More

    ಮತ್ತೆ ಶುರುವಾದ ಮದುವೆ ಸದ್ದು

    ಬೆಳಗಾವಿ: ಸಾವಿರಾರು ಜನ ಸೇರುವ ಅದ್ದೂರಿ ವಿವಾಹಗಳಿಗೆ ಕರೊನಾ ಬ್ರೇಕ್ ಹಾಕಿರುವುದರಿಂದ ಸರಳವಾಗಿ ಮದುವೆಯಾಗುವವರ ಸಂಖ್ಯೆ ಹೆಚ್ಚಿದೆ. ಜತೆಗೆ, ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುವ ಸಂಪ್ರದಾಯದಲ್ಲಿ ಸಂಭ್ರಮ ಇರಲೇಬೇಕು ಎನ್ನುವವರಿಗೆ ಕುಂದಾನಗರಿಯ ಕಲ್ಯಾಣಮಂಟಪ ಹಾಗೂ ಹೋಟೆಲ್‌ಗಳು ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ನಷ್ಟದಲ್ಲಿರುವ ಛಾಯಾಗ್ರಹಣ ಹಾಗೂ ಶಾಮಿಯಾನ ಉದ್ಯಮದ ಆರ್ಥಿಕ ಅಭಿವೃದ್ಧಿಗೆ ಊರುಗೋಲಾಗಿದೆ.

    ಲಾಕ್‌ಡೌನ್‌ನಿಂದಾಗಿ ವಿವಾಹ ಮುಂದೂಡಿಕೆಯಿಂದ ಬೇಸರದಲ್ಲಿದ್ದ ವಧು-ವರರು ಇದೀಗ ಅದ್ದೂರಿ ಆಯೋಜನೆಯಾಗದಿದ್ದರೂ ಸರಳ ಮದುವೆ ಮೂಲಕ ಹೊಸಬಾಳಿಗೆ ಕಾಲಿಡುತ್ತಿದ್ದಾರೆ. ಸಂಗೀತ, ಬ್ಯಾಂಡ್ ಹಾಗೂ ಮೆರವಣಿಗೆ ಸದ್ದುಗದ್ದಲವಿಲ್ಲದೆ ನಡೆಯುವ ಮದುವೆಗಳು ಹೊಸ ಟ್ರೆಂಡ್ ಸೃಷ್ಟಿಸಿವೆ.

    ಕಲ್ಯಾಣ ಮಂಟಪ, ದೇವಸ್ಥಾನಗಳಲ್ಲಿ 50ಕ್ಕೂ ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಸರ್ಕಾರ ಕರೊನಾ ನಿಯಂತ್ರಣದ ಮಾರ್ಗಸೂಚಿ ಹೊರಡಿಸಿದೆ. ಇದೇ ಅವಕಾಶ ಬಳಸಿಕೊಂಡು ಬಹುತೇಕ ಪಾಲಕರು ಕಡಿಮೆ ಖರ್ಚಿನಲ್ಲಿ ತಮ್ಮ ಮನೆಯಲ್ಲಿಯೇ ಮಕ್ಕಳ ಮದುವೆ ಮಾಡುತ್ತಿದ್ದಾರೆ. ಹಣವಂತರು ಪ್ಯಾಕೇಜ್ ಘೋಷಿಸಿರುವ ಹೋಟೆಲ್ ಹಾಗೂ ಕಲ್ಯಾಣಮಂಟಪಗಳ ಮೊರೆ ಹೋಗಿದ್ದು, ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚೇರ್‌ಗಳನ್ನು ಅಳವಡಿಸುವ ಜತೆಗೆ ಮದುವೆಗೆ ಬಂದವರಿಗೆ ಎಲ್ಲರಿಗೂ ಮಾಸ್ಕ್ ವಿತರಣೆ ಮಾಡುತ್ತಿರುವುದು ವಿಶೇಷ. ಈ ವರ್ಷ ಅತಿ ಹೆಚ್ಚು ಅಂದರೆ 12 ಮುಹೂರ್ತಗಳಿದ್ದ ಮೇ ತಿಂಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿದ್ದರಿಂದ ಕೇವಲ 8 ವಿವಾಹ ಮುಹೂರ್ತಗಳಿರುವ ಜೂನ್ ತಿಂಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ನಡೆಯುತ್ತಿವೆ. ಇನ್ನೂ ಜೂ.11ರಂದು ಜಿಲ್ಲಾದ್ಯಂತ ಒಂದೇ ದಿನ 120ಕ್ಕೂ ಹೆಚ್ಚು ವಿವಾಹಗಳು ನಡೆದಿವೆ ಎನ್ನಲಾಗಿದೆ.

    ಮತ್ತೆ ಬಂತು ಬೇಡಿಕೆ

    ಲಾಕ್‌ಡೌನ್ ಅವಧಿಯಲ್ಲಿ ಜನತೆ ಸರಳ ವಿವಾಹಗಳಿಗೆ ಮೊರೆ ಹೋಗಿದ್ದರಿಂದ ಛಾಯಾಗ್ರಹಣ ಹಾಗೂ ಶಾಮಿಯಾನ ಉದ್ಯಮಕ್ಕೆ ಹೊಡೆತ ಬಿದ್ದಿತ್ತು. ಆದರೆ, ಇದೀಗ ಸರ್ಕಾರ ವಿವಾಹ ಹಾಗೂ ಗೃಹಪ್ರವೇಶ ಸಮಾರಂಭಗಳಿಗೆ ದೈಹಿಕ ಅಂತರ ಹಾಗೂ ಕನಿಷ್ಠ 50 ಅತಿಥಿಗಳು ಪಾಲ್ಗೊಳ್ಳಲು ಅನುಮತಿ ನೀಡಿದ್ದರಿಂದ ಸಮಾರಂಭಗಳಿಗೆ ಶಾಮಿಯಾನ ಹಾಗೂ ಊಟದ ವ್ಯವಸ್ಥೆ ಮಾಡಲು ಕ್ಯಾಟರ್ಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಮಮತಾ ಶಾಮಿಯಾನ ಮಾಲೀಕ ಚಂದ್ರಶೇಖರ ಜೈನರ್.

    ಮುಂದೂಡಬೇಕಿದ್ದ ವಿವಾಹ ಸಮಾರಂಭಗಳನ್ನು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ನಡೆಸಲು ಕ್ರಮವಹಿಸಿರುವುದು ಖುಷಿ ತಂದಿದೆ.
    | ರಾಹುಲ್ ದೊಡಮನಿ ಬೆಳಗಾವಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರ

    ಲಾಕ್‌ಡೌನ್ ಸಡಿಲಿಕೆ ಹಾಗೂ ಸಮಾರಂಭಗಳಿಗೆ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿ, ಸರ್ಕಾರ ಅವಕಾಶ ನೀಡಿದ್ದರಿಂದ ಮುಂದೂಡಿದ್ದ ಮದುವೆಗಳೆಲ್ಲವೂ ಇದೀಗ ನಿಶ್ಚಿಯವಾಗುತ್ತಿವೆ. ಇದರಿಂದ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿಗೆ ಆರ್ಡರ್ ದೊರೆಯುತ್ತಿರುವುದು ಸಂತಸ ತಂದಿದೆ.
    | ಬಿ.ಬಿ.ಪಾಟೀಲ ಫೋಟೋ ಸ್ಟುಡಿಯೋ ಮಾಲೀಕ, ಬೆಳಗಾವಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts