More

    ಸೂಕ್ತ ಸಮಯದಲ್ಲಿ ಜನ ಸೇವೆ: ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ್

    ಉಡುಪಿ: ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸೇವೆಗಳನ್ನು ವಿಳಂಬ ಮಾಡದೆ, ಸೂಕ್ತ ಸಮಯದಲ್ಲಿ ಒದಗಿಸಬೇಕು. ಆಡಳಿತ ಸುಧಾರಣೆಯಲ್ಲಿ ಪ್ರಗತಿ ಸಾಧಿಸುವ ಜತೆಗೆ ಪಾರದರ್ಶಕತೆ ಕಾಪಾಡುವಲ್ಲಿಯೂ ಅಧಿಕಾರಿಗಳು ಕಾರ್ಯೋನ್ಮ್ಮುಖರಾಗಬೇಕು ಎಂದು ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ್ ಕಿವಿಮಾತು ಹೇಳಿದರು.

    ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಬಾಕಿ ಇರುವ ಲೋಕಾಯುಕ್ತಕ್ಕೆ ಸಂಬಂಧಿಸಿದ ಪ್ರಕರಣಗಳ ಪರಿಶೀಲನೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಕೆರೆ, ರಸ್ತೆ ಅತಿಕ್ರಮಣ ಪ್ರಕರಣಗಳನ್ನು ಗುರುತಿಸಿ ವಿಲೇವಾರಿ ಮಾಡಿ. ತಮ್ಮ ಕಚೇರಿಗಳಲ್ಲಿ ಇಂತಹ ಪ್ರಕರಣಗಳಿದ್ದಲ್ಲಿ ಲೋಕಾಯುಕ್ತ ಕಚೇರಿಗೆ ವಿವರ ಮತ್ತು ಛಾಯಾಚಿತ್ರವನ್ನು ಫೆಬ್ರವರಿ ಅಂತ್ಯದೊಳಗೆ ನೀಡುವಂತೆ ಸೂಚಿಸಿದರು. ಭೂ ಸ್ವಾಧೀನ ಸಂದರ್ಭ ನಿಯಮ ಅನುಸರಿಸಿ, ಸಂಬಂಧಿತರಿಗೆ ಸೂಕ್ತ ಪರಿಹಾರ ವಿತರಿಸಿ. ನೆರೆಯಿಂದ ಮನೆ ಹಾನಿಯಾದವರಿಗೆ ಪರಿಹಾರ ವಿತರಣೆ ಸಂದರ್ಭ ಅವ್ಯವಹಾರಗಳಿಗೆ ಆಸ್ಪದ ನೀಡಬೇಡಿ ಎಂದೂ ಅವರು ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನ ಮಳೆ ಹಾನಿ ಸಂಬಂಧಿಸಿ 104 ಪ್ರಕರಣಗಳಲ್ಲಿ 62.23 ಲಕ್ಷ ರೂ. ಪರಿಹಾರ ಮೊತ್ತವನ್ನು ನೇರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು. ಕಚೇರಿಗಳಲ್ಲಿ ಕಡತಗಳನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಿಕೊಂಡಿರಬೇಕು. ಇದರಿಂದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದ ಸಂದರ್ಭ ಕಾಲಮಿತಿಯಲ್ಲಿ ವರದಿ ಪಡೆದು, ಪ್ರಕರಣ ಇತ್ಯರ್ಥಪಡಿಸಲು ಸಾಧ್ಯವಾಗಲಿದೆ ಎಂದು ಉಪ ಲೋಕಾಯುಕ್ತರು ತಿಳಿಸಿದರು.
    ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಮಂಗಳೂರಿನ ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ, ಡಿಎಫ್‌ಒ ಆಶೀಶ್ ರೆಡ್ಡಿ ಉಪಸ್ಥಿತರಿದ್ದರು.

    ಆಡಿಟ್ ಅಕ್ಷೇಪಣೆ ಬಗ್ಗೆ ಕ್ರಮಕ್ಕೆ ಸೂಚನೆ
    ಆಡಿಟ್ ಅಕ್ಷೇಪಣೆ ಪಾಲಿಸದಿರುವ ಕುರಿತು ಗ್ರಾಪಂ ಪಿಡಿಒ, ಕಾರ್ಯದರ್ಶಿಗಳ ವಿರುದ್ಧ ಸಾಕಷ್ಟು ದೂರುಗಳು ದಾಖಲಾಗಿವೆ. ಆಡಿಟ್ ವರದಿಯಲ್ಲಿ ಸ್ಪಷ್ಟವಾಗಿ ನಷ್ಟದ ಬಾಬ್ತು ವಸೂಲಿ ಮಾಡುವಂತೆ ಸೂಚನೆ ನೀಡಿದ್ದರೂ ವಸೂಲಿ ನಡೆಯುತ್ತಿಲ್ಲ ಎಂದು ಉಪ ಲೋಕಾಯುಕ್ತ ಬಿ.ಎಸ್ ಪಾಟೀಲ್ ಹೇಳಿದರು. ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts