More

    ಬಿ.ಸಿ.ರೋಡ್-ಉಪ್ಪಿನಂಗಡಿ ಹೆದ್ದಾರಿ ದುರಸ್ತಿ ನಿಧಾನಗತಿ

    ಮಂಗಳೂರು: ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ಮರು ಟೆಂಡರ್ ಪ್ರಕ್ರಿಯೆ ನಿಧಾನಗೊಂಡಿರುವ ನಡುವೆಯೇ, ಕಿತ್ತು ಹೋದ ರಸ್ತೆಯಿಂದ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗತೊಡಗಿದೆ.

    ಹೆದ್ದಾರಿ ರಿಪೇರಿ/ನಿರ್ವಹಣೆಗೆ ಒಂಬತ್ತು ತಿಂಗಳ ಟೆಂಡರ್ ಅಂತಿಮಗೊಂಡು ಕೆಲಸ ಶುರು ಮಾಡಿದ್ದರೂ, ಗುತ್ತಿಗೆದಾರರು ಕೆಲಸಕ್ಕೆ ವೇಗ ನೀಡಿಲ್ಲ. ಕೆಲವು ಕಡೆ ಮಾಡಲಾದ ಡಾಂಬರು ತೇಪೆ ಇತ್ತೀಚಿನ ಮಳೆಗೆ ಮತ್ತೆ ಕಿತ್ತುಹೋಗಿದೆ. ನರಹರಿ ಪರ್ವತ ಕ್ರಾಸ್, ಕಲ್ಲಡ್ಕ, ಮಾಣಿ, ಬುಡೋಳಿ, ಗಡಿಯಾರ, ಪೆರ್ನೆ ಮುಂತಾದೆಡೆ ಹೆದ್ದಾರಿ ತೀರ ನಾದುರಸ್ತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

    ನಿತ್ಯ ಸಂಚರಿಸುವವರು, ಖಾಸಗಿ/ಕೆಎಸ್‌ಆರ್‌ಟಿಸಿ ಬಸ್ ಚಾಲಕರು, ಪ್ರಯಾಣಿಕರು, ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವವರು ಹೆದ್ದಾರಿ ಪ್ರಾಧಿಕಾರಕ್ಕೆ ಶಾಪ ಹಾಕತೊಡಗಿದ್ದಾರೆ. ನರಹರಿ ಪರ್ವತ ಕ್ರಾಸ್‌ನಂಥ ಜಾಗದಲ್ಲಿ ರಸ್ತೆಯೂ ಅಗಲವಾಗಿಲ್ಲದೆ ಇರುವುದು ಒಂದೆಡೆಯಾದರೆ ಹೆದ್ದಾರಿಯಲ್ಲಿರುವ ಕಡಿದಾದ ಹೊಂಡಗಳಿಂದ ಬೃಹತ್ ಟ್ರಕ್‌ಗಳು ನಿಧಾನವಾಗಿ ಸಂಚರಿಸುತ್ತವೆ. ಕಾರು ಮತ್ತಿತರ ವಾಹನಗಳು, ಬಸ್‌ಗಳು ಸಂಚರಿಸುವುದು ನಿಧಾನವಾಗಿ ದಟ್ಟಣೆ ಉಂಟಾಗುತ್ತಿದೆ.

    ಹೆದ್ದಾರಿ ಪ್ರಾಧಿಕಾರ ಹೇಳುವುದೇ ಬೇರೆ
    ಹೆದ್ದಾರಿ ಪ್ರಾಧಿಕಾರದವರು ಹೇಳುವುದೇ ಬೇರೆ. ಲಾರಿ ಡಿಕ್ಕಿಯಾಗಿ ಫೇವರ್ ಮೆಷಿನ್ ರಿಪೇರಿಯಾಗಲು ಸಮಯ ಬೇಕಾಯಿತು, ಮಧ್ಯೆ ಮಳೆ ಬಂದಿದೆ, ಹಾಗಾಗಿ ವಿಳಂಬಗೊಂಡಿದೆ, ಆದರೆ ಈಗ ಕೆಲಸ ಚುರುಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ದುರಸ್ತಿಯ ಟೆಂಡರ್ ಕರೆದು ಮೊದಲ ತಿಂಗಳು ಕೆಲಸ ಶುರು ಮಾಡಿದರೂ ಕೆಲಸಕ್ಕೆ ಮಳೆ ಅಡ್ಡಿಯಾಯಿತು. ಪ್ರಸ್ತುತ ಮಾಣಿ-ಉಪ್ಪಿನಂಗಡಿ ಮಧ್ಯೆ ದುರಸ್ತಿ ಕಾರ್ಯ ಚುರುಕುಗೊಂಡಿದೆ. ಒಂಬತ್ತು ತಿಂಗಳ ಟೆಂಡರ್ ಅವಧಿಯಿದ್ದರೂ ಮುಂದಿನೆರಡು ತಿಂಗಳಲ್ಲಿ ಪೂರ್ತಿಯಾಗಿ ರಸ್ತೆ ಡಾಂಬರು ಮೇಲ್ಪದರ ಹಾಕಲಾಗುವುದು ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಶಿಶು ಮೋಹನ್ ಹೇಳುತ್ತಾರೆ.

    ಪರಿಹಾರ ನೀಡಿಕೆ ಪ್ರಕ್ರಿಯೆ ನಿಧಾನ
    ಬಿ.ಸಿ.ರೋಡ್-ಪೆರಿಯಶಾಂತಿ ಮಧ್ಯೆ ಮರು ಟೆಂಡರ್ ಅಂತಿಮಗೊಳ್ಳಲು ಹಾಸನದ ವಿಶೇಷ ಭೂಸ್ವಾಧೀನಾಧಿಕಾರಿ ಅಂತಿಮ ಭೂ ಸ್ವಾಧೀನ ಪರಿಹಾರ ಪ್ರಕಟಣೆ ಹೊರಡಿಸುವುದು ಬಾಕಿ ಇದೆ. ಅದಕ್ಕಾಗಿ ಮಂಗಳೂರು ಹೆದ್ದಾರಿ ಪ್ರಾಧಿಕಾರ ಕಚೇರಿಯಿಂದ ಕೆಲಸ ತ್ವರಿತಗೊಳಿಸುವುದಕ್ಕೆಂದೇ ಹಾಸನ ಭೂಸ್ವಾಧೀನಾಧಿಕಾರಿ ಕಚೇರಿಗೆ ಐವರು ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ. ಹಾಗಾದರೂ ಕೆಲಸ ಆಗುತ್ತದೆಯೇ ನೋಡಬೇಕು ಎಂದು ಶಿಶುಮೋಹನ್ ಹೇಳುತ್ತಾರೆ.

    ಟೆಂಡರ್ ಕೆಲಸಕ್ಕೆ ನೂರೆಂಟು ವಿಘ್ನಗಳಿವೆ. ನಿಧಾನವಾಗುತ್ತಿದೆ ಎನ್ನುವ ವಿಚಾರ ನಿಜ ಇರಬಹುದು, ಆದರೆ ಕನಿಷ್ಠ ರಿಪೇರಿಯನ್ನಾದರೂ ಬೇಗ ಮುಗಿಸಬೇಕಲ್ವೇ? ನಿತ್ಯ ಆ ಮಾರ್ಗದಲ್ಲಿ ಸಂಚಾರ ಅಸಾಧ್ಯ, ಇನ್ನಾದರೂ ದುರಸ್ತಿ ಕೆಲಸ ತ್ವರಿತಗೊಳ್ಳಲಿ.
    ಹರಿಪ್ರಸಾದ್ ಶೇವಿರೆ, ಪ್ರಯಾಣಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts