More

    ಇತಿಹಾಸದಲ್ಲೇ ಇಂತಹ ಭ್ರಷ್ಟ ಸರ್ಕಾರ ಕಂಡಿಲ್ಲ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪ

    ಬಾದಾಮಿ: ನಾನು ನಾಲ್ಕು ದಶಕದಿಂದ ರಾಜಕಾರಣದಲ್ಲಿದ್ದೇನೆ. ಇತಿಹಾಸದಲ್ಲಿಯೇ ಇಂತಹ ಭ್ರಷ್ಟ ಸರ್ಕಾರ ಕಂಡಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಮಗ ಮತ್ತು ಮಂತ್ರಿಗಳು ದುಡ್ಡು ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ, ಬಾದಾಮಿ ಶಾಸಕ ಸಿದ್ದರಾಮಯ್ಯ ಆರೋಪಿಸಿದರು.

    ಪಟ್ಟಣದ ಹೊರ ವಲಯದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆಪರೇಷನ್ ಕಮಲದಿಂದ ಬಿಎಸ್‌ವೈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮಂತ್ರಿಗಳು ಅನುದಾನ ಬಿಡುಗಡೆ ಮಾಡಲು, ಎನ್‌ಒಸಿ ಕೊಡಲು ಶೇ.10 ಹಣ ಪಡೆಯುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊಡುತ್ತಿಲ್ಲ. ಸಿಎಂ ಪುತ್ರ ವಿಜಯೇಂದ್ರ ಜೆಸಿಬಿಯಿಂದ ದುಡ್ಡು ಬಾಚುತ್ತಿದ್ದಾರೆ. ಜನ ಬಿಜೆಪಿಗೆ ಯಾಕೆ ವೋಟ್ ಹಾಕುತ್ತಾರೆ ಎಂಬುದು ತಿಳಿಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

    ಕಬ್ಬಲಗೇರಿಯಿಂದ 125 ಕಿ.ಮೀ. ಕಾಲುವೆಗೆ ನೀರು ಹರಿಸುವ ಯೋಜನೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದಲ್ಲಿ ಹಣದ ಕೊರತೆ ಇದೆ. ಯಾವುದೇ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ಸರ್ಕಾರದಿಂದ ವರ್ಗಾವಣೆಗೆ ಭಾರಿ ಹಣ ಪಡೆಯುತ್ತಿದ್ದು, ಸಬ್ ರಿಜಿಸ್ಟ್ರಾರ್, ಪಿಎಸ್‌ಐ ವರ್ಗಾವಣೆಗೆ 60 ಲಕ್ಷ ರೂ. ಲಂಚ ಪಡೆಯುತ್ತಿದ್ದಾರೆ ಎಂದರು.

    ನಾನು ಸಮ್ಮಿಶ್ರ ಸರ್ಕಾರವಿದ್ದಾಗ ಕೆರೂರ ಏತ ನೀರಾವರಿ, ಬಾದಾಮಿ, ಕೆರೂರ 18 ಗ್ರಾಮಗಳ ಕುಡಿಯುವ ನೀರಿನ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ತ್ರಿಸ್ಟಾರ್ ಹೋಟೆಲ್, ಪಾರ್ಕಿಂಗ್ ಪ್ಲಾಜಾ ಕ್ರಿಯಾ ಯೋಜನೆ ತಯಾರಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಎರಡು ಮೂರು ವರ್ಷದ ನಂತರ ಅನುದಾನ ನೀಡಿದ್ದಾರೆ ಎಂದರು.

    ಬಾದಾಮಿ ತಾಲೂಕು ಪತ್ರಿಕಾ ಭವನಕ್ಕೆ ಈಗ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಡುವುದಾಗಿ ತಿಳಿಸಿದರು.

    ಹಂಪಿ ವಿವಿ ಉಳಿಸಿಕೊಳ್ಳಲು ಪ್ರಯತ್ನ
    ಬನಶಂಕರಿ ಹಂಪಿ ವಿವಿ ಸ್ಥಳಾಂತರ ಮಾಡಬಾರದು ಎಂದು ಸ್ಥಳೀಯರ ಒತ್ತಾಯದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇದರ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಬಾರಿ ಬಾದಾಮಿಗೆ ಬಂದಾಗ ಬನಶಂಕರಿಗೆ ಭೇಟಿ ನೀಡುತ್ತೇನೆ. ಇಲ್ಲಿ ಪ್ರವಾಸೋದ್ಯಮ ಬೆಳೆಯಲು ತ್ರಿಸ್ಟಾರ್ ಹೋಟೆಲ್ ಆಗಬೇಕು. ಹಂಪಿ ವಿವಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts