More

    ಬಾಕಾಹು: ಬಾಳೆಕಾಯಿ ಹುಡಿ ಕ್ರಾಂತಿ

    | ವೇಣುವಿನೋದ್ ಕೆ.ಎಸ್. ಮಂಗಳೂರು

    ಬಾಕಾಹು… ಇದು ಕೃಷಿ ವಲಯದಲ್ಲಿ ಸದ್ಯ ಟ್ರೆಂಡ್ ಆಗುತ್ತಿರುವ ಪದ. ಇದಕ್ಕೆ ವಿಶೇಷ ಅರ್ಥವೇನೂ ಇಲ್ಲ. ಬಾಳೆಕಾಯಿ ಹುಡಿ ಎನ್ನುವುದರ ಹೃಸ್ವರೂಪ, ಅಷ್ಟೇ. ಆದರೆ ಇದರಲ್ಲಿ ಆಗುತ್ತಿರುವ ಪ್ರಯೋಗ ಹಾಗೂ ಕ್ರಾಂತಿ ನೋಡಿದರೆ ಅಡುಗೆ ಮನೆಯಲ್ಲಿ ಇತರ ವಸ್ತುಗಳ ಜತೆಗೆ ಕಾಯಂ ಸ್ಥಾನ ಪಡೆಯುವುದರಲ್ಲಿ ಹೆಚ್ಚೇನೂ ಕಾಲ ಕಾಯಬೇಕಿಲ್ಲ ಎಂಬಂತಿದೆ. ಬಾಳೆಕಾಯಿಯ ಪುಡಿಯಲ್ಲಿ ಈಗಾಗಲೆ ಚಪಾತಿ, ಇಡ್ಲಿ, ದೋಸೆ, ಅಪ್ಪಂ, ಶಂಕರಪೋಳಿ, ಗೋಳಿಬಜೆ, ಡ್ರೖೆ ಜಾಮೂನ್, ರೊಟ್ಟಿ, ರವೆಯ ಕೇಸರಿಬಾತ್ ಹೀಗೆ ತರಹೇವಾರಿ ಪ್ರಯೋಗಗಳಾಗಿವೆ, ಎಲ್ಲವನ್ನೂ ಮಾಡಿದ ಜನರು ಇದು ರುಚಿಕರವಷ್ಟೇ ಅಲ್ಲ, ಆರೋಗ್ಯಪೂರ್ಣವೂ ಹೌದು. ಗೋಧಿಹಿಟ್ಟಿನಂತೆ ಗ್ಲೂಟೆನ್ ಭಯವಿಲ್ಲ. ಅಕ್ಕಿಪುಡಿಗೆ ಪರ್ಯಾಯ ಎಂಬಂತಹ ಪ್ರತಿಕ್ರಿಯೆ ಬಂದಿದೆ. ಅಭಿವೃದ್ಧಿ ಪತ್ರಕರ್ತ, ಕೃಷಿಯಲ್ಲಿ ಹಲವು ವಿಧದ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಲೇ ಇರುವ ಶ್ರೀಪಡ್ರೆ ಈ ‘ಬಾಕಾಹು’ ಅಭಿಯಾನ ನಡೆಸುತ್ತಿದ್ದಾರೆ. ಜೂನ್ ಮೂರನೇ ವಾರದಲ್ಲಷ್ಟೇ ಕರ್ನಾಟಕದಲ್ಲಿ ಇದರದ್ದೊಂದು ಕಿಡಿ ಹಾರಿದ್ದಷ್ಟೇ. ಆಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ಕರಾವಳಿ, ಮಲೆನಾಡು, ಬಯಲುಸೀಮೆಯ ಹಲವು ಕೃಷಿಕರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ. ಸೀಸನ್​ನಲ್ಲಿ ದರ ಕಡಿಮೆಯಾಗಿ ಕಂಗೆಡುವ ಬಾಳೆಕಾಯಿ ಕೃಷಿಕರಿಗೆ ಇದೊಂದು ಹೊಸ ಪರ್ಯಾಯವನ್ನು ಸೃಷ್ಟಿಸಿದರೆ ಬಳಕೆದಾರರಿಗೆ ಆರೋಗ್ಯಪೂರ್ಣವಾದ ಆಹಾರ.

    ಪ್ರಯೋಗಶೀಲರು: ಉತ್ತರ ಕನ್ನಡ ಜಿಲ್ಲೆ ಶಿರಸಿ ಬಳಿ ಕಾನಳ್ಳಿಯ ಪ್ರಭಾಕರ ಹೆಗಡೆ ಮತ್ತು ವಸುಂಧರಾ ದಂಪತಿ ‘ಬಾಕಾಹು’ ತಯಾರಿಸಿ ಆನ್​ಲೈನ್ ಮೂಲಕ ಗ್ರಾಹಕರಿಂದ ಆರ್ಡರ್ ಪಡೆದು ಕೊರಿಯರ್ ಮೂಲಕ ತಲುಪಿಸುವ ಹೊಸ ಜಾಲ ರೂಪಿಸಿಕೊಳ್ಳುತ್ತಿದ್ದಾರೆ. ತುಮಕೂರಿನ ನಯನ ಆನಂದ್, ಸುಬ್ರಾಯ ಹೆಗ್ಡೆ ಊರುತೋಟ, ಉಮಾ ಪ್ರಸನ್ನ, ಆಶ್ರಿತಾ, ವಸಂತಿ ಪಟಿಕಲ್ಲು ಹಲವು ತಿಂಡಿ ಪ್ರಯೋಗ ಬಾಕಾಹುವಿನಿಂದ ಮಾಡಿದ್ದಾರೆ. ಕೋಟೆಗದ್ದೆ ಸಂಸ್ಕರಣಾ ಕೇಂದ್ರದವರು ದೊಡ್ಡ ಮಟ್ಟಿನಲ್ಲಿ ಬಾಕಾಹು ಸಂಸ್ಕರಣೆಗೆ ಮುಂದಾಗಿದ್ದಾರೆ.

    ತಯಾರಿ ಹೇಗೆ?: ಯಾವುದೇ ಬಾಳೆಕಾಯಿಯಿಂದ ಬಾಕಾಹು ಮಾಡಬಹುದು. ಮೊದಲು ಸಿಪ್ಪೆ ತೆಗೆಯಿರಿ. ಕೂಡಲೆ ಅದು ಆಕ್ಸಿಡೈಸ್ ಆಗಿ ಬಣ್ಣ ಕಪ್ಪಾಗುವುದನ್ನು ತಡೆಯಲು ಮೊದಲೇ ಒಂದು ಲೀಟರ್ ನೀರಿಗೆ ಕಾಲು ಲೀಟರ್ ಅನ್ನ ಬೇಯಿಸಿ ಬಸಿದ ತೆಳಿ (ಗಂಜಿಯ ನೀರು) ಮತ್ತು 15 ಗ್ರಾಮ್ ಉಪ್ಪು ಕದಡಿ ಇಟ್ಟುಕೊಳ್ಳಿ. ಸಿಪ್ಪೆ ಸುಲಿದ ಕೂಡಲೆ ಬಾಳೆಕಾಯಿಯನ್ನು ಮುಳುಗಿಸಿ. ಗಂಜಿ ನೀರು ಇಲ್ಲವಾದಲ್ಲಿ ನೀರಿಗೆ ಸ್ವಲ್ಪ ಮಜ್ಜಿಗೆ ಸೇರಿಸಿಯೂ ಪ್ರಯೋಗ ಮಾಡಬಹುದು. ಸಿಪ್ಪೆ ತೆಗೆಯದೆಯೂ ಹುಡಿ ಮಾಡಬಹುದು. ದ್ರಾವಣದಿಂದ ತೆಗೆದು ಸ್ಲೈಸರ್ ಬಳಸಿ ಚಿಪ್ಸಿನಂತಹ ತುಂಡು ಮಾಡಿಕೊಳ್ಳಿ. ಡ್ರೖೆಯರಿನಲ್ಲಿ ಒಣಗಿಸಿ. ಬೇಸಿಗೆಯಲ್ಲಾದರೆ ಬಿಸಿಲಲ್ಲೇ ಒಣಗಿಸಬಹುದು. ಸರಿಯಾಗಿ ಒಣಗಿ ಆರಿದ ನಂತರ ಮಿಕ್ಸಿ ಬಳಸಿ ಹುಡಿ ಮಾಡಬೇಕು.

    ಹೈನೋದ್ಯಮದಲ್ಲಿ ಲಾಭ: ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದೆ. ಉದ್ಯಮವಾಗಿ ಕೈಗೊಂಡರೆ ಹಲವರಿಗೆ ಉದ್ಯೊಗ ನೀಡಬಹುದು. ಯುವ ಸಮುದಾಯ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರೆ ಕ್ರಾಂತಿಯನ್ನೇ ಮಾಡಬಹುದು. ಕೃಷಿ ಜತೆಗೆ ಹೈನೋದ್ಯಮ ಕೈಗೊಂಡರೆ ಕೈ ತುಂಬಾ ಸಂಪಾದಿಸಬಹುದು. ಮುಂದಿನ ಪೀಳಿಗೆಗೆ ಕೃಷಿಯ ಬಗ್ಗೆ ಆಸಕ್ತಿಯನ್ನೂ ಬೆಳೆಸಿದಂತಾಗುತ್ತದೆ.

    ಮರು ಆವಿಷ್ಕಾರ: ಕೇರಳದಲ್ಲಿ ನೇಂದ್ರ ಬಾಳೆಕಾಯಿಯ ಪುಡಿಯನ್ನು ಮಕ್ಕಳಿಗೆ ನೀಡುತ್ತಾರೆ. ಯಾವುದೇ ಬಾಳೆಕಾಯಿಯಿಂದಲೂ ಪುಡಿ ತಯಾರಿಸಬಹುದು ಎನ್ನುವುದನ್ನು ಈಗಷ್ಟೇ ನಾವು ತಿಳಿದುಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಶ್ರೀ ಪಡ್ರೆ. ಕೇರಳದ ಆಲೆಪ್ಪಿಯ ಜಯಾಂಬಿಕೆ ಎಂಬ ಮಹಿಳೆ ನೇಂದ್ರ ಕಾಯಿ ಖರೀದಿಸಿ, ಅಲ್ಲಿನ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ)ದ ಇನ್​ಕ್ಯುಬೇಶನ್ ಕೇಂದ್ರವನ್ನು ಬಳಸಿಕೊಂಡು ಬಾಳೆಕಾಯಿ ಪುಡಿ ತಯಾರಿಸಿ 6 ತಿಂಗಳಲ್ಲಿ 1 ಕ್ವಿಂಟಾಲ್ ಮಾರಾಟ ಮಾಡಿದ್ದರು. ಈ ಮಾಹಿತಿಯನ್ನು ‘ಎನಿಟೈಂ ವೆಜಿಟೆಬಲ್’ ವಾಟ್ಸ್​ಆಪ್ ಗ್ರೂಪ್​ನಲ್ಲಿ ಶ್ರೀಪಡ್ರೆ ಹಾಕಿದ್ದರು. ಇದನ್ನು ಗಮನಿಸಿದ ತುಮಕೂರಿನ ನಯನ ಆನಂದ್ ಆಲೆಪ್ಪಿಯ ಕೇಂದ್ರದ ಮುಖ್ಯಸ್ಥೆ ಜೆಸ್ಸಿ ಜಾರ್ಜ್ ಅವರನ್ನು ಸಂರ್ಪಸಿ ಇದರ ವಿಧಾನ ಅರಿತುಕೊಂಡರು. ಅಲ್ಲಿಂದ ಹಲವರು ಪ್ರಶ್ನೆ ಹಾಕಿದರು, ಉತ್ತರ ಹುಡುಕುತ್ತ ಹೋದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಮನೆಯಲ್ಲೇ ಪುಡಿಯನ್ನು ತಯಾರಿಸಬಹುದು. ಡ್ರೖೆಯರ್ ಇದ್ದವರಿಗೆ ಇನ್ನೂ ಸುಲಭ. ಉತ್ತರ ಕನ್ನಡದ ಬಹಳ ಮನೆಗಳಲ್ಲಿ ಡ್ರೖೆಯರ್ ಇದ್ದು ಅವರಿಗೆ ಇದು ಬಹಳ ಅನುಕೂಲವಾಗಿ ಪರಿಣಮಿಸಿದೆ. ಆ ಭಾಗದಲ್ಲಿ ಅನೇಕ ಮನೆಗಳಿಗೆ ಈಗ ಬಾಕಾಹು ಕಾಲಿರಿಸಿದೆ, ತರಹೇವಾರಿ ಅಡುಗೆಯೂ ಆಗುತ್ತಿದೆ ಎನ್ನುತ್ತಾರೆ ಪಡ್ರೆ.

    ಹಲವು ವಿಟಮಿನ್, ಮೆಗ್ನೀಶಿಯಂ, ಪೊಟಾಶಿಯಂನಂತಹ ಸತ್ವಭರಿತ ಆಹಾರ ಬಾಳೆಕಾಯಿ. ಇದರ ನಾರು ಜೊತೆಗಿದ್ದರೆ ಇನ್ನಷ್ಟು ಒಳ್ಳೆಯದು. ಕರಾವಳಿ, ಮಲೆನಾಡಿನ ಮಹಿಳೆಯರು ಕೈಗೊಂಡ ಬಾಳೆಕಾಯಿ ಹುಡಿಯ ಕಾರ್ಯ ಅಭಿನಂದನಾರ್ಹ. ಈ ಕ್ರಾಂತಿ ರಾಜ್ಯಕ್ಕೆ, ಸಾಧ್ಯವಾದರೆ ದೇಶಕ್ಕೂ ಹಬ್ಬಬೇಕು, ನಮ್ಮ ಸಂಸ್ಥೆಯಿಂದ ಇದಕ್ಕೆ ಎಲ್ಲ ಸಹಕಾರ ನೀಡುವೆ.

    | ಡಾ.ಉಮಾ ಸುಬ್ಬರಾಯ ನಿರ್ದೇಶಕಿ, ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ, ತಿರುಚಿನಾಪಳ್ಳಿ, ತಮಿಳುನಾಡು

    ಶ್ರುತಿಗೆ ಶಾಕ್, ಕಾಪುಸಿಗೆ ಮಣೆ: ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts