಗರಸಭೆಗೆ ಹಸ್ತಾಂತರ ಮಾಡುವ ಖಾಸಗಿ ಲೇಔಟ್‌ಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ನವನಗರದ ನಗರಸಭೆ ಸಭಾಭವನದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಒತ್ತುವರಿ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಸರ್ಕಾರಿ ಜಾಗೆಯಲ್ಲಿ ಅನಧಿಕೃತವಾಗಿ ಶೆಡ್, ಡಬ್ಬಾ ಅಂಗಡಿಗಳು ನಿರ್ಮಿಸಿಕೊಂಡಲ್ಲಿ ಅವುಗಳನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆ, ಬಿಟಿಡಿಎ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಸರ್ಕಾರಿ ಜಾಗೆ ತೆರವುಗೊಳಿಸಿ ಡಬ್ಬಾ ಅಂಗಡಿಗಳನ್ನು ತಮ್ಮ ಕಚೇರಿ ಆವರಣಕ್ಕೆ ಸ್ಥಳಾಂತರ ಮಾಡಿ ಹರಾಜು ಹಾಕಬೇಕು ಎಂದು ಸೂಚನೆ ನೀಡಿದರು.

    ನವನಗರ, ವಿದ್ಯಾಗಿರಿ, ಹಳೇ ಬಾಗಲಕೋಟೆ ನಗರದಲ್ಲಿ ಮಳೆಯಾದರೆ ರಸ್ತೆ ಮೇಲೆ ವ್ಯಾಪಕ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ವಿಷಯದಲ್ಲಿ ನಗರಸಭೆ, ಬಿಟಿಡಿಎ ಅಧಿಕಾರಿಗಳ ನಿರ್ಲಕ್ಷೃ ಧೋರಣೆ ಸಹಿಸಲು ಸಾಧ್ಯವಿಲ್ಲ. ನೀರು ಸರಾಗವಾಗಿ ಚರಂಡಿ ಸೇರುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ವಿಷಯವನ್ನು ಶಾಸಕರೇ ಗಮನಿಸಬೇಕು ಎನ್ನುವುದು ತರವಲ್ಲ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಕಣ್ಣಿಗೆ ಕಂಡ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು ಎಂದು ಕರ್ತವ್ಯಗಳ ಬಗ್ಗೆ ಮೃದು ಮಾತಿನಲ್ಲಿ ಶಾಸಕ ವೀರಣ್ಣ ಚರಂತಿಮಠ ಪಾಠ ಮಾಡಿದರು.

    ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ರವಿ ಧಾಮಜಿ, ಸದಸ್ಯರಾದ ವೀರಣ್ಣ ಶಿರಗಣ್ಣವರ, ಚನ್ನವೀರ ಅಂಗಡಿ, ಸವಿತಾ ಲೆಂಕೆನ್ನವರ, ಸರಸ್ವತಿ ಕುರಬರ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಇತರರು ಇದ್ದರು.

    ಏಜೆಂಟರ್ ಹಾವಳಿ ತಡೆಗಟ್ಟಿ
    ಸಭೆಯಲ್ಲಿ ಶಶಿಕಲಾ ಮಜ್ಜಗಿ ಮಾತನಾಡಿ, ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ. ಜನನ, ಮರಣ ಪ್ರಮಾಣ ಪತ್ರ ಸುಲಭವಾಗಿ ದೊರೆಯುತ್ತಿಲ್ಲ. ನನ್ನದು ಆದಿಯಾಗಿ ಎಲ್ಲ ನಗರಸಭೆ ಸದಸ್ಯರ ಸಹಿ ಫೋರ್ಜರಿ ಮಾಡಿ ದಾಖಲಾತಿ ಸೃಷ್ಟಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು ಎಂದು ಆಗ್ರಹಿಸಿದರು.

    ಈ ವೇಳೆ ಇನ್ನುಳಿದ ನಗರಸಭೆ ಸದಸ್ಯರು ಮಾತನಾಡಿ, ನಗರದ ಹಲವೆಡೆ ರಸ್ತೆ, ಚರಂಡಿಗಳ ವ್ಯವಸ್ಥೆ ಸರಿಯಿಲ್ಲ. ಪ್ರತಿ ಸಭೆಯಲ್ಲಿ ಮಾತು ಕೊಡುವ ಅಧಿಕಾರಿಗಳು ನಂತರ ಕ್ಯಾರೇ ಎನ್ನುವುದಿಲ್ಲ. ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

    ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ವೀರಣ್ಣ ಚರಂತಿಮಠ, ಅಧಿಕಾರಿಗಳು ತಮ್ಮ ಕೆಲಸ ರೀತಿ, ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಗರಸಭೆ ಸದಸ್ಯರ ಸಹಿ ನಕಲಿ ಮಾಡಲಾಗುತ್ತಿದೆ ಎಂದರೆ ಏನರ್ಥ? ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎನ್ನುವುದನ್ನು ಸಹಿಸಲು ಸಾಧ್ಯವಿಲ್ಲ. ಮೊದಲು ನಗರಸಭೆಯಲ್ಲಿ ಏಜೆಂಟರ ಹಾವಳಿ ತಡೆಗಟ್ಟಬೇಕು. ಸಾರ್ವಜನಿಕರ ಕಾರ್ಯಗಳನ್ನು ಸುಲಭವಾಗಿ ಮಾಡಿಕೊಡಬೇಕು. ವಾರ್ಡ್‌ಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಎಪಿಎಂಸಿ ವೃತ್ತದಲ್ಲಿ ಬಸವಣ್ಣ ಮೂರ್ತಿ ಸ್ಥಾಪನೆ
    ಬಹುದಿನಗಳ ಬೇಡಿಕೆಯಾಗಿದ್ದ ನವನಗರದ ಎಪಿಎಂಸಿ ವೃತ್ತದಲ್ಲಿ ಅಣ್ಣ ಬಸವಣ್ಣನ ಮೂರ್ತಿ ಸ್ಥಾಪಿಸಲು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ದೊರೆಯಿತು. ಪಿಡಬ್ಲೂೃಡಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದಿಂದ ಎನ್‌ಒಸಿ ಪಡೆದುಕೊಂಡು ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಬೇಕು. ಮೂರ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ವೀರಣ್ಣ ಚರಂತಿಮಠ ಭರವಸೆ ನೀಡಿದರು.

    ಇನ್ನು ಸಭೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ಚರ್ಚೆಯಾಯಿತು. ಬಾಗಲಕೋಟೆ ನಗರದಲ್ಲಿ 27660 ಮನೆಗಳ ಸಮೀಕ್ಷೆ ನಡೆಸಲಾಗಿದ್ದು, 1447 ಮಕ್ಕಳು ಶಾಲೆ ಬಿಟ್ಟಿರುವುದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ವಾದ-ವಿವಾದದಿಂದ ಸಮಸ್ಯೆ ಬಗೆ ಹರಿಯಲ್ಲ
    ನಗರದಲ್ಲಿ 247 ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡು ವರ್ಷಗಳು ಗತಿಸಿದರೂ ಇದುವರೆಗೂ ಒಂದು ಹನಿ ನೀರು ಹರಿದಿಲ್ಲ ಎಂದು ನಗರಸಭೆ ಸದಸ್ಯರು ದೂರಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಹಾಜಸಾಬ ದಂಡಿ ಮಾತನಾಡಿ, 247 ನೀರಿನ ಮೀಟರ್ ಕೂಡ ಕಿತ್ತು ಹೋಗಿವೆ. ವ್ಯವಸ್ಥೆ ಮಾತ್ರ ಸುಧಾರಣೆಯಾಗಿಲ್ಲ ಎಂದು ದೂರಿದರು. ಇದರಿಂದ ಕಾಂಗ್ರೆಸ್, ಬಿಜೆಪಿ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ವಾಗ್ದಾದ ನಡೆಯಿತು.

    ಮಧ್ಯಪ್ರವೇಶ ಮಾಡಿದ ಶಾಸಕ ವೀರಣ್ಣ ಚರಂತಿಮಠ ವಾದ-ವಿವಾದದಿಂದ ಸಮಸ್ಯೆ ಪರಿಹಾರ ವಾಗುವುದಿಲ್ಲ. ಈ ನೀರಿನ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷೃ ಧೋರಣೆ ಇದೆ. ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.

    ಕೇಂದ್ರ, ರಾಜ್ಯ ಸರ್ಕಾರ ನಗರ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸಲು, ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಅನುದಾನ ನೀಡಿವೆ. ಅಮೃತ ಯೋಜನೆ, ನಗರೋತ್ಥಾನ ಯೋಜನೆ ಹಣ ಸದ್ಬಳಕೆಯಾಗಬೇಕು. ನಗರದಲ್ಲಿ ನಡೆಯುತ್ತಿರುವ ಒತ್ತುವರಿ ಕಾರ್ಯಚರಣೆಯನ್ನು ನಿಲ್ಲಿಸಬಾರದು. ಅಗತ್ಯ ಬಿದ್ದಲ್ಲಿ ಪೊಲೀಸ್ ರಕ್ಷಣೆ ನೀಡಲಾಗುವುದು.
    ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts